ಹಿನ್ನೀರು ಪ್ರದೇಶದ ವಿಹಾರ ಮತ್ತು ಕಾಡೊಳಗಿನ ವಿಹಾರ ಇವೆರಡೂ ಕಬಿನಿ ಸಫಾರಿಯ ವೈಶಿಷ್ಟ್ಯ. ಕಬಿನಿ ವನ್ಯಲೋಕದ ಸಮೃದ್ಧತೆಯನ್ನು ಕಣ್ತುಂಬಿಕೊಳ್ಳಲು ಹಿಂದಿನಿಂದಲೂ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಈ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಭಗೀರ ಅಲಿಯಾಸ್ ಬ್ಲ್ಯಾಕ್ ಪ್ಯಾಂಥರ್.
ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿ ಖ್ಯಾತಿಯನ್ನು ಗಳಿಸುವಂತೆ ಮಾಡಿದ್ದು ಈಗ ವನ್ಯಪ್ರಿಯರ ಮನೆ ಮಾತಾಗಿರುವ ಭಗೀರ ಅಲಿಯಾಸ್ ಕಪ್ಪುಚಿರತೆ.
ಅಪರೂಪದಲ್ಲಿ ಅಪರೂಪ ಎಂಬಂತೆ ಕಾಣುವ ಈ ಕಪ್ಪು ಚಿರತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಸಫಾರಿ ವಲಯದ ಮತ್ತೊಂದು ವಿಶೇಷ. ಕಬಿನಿಯ ಭಗೀರ ಎಂದೇ ಪ್ರಸಿದ್ಧಿಯನ್ನು ಪಡೆದ ಕಡುಕಪ್ಪು ಬಣ್ಣದ ಈ ಚಿರತೆ ಸುಮಾರು ಏಳೆಂಟು ವರ್ಷಗಳ ಹಿಂದೆ ಕಾಕನಕೋಟೆಯ ಸಫಾರಿಯ ವೇಳೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯನ್ನುಂಟು ಮಾಡಿತ್ತು. ಆಗಿನ್ನು ಅದಕ್ಕೆ ೨-೩ ವರ್ಷ ವಯಸ್ಸು. ಜನ, ವಾಹನಗಳನ್ನು ಕಂಡರೆ ಪೊದೆಯೊಳಗೆ ಓಡಿ ಹೋಗುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಭಗೀರ ಧೀರ, ಶೂರನಾಗಿ ಧೈರ್ಯಶಾಲಿ ಎನಿಸಿಕೊಂಡಿದ್ದಾನೆ. ಈಗ ಆತ ತನ್ನತ್ತ ಸಾವಿರಾರು ಫ್ಲ್ಯಾಷ್ ಲೈಟ್‌ಗಳನ್ನು ಹರಿ ಬಿಡುವ ಛಾಯಾಗ್ರಾಹಕರನ್ನು ದಿಟ್ಟಿಸಿ ನೋಡಬಲ್ಲ. ತನ್ನ ಸಂಗಾತಿ ಜತೆ (ಸಾಯ ಮತ್ತು ಕ್ಲಿಯೋಪಾತ್ರ ಜೋಡಿ ಎಂದು ಕ್ಯಾಮೆರಾಮೆನ್ ಒಬ್ಬರು ಇಟ್ಟ ಹೆಸರು) ವಿಹರಿಸುತ್ತಲೇ ಯಾರ ಹಂಗೂ ಇಲ್ಲದೆ ಓಡಾಡಬಲ್ಲ.
ಕಾಕನ ಕೋಟೆಯ ಭಗೀರನ ಚಿತ್ರಗಳು ಸಂಚಲನ ಮೂಡಿಸುತ್ತಿದ್ದಂತೆಯೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚತೊಡಗಿತು. ಕಪ್ಪು ಚಿರತೆಯನ್ನು ಕಾಣುವ ಹಂಬಲದಿಂದ ದೇಶ ವಿದೇಶಗಳಿಂದ ಪ್ರವಾಸಿಗರು ಬರಲಾರಂಭಿಸಿದರು. ಇವರಲ್ಲಿ ವಾರಗಟ್ಟಲೆ ಕಾದರೂ ಭಗೀರನನ್ನು ಕಾಣದೆ ವಾಪಸಾದವರಿದ್ದಾರೆ. ಮೊದಲ ಭೇಟಿಯಲ್ಲೇ ಕಂಡು ಸಂಭ್ರಮಿಸಿದವರಿದ್ದಾರೆ. ತಿಂಗಳುಗಟ್ಟಲೆ ಇಲ್ಲಿಯೇ ಠಿಕಾಣಿ ಹೂಡಿ ಭಗೀರನ ಮತ್ತವನ ಸಂಗಾತಿಯ ಫೋಟೋ ತೆಗೆದು ಸಂಭ್ರಮಿಸಿದ ವನ್ಯಜೀವಿ ಛಾಯಾಗ್ರಾಹಕರಿದ್ದಾರೆ. ಒಟ್ಟಿನಲ್ಲಿ ಭಗೀರ ಈಗ ಕಾಕನಕೋಟೆಯ ರಾಯಭಾರಿ, ಐಕಾನ್ ( ಹೆಗ್ಗುರುತು) ಎಲ್ಲವೂ ಹೌದು.
ಕಪ್ಪು ಬಣ್ಣ ಏಕೆ
ಭಗೀರ ಸಾಮಾನ್ಯ ಜಾತಿಗೆ ಸೇರಿದ ಚಿರತೆ. ಆದರೆ ಅದರ ದೇಹದಲ್ಲಿ ‘ಮಲನಿಸಂ’ ಅಂಶದ ವ್ಯತ್ಯಾಸದಿಂದ ದೇಹದ ಮೇಲೊದಿಕೆಯ ಬಣ್ಣ ಕಪ್ಪಾಗಲು ಕಾರಣವಾಗಿದೆ. ದಟ್ಟ ಅಡವಿಯಲ್ಲಿ ಸೂರ‌್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಕೆಲವು ಚಿರತೆಯ ಚರ್ಮ ಸಹಜ ಬಣ್ಣಕ್ಕೆ ತಿರುಗದೆ ಕಪ್ಪಾಗಿದೆ. ಉಳಿದಂತೆ ಬೇರೆ ಚಿರತೆಗಳಿಗೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ತಜ್ಞರ ಮಾತು.
ದಿ ರಿಯಲ್ ಬ್ಲ್ಯಾಕ್ ಪ್ಯಾಂಥರ್
ಕಬಿನಿಯ ಭಗೀರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ ( ಖಚ್ಢ ಒ್ಠ್ಞಜ). ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಪಟೌಡಿ ಕುಟುಂಬದ ಸಂಬಂಧಿಯೂ ಆದ ಶಾದ್ ಬಿನ್ ಜಂಗ್ ಇವರ ಪುತ್ರ ಶಾಜ್ ಜಂಗ್ ನಾಗರಹೊಳೆ ಪ್ರದೇಶದಲ್ಲಿ ತನ್ನದೇ ಇಕೋ ರೆಸಾರ್ಟ್ ನಡೆಸುತ್ತಿದ್ದಾರೆ. ಇವರು ಕಬಿನಿ ವ್ಯಾಪ್ತಿಯಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ದಿನಕ್ಕೆ ೧೦ ಗಂಟೆಗಳಂತೆ ಸಂಚರಿಸಿ ಈ ಕಪ್ಪು ಚಿರತೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ನಿಕಾನ್ ಕೆಮೆರಾ ಕಂಪನಿಯ ಬ್ರ್ಯಾಂಡ್ ರಾಯಭಾರಿಯೂ ಆಗಿರುವ ಜಂಗ್, ‘ದಿ ರಿಯಲ್ ಬ್ಲ್ಯಾಕ್ ಪ್ಯಾಂಥರ್ ’ ಹೆಸರಿನ ಸಾಕ್ಷ್ಯ ಚಿತ್ರದ ಸಿನಿಮಾಟೋಗ್ರಾಫರ್ ಕೂಡ ಆಗಿದ್ದರು. ನ್ಯಾಷನಲ್ ಜಿಯಾಗ್ರಫಿ ಚಾನೆಲ್‌ನಲ್ಲಿ ೫೪ ನಿಮಿಷಗಳ ಈ ಸಾಕ್ಷ್ಯ ಚಿತ್ರ ಪ್ರಸಾರವಾದ ಬಳಿಕ ಭಗೀರ ವಿಶ್ವ ಮಟ್ಟದಲ್ಲಿ ಪರಿಚಯವಾದ. ಚಿತ್ರದಲ್ಲಿ ಕಪ್ಪು ಚಿರತೆಗೆ ‘ಸಾಯ’ ( ಹಿಂದಿಯಲ್ಲಿ ನೆರಳು ಎಂದರ್ಥ) ಎಂದು, ಸಂಗಾತಿಗೆ ಕ್ಲಿಯೋಪಾತ್ರ ಎಂದು ಹೆಸರಿಟ್ಟವರು ಇವರು. ಮೊದಲ ಬಾರಿಗೆ ಇವರು ಭಗೀರ ಚಿತ್ರಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಾಗ ಅದು ಜಾಗತಿಕ ಮಟ್ಟದಲ್ಲಿ ಭಾರೀ ವೈರಲ್ ಆಗಿತ್ತು. ಅಂತಾರಾಷ್ಟ್ರೀಯ ದೈನಿಕಗಳು, ಚಾನೆಲ್ ಗಳು, ಬಾಲಿವುಡ್, ಹಾಲಿವುಡ್ ತಾರೆಯರು ಇವರ ಪೋಸ್ಟನ್ನು ಮೆಚ್ಚಿಕೊಂಡು ಮರು ಟ್ವೀಟ್ ಮಾಡಿದ್ದರು. ಅಂದಿನಿಂದ ಕಬಿನಿ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಅಂದ ಹಾಗೆ ವನ್ಯಜೀವಿ ಪ್ರೇಮಿಯಾಗಿರುವ ಜಂಗ್ ತಂದೆ ಶಾದ್ ಬಿನ್ ಜಂಗ್, ಕಬಿನಿ ಪ್ರದೇಶವನ್ನೇ ಕೇಂದ್ರವಾಗಿಟ್ಟುಕೊಂಡು ಮೂರು ಪುಸ್ತಕಗಳನ್ನು ಬರೆದಿದ್ದಾರೆ.
ಭಗೀರ ಮತ್ತು ಸಾಬು ದಸ್ತಗೀರ್
ಭಾರತ ಸಂಜಾತ ಬ್ರಿಟಿಷ್ ಲೇಖಕ ರುಡ್‌ಯಾರ್ಡ್ ಕಿಪ್ಲಿಂಗ್ ಅವರ ‘ಜಂಗಲ್ ಬುಕ್’ ನ ಕಾಲ್ಪನಿಕ ಪಾತ್ರಗಳಾದ ಕಾಡಿನಲ್ಲಿ ಬೆಳೆದ ಭಾರತೀಯ ಹುಡುಗ- ‘ಮೊಗ್ಲಿ ’, ಆತನ ಮಿತ್ರರಾದ ಕಪ್ಪು ಚಿರತೆ-‘ಭಗೀರ’, ಕರಡಿ-‘ಬಾಲು’, ಹುಲಿ- ಶೇರ್ ಖಾನ್ ಸಿನಿಮಾ ಆಗಿ, ಕಾರ್ಟೂನ್ ಪಾತ್ರಗಳಾಗಿ ವಿಶ್ವದೆಲ್ಲೆಡೆಯ ಮಕ್ಕಳನ್ನು ರಂಜಿಸಿವೆ. ಕಾಕತಾಳೀಯ ಎಂಬಂತೆ ಕ್ಯಾಲಿಫೋರ್ನಿಯಾದಲ್ಲಿ ಚಿತ್ರೀಕರಣಗೊಂಡ ಮೊದಲ ‘ಮೌಗ್ಲಿ’ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿ, ಅದನ್ನು ಸಾರ್ವಕಾಲಿಕ ಅಜರಾಮರ ಚಿತ್ರವಾಗಿಸಿದ್ದು ಇದೇ ಎಚ್.ಡಿ. ಕೋಟೆಯ ಕಾರಾಪುರ ಮೂಲದ ಸಾಬು ದಸ್ತಗೀರ್. ಈಗ ಭಗೀರನ ಪಾತ್ರ ಕಬಿನಿಯ ನೈಜ ಚಿರತೆಯ ಮೂಲಕವೇ ಮನೆ ಮಾತಾಗುತ್ತಿದೆ.
ಇಲ್ಲಿನ ಸಫಾರಿ ಹೆಚ್ಚು ಖ್ಯಾತಿಯನ್ನು ಪಡೆಯಲು ಕಪ್ಪು ಚಿರತೆಯೂ ಸಹ ಪ್ರಮುಖ ಕಾರಣವಾಗಿದೆ. ಬಂಡೀಪುರ, ಭದ್ರಾ, ದಾಂಡೇಲಿ ಮುಂತಾದ ಅಭಯಾರಣ್ಯಗಳಲ್ಲೂ ಕಪ್ಪು ಚಿರತೆ ಕಾಣಿಸಿಕೊಂಡಿದ್ದಿದೆ. ಆದರೆ ಕಾಕನ ಕೋಟೆಯ ಕಪ್ಪು ಚಿರತೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುವ ಕಾರಣಕ್ಕೆ ಹೆಚ್ಚು ಗಮನ ಸೆಳೆದಿದೆ. ಇದನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದಲೇ ದೇಶ ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. -ಎಸ್.ಎಸ್.ಸಿದ್ಧರಾಜು, ವಲಯ ಅರಣ್ಯಧಿಕಾರಿ, ಅಂತರಸಂತೆ ವಲಯ
ಚಿತ್ರಗಳು: ಶ್ರೇಯಶ್, ದೇವನೂರು
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…