ಆಂದೋಲನ 50

ಪ್ರವಾಸಿಗರ ಸ್ವರ್ಗ ಗಂಧದ ನಾಡು

ಕೆ.ಬಿ.ರಮೇಶನಾಯಕ

ಪ್ರವಾಸಿ ತಾಣವಾಗಿ ವಿಶ್ವ ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಡದೇವನಕೋಟೆಯ ಒಳಹೊಕ್ಕು ನಡೆದರೆ ಸಾಕು, ಪ್ರವಾಸಿಗರಿಗೆ ವನ್ಯಜೀವಿಗಳ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ. ದಟ್ಟ ಕಾನನದಲ್ಲಿ ಸ್ವಚ್ಛಂದವಾಗಿ ವಿಹರಿಸುವ ವನ್ಯಜೀವಿಗಳನ್ನು ನೋಡುವುದೇ ಅಪೂರ್ವ ಅನುಭವ. ಇದಲ್ಲದೆ ಕಬಿನಿ, ನುಗು, ತಾರಕ ಮತ್ತು ಹೆಬ್ಬಳ್ಳ ಸೇರಿ ನಾಲ್ಕು ಜಲಾಶಯಗಳನ್ನು ಹೊಂದಿರುವುದು ತಾಲೂಕಿನ ವೈಶಿಷ್ಟ್ಯ.

ಜಿಲ್ಲಾ ಕೇಂದ್ರದಿಂದ ೫೨ ಕಿ.ಮೀ ಮೈಸೂರು ನಗರದಿಂದ ಹೆಗ್ಗಡದೇವನಕೋಟೆಗೆ ೫೨ ಕಿ.ಮೀ, ಬೆಂಗಳೂರಿನಿಂದ ೧೯೨ ಕಿ.ಮೀ. ದೂರವಿದ್ದು ಇಲ್ಲಿಗೆ ಖಾಸಗಿ ಬಸ್ಸುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ತನಕ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಒಂದೇ ದಿನದಲ್ಲಿ ಹೋಗಿ ಬರುವವರಾದರೆ ಜೊತೆಯಲ್ಲಿ ಊಟ-ತಿಂಡಿ ತೆಗೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಈ ಕಾಡಿನೊಳಗೆ ಹಸಿವಾದರೆ ತಿನ್ನಲೂ ಯಾವುದೇ ವಸ್ತುಗಳು ಸಿಗಲ್ಲ. ಸಿಕ್ಕರೂ ತುಂಬಾ ದುಬಾರಿ.

ಏನೇನು ವ್ಯವಸ್ಥೆ

ವಸತಿಗಾಗಿ ಇಲ್ಲಿ ಸರ್ಕಾರಿ ಸ್ವಾಮ್ಯದ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸೇರಿದಂತೆ ಕಪಿಲ ವೈಲ್ಡರ್‌ನೆಷ್ ರಿಟ್ರೇಟ್, ಬುಷ್‌ಬೆಟ್ಟ ಹಾಲಿಡೇ ವೈಲ್ಡ್ ಲೈಫ್, ಕಬಿನಿ ರಿವರ್ ಲಾಡ್ಜ್, ವಾರ್‌ವುಡ್ಸ್, ಸೋಗಳ್ಳಿಯ ಕಬಿನಿ ಲೇಕ್ ವ್ಯೆ ರೆಸಾರ್ಟ್ಸ್, ವೀರನಹೊಸಹಳ್ಳಿಯ ದಿ ಕಿಂಗ್ ಸಾಂಕ್ಚುರಿ ಮುಂತಾದ ರೆಸಾರ್ಟ್ಸ್‌ಗಳಿವೆ. ಅರಣ್ಯ ಇಲಾಖೆಯ ಡಾರ್ಮೆಂಟ್ರಿಗಳೂ ಉಂಟು. ಇವುಗಳಲ್ಲಿ ದಿನವೊಂದಕ್ಕೆ ಒಬ್ಬರಿಗೆ ಊಟ-ತಿಂಡಿ, ವಸತಿ, ವನ್ಯಜೀವಿ ವೀಕ್ಷಣೆಯ ಜೀಫ್ ಸಫಾರಿ, ಆನೆ ಸವಾರಿ, ದೋಣಿ ವಿಹಾರ ಎಲ್ಲವೂ ಸೇರಿ ಕನಿಷ್ಠ ಮೂರರಿಂದ ೩೦ ಸಾವಿರ ರೂ. ಗಳಿರುತ್ತದೆ. ದಿನವೊಂದಕ್ಕೆ ೨೦೦೦ ರೂ.ಬಾಡಿಗೆಯುಳ್ಳ ಸುಂಕದಕಟ್ಟೆ ಗೆಸ್ಟ್‌ಹೌಸ್‌ನಂತಹ ಜಂಗಲ್ ರೆಸಾರ್ಟ್ಸ್‌ಗಳು, ಟೆಂಟ್‌ಹೌಸ್‌ಗಳು, ಕಾಟೇಜ್‌ಗಳೂ ದೊರೆಯುವುದುಂಟು.

ಆನೆ,ಹುಲಿಗಳ ತಾಣ

ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶ ಇದಾಗಿದೆ. ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಹಂದಿ, ಮುಳ್ಳುಹಂದಿ, ಮೊಸಳೆ, ಜಿಂಕೆ, ನವಿಲು, ಸಾರಂಗ ಮುಂತಾದ ವನ್ಯಜೀವಿಗಳಿಂದ ಸಮೃದ್ಧವಾಗಿದೆ. ಪ್ರಕೃತಿಯನ್ನು ಮೈದುಂಬಿಕೊಂಡಂತೆ ಸಾಗುವಾನಿ, ತೇಗ, ಗಂಧ, ಬೀಟೆ, ಹೊನ್ನೆ, ಬಿಲ್ವಾರ ಮುಂತಾದ ಬೆಲೆಬಾಳುವ ಸಸ್ಯ ಸಂಪತ್ತಿದೆ.

ದಸರಾ ಆನೆಗಳ ಬೀಡು

ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಬಹಳಷ್ಟು ಆನೆಗಳಿಗೆ ಆಶ್ರಯ ತಾಣವಾಗಿರುವ ಇಲ್ಲಿಗೆ ಸಮೀಪದಲ್ಲೇ ಇರುವ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಹಾಡಿ ಹಾಗೂ ಬಂಡೀಪುರ, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನಗಳು ತಾಲೂಕಿಗೆ ಹೊಂದಿಕೊಂಡಂತೆ ಇರುವುದರಿಂದ ಪ್ರವಾಸಿಗರು ಹೆಚ್ಚೆಚ್ಚು ಸ್ಥಳಗಳನ್ನು ವೀಕ್ಷಿಸಿ ಸಂಭ್ರಮಿಸಬಹುದಾಗಿದೆ.

ಧಾರ್ಮಿಕ ತಾಣಗಳು

ಪುರಾತನ ಕಾಲದ ಶ್ರೀ ವರದರಾಜಸ್ವಾಮಿ ದೇವಸ್ಥಾನ, ಶ್ರೀರಾಮಾನುಜಾಚಾರ್ಯರು ಕಟ್ಟಿಸಿದರೆಂಬ ಪ್ರತೀತಿಯುಳ್ಳ ಕೆ. ಬೆಳತ್ತೂರಿನ ಶ್ರೀ ಲಕ್ಷ್ಮೀನಾರಾಯಣ ದೇವಾಲಯ, ಕಪಿಲಾ ನದಿದಂಡೆಯ ಮೇಲಿರುವ ರಾಜರಾಜ ಚೋಳ ನಿರ್ಮಿಸಿದನೆಂದು ಹೇಳಲಾಗುವ ಶ್ರೀರಾಮಲಿಂಗೇಶ್ವರ ದೇಗುಲ, ಶ್ರೀ ಮಹದೇಶ್ವರಸ್ವಾಮಿ ನೆಲೆಸಿರುವ ಸುಪ್ರಸಿದ್ಧ ದ್ವೀಪ ಕ್ಷೇತ್ರವಾದ ಭೀಮನಕೊಲ್ಲಿ ಶ್ರೀ ಕ್ಷೇತ್ರ ತಾಲೂಕಿನ ಧಾರ್ಮಿಕ ತಾಣಗಳು.

ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್

ಮೈಸೂರು ಮಹಾರಾಜರು ಶಿಕಾರಿಗೆ ಬಂದಾಗ ಉಳಿದು ಕೊಳ್ಳಲೆಂದೇ ಆ ಕಾಲದಲ್ಲಿ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಕಾರಾಪುರದ ಮಹಾರಾಜ ಬಂಗಲೆ (ಟೈಗರ್ ಟ್ರ್ಯಾಪ್ ರೆಸಾರ್ಟ್) ಈಗ ‘ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಆಗಿದೆ. ಈ ಬಂಗಲೆಯ ಬಳಿ ವನ್ಯ ಮೃಗಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕೆರೆ ಸಹಿತ ಕಟ್ಟಿರುವ ವೀಕ್ಷಣಾಗೋಪುರವಿದೆ.
೮೦ರ ದಶಕದಲ್ಲಿ ಅಂದಿನ ಸಿಎಂ ಗುಂಡುರಾವ್ ಅವರ ಆಡಳಿತದಲ್ಲಿ ಕಪಿಲಾ ದಂಡೆಯಲ್ಲಿದ್ದ ಟೈಗರ್ ಟ್ರ್ಯಾಪ್ ರೆಸಾರ್ಟ್ ಬದಲಾಗಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಅಸ್ತಿತ್ವಕ್ಕೆ ಬಂತು. ಕಬಿನಿ ಪ್ರವಾಸೋದ್ಯಮದ ಹೊಸ ಅಧ್ಯಾಯ ಆರಂಭವಾಯಿತು. ಪ್ರಸ್ತುತ ಕಬಿನಿ ಸಫಾರಿಯ ವಾರ್ಷಿಕ ಆದಾಯ ಕೋಟ್ಯಂತರ ರೂ.ಗಳನ್ನು ದಾಟಿದೆ. ಪ್ರತಿನಿತ್ಯ ಪ್ರವಾಸಿಗರಿಂದ ತುಂಬಿರುವ ಕಬಿನಿಯ ಆದಾಯ ಕಳೆದ ೨೦ ವರ್ಷಗಳಲ್ಲಿ ಇಳಿಕೆ ಕಂಡ ಉದಾಹರಣೆಗಳಿಲ್ಲ. ಆದರೆ ಇಲ್ಲಿ ಗಳಿಸಿದ ಆದಾಯ ಏನಾಗುತ್ತಿದೆ ಎಂಬ ಚರ್ಚೆ ಇಂದಿಗೂ ನಡೆಯುತ್ತಲೇ ಇದೆ. ಕಬಿನಿಗಾಗಿ ತಮ್ಮ ಬದುಕನ್ನೇ ತೊರೆದು ತ್ಯಾಗ ಮಾಡಿ ಬಂದ ಜನರ ಅಭಿವೃದ್ಧಿಗೆ, ವನ್ಯ ಸಂಪತ್ತಿನ ರಕ್ಷಣೆಗೆ ಇಲ್ಲಿನ ಆದಾಯದ ಒಂದಂಶವಾದರೂ ಬಳಕೆಯಾಗಿದೆಯೇ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.

ನಾಗರಹೊಳೆಯ ಕಬಿನಿ ಸಫಾರಿ ದಿನ ಕಳೆದಂತೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದೆ. ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ವ್ಯವಸ್ಥೆಗಳು ಇಲ್ಲಿವೆ. ಹಿನ್ನೀರಿನಲ್ಲಿ ಆನೆಗಳ ಹಿಂಡು ನೋಡುವುದೇ ಸೊಗಸು. ಅರಣ್ಯದೊಳಗೆ ಹುಲಿ, ಚಿರತೆಯ ದರ್ಶನದಿಂದಾಗಿ ಇಂದು ಕಬಿನಿ ಜನಾಕರ್ಷಣೆಯ ಕೇಂದ್ರವಾಗಿದೆ -ನಿಶಾಂತ್ ದೇಸಾಯಿ, ಬೆಂಗಳೂರು, ಪ್ರವಾಸಿಗ

 

andolana

Recent Posts

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

12 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

29 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

42 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

10 hours ago