ಆಂದೋಲನ 50

ವೃತ್ತಿಗೆ ಭದ್ರಬುನಾದಿ ಹಾಕಿದ್ದು ‘ಆಂದೋಲನ’

ಅಂಶಿ ಪ್ರಸನ್ನಕುಮಾರ್. ಹಿರಿಯ ಪತ್ರಕರ್ತ

‘ಆಂದೋಲನ’ಕ್ಕೆ ೫೦ ವರ್ಷ. ನನ್ನ ಹೆಸರು ‘ಆಂದೋಲನ’ ಪತ್ರಿಕೆಯಲ್ಲಿ ಕಾಣಿಸಿಕೊಳ್ಳತೊಡಗಿ ನಲವತ್ತು ವರ್ಷ!. ಸಕ್ರಿಯ ಪತ್ರಿಕೋದ್ಯಮಕ್ಕೆ ಬರುವ ಮುಂಚಿನಿಂದಲೂ ನನಗೆ ‘ಆಂದೋಲನ’ ಅಚ್ಚುಮೆಚ್ಚು. ಹೀಗಾಗಿ ಓದುಗರ ಪತ್ರಗಳು, ಲೇಖನ ಪ್ರಕಟವಾಗಿತ್ತು. ಭೇಟಿಯಾದ ಮೊದಲ ದಿನವೇ ಸಂಪಾದಕರಾದ ರಾಜಶೇಖರ ಕೋಟಿಯವರು ಕೆಲಸ ಕೊಟ್ಟರು. ಆ ಮೂಲಕ ನನ್ನ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದರು. ಇದರಿಂದಾಗಿಯೇ ಇಲ್ಲಿಯವರೆಗೆ ಓರ್ವ ಸಕ್ರಿಯ ಪತ್ರಕರ್ತನಾಗಿ ಉಳಿದುಕೊಳ್ಳಲು ಸಾಧ್ಯವಾಗಿದೆ.
ರಾಜಶೇಖರ ಕೋಟಿ ಹಾಗೂ ಬಿ.ಎಸ್. ಹರೀಶ್ ಅವರು ಆರಂಭದಲ್ಲಿ ದೈನಂದಿನ ಕಾರ್ಯಕ್ರಮಗಳಿಗೆ ಕಳುಹಿಸುತ್ತಿದ್ದರು. ಕ್ರಮೇಣ ಎಲ್ಲಾ ವಿಭಾಗಗಳ ವರದಿಗಾರಿಕೆಗೂ ಅವಕಾಶ ಕಲ್ಪಿಸಿದರು. ಅವುಗಳಲ್ಲಿ ನಗರಪಾಲಿಕೆ, ಜಿಲ್ಲಾ ಪರಿಷತ್ ಸಭೆಗಳು ಮುಖ್ಯವಾದವು. ಆಗ ಒಣಭೂಮಿ ಅಭಿವೃದ್ಧಿ ಪ್ರಾಧಿಕಾರ ಇತ್ತು. (ಡಿಎಲ್‌ಡಿಬಿ) ಕೆ.ಎಸ್. ನಿಂಗಪ್ಪ ಎಂಬ ಕೆಎಎಸ್ ಅಧಿಕಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನೀರಿನ ಸಂರಕ್ಷಣೆಯಿಂದ ಬರಡುಭೂಮಿಯನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆ ವಿಶೇಷ ವರದಿ ಮಾಡಿದೆ. ಮುಜರಾಯಿ ದೇವಾಲಯಗಳಿಗೆ ದಲಿತರನ್ನು ಅರ್ಚಕವಾಗಿ ನೇಮಿಸಲು ಮುಂದಾದ ಅಂದಿನ ಜಿಲ್ಲಾಧಿಕಾರಿ ವಿ.ಪಿ. ಬಳಿಗಾರ್ ಸಂದರ್ಶನ, ಲಕ್ಷ್ಮೀಪುರಂ ಗೋಪಾಲಸ್ವಾಮಿ ಶಿಶುವಿಹಾರದ ಬಳಿ ನಡೆದಿದ್ದ ಡಾ.ಚಂದ್ರಶೇಖರ್ ಕೊಲೆ ಪ್ರಕರಣ, ಇಲವಾಲದ ಬಳಿ ನಡೆದಿದ್ದ ರುಂಡವಿಲ್ಲದ ದೇಹ ಪತ್ತೆ ಪ್ರಕರಣ, ದಸರಾ, ಪ್ರೀಮಿಯರ್ ಸ್ಟುಡಿಯೋ ಆಗ್ನಿ ದುರಂತ- ಹೀಗೆ ವರದಿಗಾರಿಕೆ ಸಾಗಿತ್ತು.
ನಂತರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಸಮೀಕ್ಷೆಗೆ ಅವಕಾಶ ಮಾಡಿಕೊಟ್ಟರು. ನಗರಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ವಾರು ಸಮೀಕ್ಷೆ ಬರೆದ ಮೊದಲ ಪತ್ರಿಕೆ ‘ಆಂದೋಲನ’ ಎನಿಸಿಕೊಂಡಿತು. ೧೯೯೦ ರಲ್ಲಿ ಅರಮನೆಯಲ್ಲಿ ನಡೆದ ೬೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವರದಿ ಮಾಡಲಾಯಿತು.
ವಿಧಾನಮಂಡಲ ಅಧಿವೇಶನ, ೧೯೮೯-೯೦ರ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ವೀರೇಂದ್ರ ಪಾಟೀಲ್ ಪದಚ್ಯುತಿ, ಹೊಸ ಸಿಎಂ ಆಗಿ ಎಸ್. ಬಂಗಾರಪ್ಪ ಆಯ್ಕೆ ಸಂದರ್ಭ, ವಿಧಾನಮಂಡಲ ಅಧಿವೇಶನಗಳಿಗೂ ಕೂಡ ಕೋಟಿಯವರು ಕಳುಹಿಸುತ್ತಿದ್ದರು.

ಮುತ್ತತ್ತಿ- ಎಲ್‌ಟಿಟಿಇ ಉಗ್ರರ ಆತ್ಮಹತ್ಯೆ
೧೯೯೧ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರು ಬಳಿ ಮಾನವ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಯಿತು. ಅದರಲ್ಲಿ ಭಾಗಿಯಾಗಿದ್ದ ಎಲ್‌ಟಿಟಿಇ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕು ಮುತ್ತತ್ತಿ ಬಳಿ ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬಂದಾಗ ರಾತ್ರೋರಾತ್ರಿ ಕೋಟಿಯವರೊಂದಿಗೆ ನಾನು ಹೋಗಿದ್ದೆ. ಆಗಷ್ಟೇ ಖರೀದಿಸಿದ್ದ ಹೊಸ ಕಾರಿನಲ್ಲಿ ಕೋಟಿಯವರು ಅಲ್ಲಿಗೆ ತಲುಪಿದ್ದರು. ಇದಾದ ನಂತರ ಬೆಂಗಳೂರಿನ ಕೋಣನಕುಂಟೆ ಬಳಿ ಶಿವರಸನ್, ಶುಭಾ ಇದ್ದಾರೆ ಎಂಬ ಮಾಹಿತಿ ಸಿಕ್ಕಿತು.

ವೀರಪ್ಪನ್ ಕುಕೃತ್ಯಗಳು
ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಸಿಲ್ವೇಕಲ್ ಬಳಿ ಕೋಟ್ಯಂತರ ರೂ. ಮೌಲ್ಯದ ಶ್ರೀಗಂಧ ವಶಪಡಿಸಿಕೊಂಡರು. ನಾನು ಮತ್ತು ಆಗ ಛಾಯಾಗ್ರಾಹಕರಾಗಿದ್ದ ಸಾಗ್ಗೆರೆ ರಾಮಸ್ವಾಮಿ ವರದಿಗೆ ಧರ್ಮಪುರಿ, ಸೇಲಂ ಮತ್ತಿತರ ಕಡೆ ಹೋಗಿದ್ದವು. ಗೋಪಿನಾಥಂ ಬಳಿ ಎರಕೆಹಳ್ಳದಲ್ಲಿ ಡಿಸಿಎಫ್ ಪಿ.ಶ್ರೀನಿವಾಸನ್ ಅನ್ನು ವೀರಪ್ಪನ್ ರುಂಡ- ಮುಂಡ ಬೇರ್ಪಡಿಸಿ, ಹತ್ಯೆ ಮಾಡಿದಾಗ ಕೋಟಿಯವರು ಹಾಗೂ ನಾನು ಹೋಗಿ, ವರದಿ ಮಾಡಿದ್ದೆವು.
ಇದಾದ ನಂತರ ಮೀಣ್ಯಂ ಬಳಿ ಎಸ್ಪಿ ಟಿ.ಹರೀಕೃಷ್ಣ, ಎಸ್‌ಐ ಶಕೀಲ್ ಅಹಮದ್ ಹತ್ಯೆ, ಪಾಲಾರ್ ಸೇತುವೆ ಬಳಿ ನಡೆದ ೨೨ ಮಂದಿಯ ಹತ್ಯೆ, ರಾಮಾಪುರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಐವರು ಪೊಲೀಸರ ಹತ್ಯೆ, ಗದ್ದೆಸಾಲು ಬಳಿ ಐವರು ಗಿರಿಜನರ ಹತ್ಯೆ, ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಬಳಿ ಗೋಪಾಲ್ ಹೊಸೂರು ಕಾರಿನ ಮೇಲೆ ದಾಳಿ ಹೀಗೆ ನಾನಾ ಪ್ರಕರಣಗಳ ಬಗ್ಗೆ ಕೊಳ್ಳೇಗಾಲದ ಎ.ಎಚ್. ಗೋವಿಂದ, ಹನೂರು ವೆಂಕಟೇಗೌಡ, ಕಾಮಗೆರೆಯ ಸೋಮಶೇಖರ್, ರಾಮಾಪುರದ ಶಿವಕುಮಾರ್, ಮಹದೇಶ್ವರ ಬೆಟ್ಟದ ವೀರಭದ್ರಸ್ವಾಮಿ, ನೇತ್ರರಾಜು ಮೊದಲಾದವರ ನೆರವಿನಿಂದ ವರದಿ ಮಾಡಲಾಯಿತು.

ಸತ್ಯದೇವ್ ಪ್ರಕರಣ
ಮೈಸೂರಿನಲ್ಲಿ ವಿಕ್ರಾಂತ್ ಟಯರ್ಸ್ ಕಾರ್ಮಿಕ ಸತ್ಯದೇವ್ ಎಂಬವರು ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದರು. ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ (ಯುಡಿಆರ್) ದಾಖಲಾಗಿತ್ತು. ಆದರೆ ಅದು ಅಸ್ವಾಭಾವಿಕ ಸಾವಲ್ಲ, ಕೊಲೆ ಎಂಬುದನ್ನು ಸಾಂದರ್ಭಿಕ ಸಾಕ್ಷ್ಯಗಳು ಒತ್ತಿ ಒತ್ತಿ ಹೇಳುತ್ತಿದ್ದವು. ನನಗೆ ಈ ಬಗ್ಗೆ ಮಾಹಿತಿ ಬಂತು. ಅದನ್ನು ತನಿಖಾ ವರದಿ ಮಾಡಲು ಹೋದಾಗ ಖಚಿತಪಡಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು. ಆದರೆ ಧೈರ್ಯದಿಂದ ಮಾಡಿದ ಈ ವರದಿಯನ್ನು ಯಾವುದೇ ಮುಲಾಜಿಗೆ ಒಳಗಾಗದೇ ’ಆಂದೋಲನ’ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರು ಪ್ರಕಟ ಮಾಡಿದ್ದು ನನ್ನ ಪತ್ರಿಕೋದ್ಯಮ ಯಾತ್ರೆಗೆ ಪೂರಕವಾಯಿತು.

andolanait

Recent Posts

ಪಶ್ಚಿಮ ಬಂಗಾಳ | ಮತದಾನದ ಹೊತ್ತಲ್ಲೇ ಕಚ್ಚಾ ಬಾಂಬ್‌ ದಾಳಿ ; ಹಲವರು ಗಂಭೀರ

ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು ಮತದಾನ ನಡೆಯುತ್ತಿದೆ. ಈ ಹೊತ್ತಿನಲ್ಲೇ ಆತಂಕಕಾರಿ ಘಟನೆಯೊಂದು…

21 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 23 ಗುರುವಾರ

2 hours ago

ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ; ಬಿಗಿ ಭದ್ರತೆಯಲ್ಲಿ ಮತದಾನ ಆರಂಭ

ಬೆಂಗಳೂರು : ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಪಶ್ಚಿಮ…

3 hours ago

ಹುಣಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ…

12 hours ago

ಹನೂರು| ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ಫಲಿಸದೇ ಸಾವು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ…

12 hours ago

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ನಾಳೆ ಉತ್ತರ ಬಂಗಾಳದ ಎಲ್ಲಾ 152…

14 hours ago