ಆಂದೋಲನ 50

‘ಆಂದೋಲನ’ ಸಾಗಿದ ನೆನಪುಗಳ ಮೆರವಣಿಗೆ

ಸಾರ್ಥಕ ಪಯಣದ ವರ್ಷವಿಡೀ ಚಟುವಟಿಕೆಗೆ ಚಾಲನೆ | ರಾಜಶೇಖರ ಕೋಟಿ ಅವರ ಸಾಕ್ಷ್ಯಚಿತ್ರ ಬಿಡುಗಡೆ
  • ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಲೇಖನ ಸಂಗ್ರಹ ‘ಇದ್ದದ್ದು ಇದ್ಹಾಂಗ’ ಪುಸ್ತಕ ಬಿಡುಗಡೆ
  • ‘ಆಂದೋಲನ’ ದಿನಪತ್ರಿಕೆಯ ವೆಬ್‌ಸೈಟ್ ಹೊಸ ವಿನ್ಯಾಸದೊಂದಿಗೆ ಲೋಕಾರ್ಪಣೆ
  • ಮಳೆಯ ನಡುವೆಯೂ ಬತ್ತದ ಓದುಗರ ಉತ್ಸಾಹ; ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ
  • ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾದ ಭದ್ರ

ಮೈಸೂರು: ಹಸಿರು ಕಂಗೊಳಿಸುತ್ತಿದ್ದ ಮರಗಳ ನಡುವೆ ಇರುವ ಆ ಶ್ವೇತಭವನದಲ್ಲಿ ಸಂಭ್ರಮ ಗರಿಬಿಚ್ಚಿತ್ತು. ಹೊರಗೆ ವರ್ಷಧಾರೆ… ಒಳಗೆ ಹರ್ಷಧಾರೆ ಹರಿದಿತ್ತು. ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನದ ಅಂಗಳದಲ್ಲೂ, ಮಾನವೀಯ ಅಂತಃಕರಣ, ನೊಂದ ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ೫ ದಶಕಗಳ ಹಿಂದೆ ಸ್ಥಾಪನೆಯಾದ ಪ್ರಾದೇಶಿಕ ದಿನಪತ್ರಿಕೆಯ ಬಗ್ಗೆ ಹೆಗ್ಗಳಿಕೆಯ ನೆನಪುಗಳು ಅನುರಣನಗೊಂಡಿದ್ದವು. ಅದರ ಜೊತೆಜೊತೆಗೇ ಆ ಪತ್ರಿಕೆಯನ್ನು ಸ್ಥಾಪಿಸಿ, ಅದೆಷ್ಟೋ ಸಂಕಷ್ಟಗಳನ್ನು ಗೆದ್ದು, ಮುಗಿಲೆತ್ತರಕ್ಕೆ ಬೆಳೆಸಿದ ಸಂಸ್ಥಾಪಕ ಸಂಪಾದಕರ ಬದುಕಿನ ಸಾರ್ಥಕ ಪಯಣದ ಹಾದಿಯನ್ನೂ ಗಣ್ಯರು, ಹಿರಿಯರು, ಗೆಳೆಯರು, ಕುಟುಂಬಸ್ಥರು ಎಲ್ಲರೂ ನೆನಪು ಮಾಡಿಕೊಳ್ಳಲು ಈ ಉಭಯ ಸಂತಸದ ಕ್ಷಣಗಳಿಗೆ ಆ ಕಾರ್ಯಕ್ರಮ ವೇದಿಕೆಯಾಗಿತ್ತು.

ಅನುರಣಿಸಿದ ಜನ್ನಿ ಗಾನ‘ಆಂದೋಲನ’ದ ೫೦ ವರ್ಷದ ಸಾರ್ಥಕ ಪಯಣದ ಕಾರ‌್ಯಕ್ರಮಕ್ಕೆ ಚಾಲನೆ ದೊರೆತಿದ್ದು ಕಂಚಿನ ಕಂಠದ ಗಾಯಕರಾದ ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ) ‘ಆಂದೋಲನ’ ಪತ್ರಿಕೆಯ ಆಶಯಗಳನ್ನು ನೆನಪಿಸಿಕೊಳ್ಳುವ ಜತೆಗೆ ಪತ್ರಿಕೆಯ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರ ಒಡನಾಟವನ್ನು ನೆನೆದ ಜನ್ನಿ , ಕುವೆಂಪು ಅವರ ಓ ನನ್ನ ಚೇತನ ಗೀತೆ ಹಾಡಿದರು. ಅವರ ದನಿ ಇಡೀ ಕಾರ‌್ಯಕ್ರಮದ ಆಶಯದಂತೆ ಅನುರಣಿಸುತ್ತಲೇ ಇತ್ತು. 

ಎಲ್ಲೋ ಕಗ್ಗಲ್ಲುಗಳ ಸಂದಿಯಲ್ಲಿ ಉದ್ಭವಿಸುವ ಝರಿ ಸಣ್ಣದಾಗಿ ಹರಿಯುತ್ತಾ, ತೊರೆ, ಕೆರೆ, ಅಣೆಕಟ್ಟೆಗಳನ್ನು ದಾಟುತ್ತಾ ನದಿಯ ಸ್ವರೂಪದಿಂದ ಸಾಗಿ ಸಾಗರ ಸೇರುವ ಹಾದಿಯಲ್ಲಿ ಸಕಲ ಜೀವಸಂಕುಲಕ್ಕೆ ತನ್ನದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತದೆ. ಅದೇ ರೀತಿ ದೂರದ ಧಾರವಾಡದಲ್ಲಿ ವಾರಪತ್ರಿಕೆಯಾಗಿ ಶುರುವಾಗಿ ಸಾಂಸ್ಕೃತಿಕ ನಗರಿ ಮೈಸೂರು ತಲುಪಿ ದಿನಪತ್ರಿಕೆಯಾಗಿ ಸತತ ೫೦ ವರ್ಷಗಳನ್ನು ದಾಟಿ ದಿಟ್ಟ ಹೆಜ್ಜೆಗಳಿಂದ ಮುನ್ನುಗ್ಗುತ್ತಿರುವ ‘ಆಂದೋಲನ’ ದಿನಪತ್ರಿಕೆ ಮತ್ತು ಈ ‘ಪತ್ರಿಕೆ’ಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಪರಿಶ್ರಮ, ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದಂತೆ ಪತ್ರಿಕಾ ರಂಗ ಮತ್ತು ಪತ್ರಕರ್ತರು ಅನುಸರಿಸಬಹುದಾದ ಮಾರ್ಗ, ಸಿದ್ಧಾಂತ, ಗುರಿಗಳ ಬಗ್ಗೆ ಗಣ್ಯರೆಲ್ಲರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಸಮಾರಂಭದ ಗಾಂಭೀರ್ಯತೆಗೆ ಮತ್ತಷ್ಟು ಮೆರುಗು ತಂದರು.

೫೦ ವರ್ಷಗಳಿಂದ ಜನರ ನಾಡಿಮಿಡಿತ ಅರಿತು ಸುದ್ದಿಗಳನ್ನು ನೀಡುತ್ತಾ, ಸಮಾಜವಾದ, ಸಮತಾವಾದದ ಮಾನವೀಯ ಚಳವಳಿಗಳಿಗೆ ಉತ್ತೇಜನಕಾರಿಯಾಗಿ ಸಾಗಿ ಬಂದ ಪ್ರಾದೇಶಿಕ ದಿನಪತ್ರಿಕೆಯೊಂದರ ಸಾರ್ಥಕತೆಯನ್ನು ಕೆಲವೇ ಗಂಟೆಗಳಲ್ಲಿ ನೆನೆಯುವುದು, ಅರಿಯುವುದು ಕಷ್ಟಸಾಧ್ಯ ಎಂಬುದನ್ನು ಆ ವೇದಿಕೆ ಸಾಬೀತುಪಡಿಸಿತ್ತು.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಂದೋಲನ- ೫೦ರ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಆತ್ಮೀಯ ವಾತಾವರಣದಲ್ಲಿ ‘ಆಂದೋಲನ’ ದಿನಪತ್ರಿಕೆ ಈ ಪಂಚ ದಶಕಗಳಲ್ಲಿ ನಡೆದ ಮಾರ್ಗವನ್ನು ಸ್ಮರಿಸುತ್ತಲೇ ಪ್ರಸ್ತುತ ಪತ್ರಿಕಾ ಲೋಕದ ಪಥದ ಬಗ್ಗೆಯೂ ಅತಿಥಿವರೇಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ೭೫ನೇ ಹುಟ್ಟುಹಬ್ಬವನ್ನೂ ಆಚರಿಸಿದ್ದು, ‘ಪತ್ರಿಕೆ’ಯನ್ನು ಕಟ್ಟಿ ಬೆಳೆಸಿದ ಕೋಟಿ ಅವರ ಪರಿಶ್ರಮವನ್ನೂ, ಎದುರಿಸಿದ ಸವಾಲುಗಳನ್ನೂ ಸ್ನೇಹಿತರು, ಹಿತೈಷಿಗಳು, ಒಡನಾಡಿಗಳು ಸ್ಮರಿಸಿದರು. ೫೦ ವರ್ಷಗಳ ಹಿಂದೆ ಧಾರವಾಡದಲ್ಲಿ ಆರಂಭವಾದ ‘ಆಂದೋಲನ’ ಮತ್ತು ಅದರ ಸಂಸ್ಥಾಪಕ ಸಂಪಾದಕರು ಸಾಂಸ್ಕೃತಿಕ ನಗರಿಗೆ ಬಂದು, ಸಮಾನ ಮನಸ್ಕ ಗೆಳೆಯರು, ಸಮಾಜವಾದಿಗಳ ಅದ್ಭುತ ಸಹಕಾರದಿಂದ ಬೇರೂರಿದ ಸಾರ್ಥಕತೆಯ ದಿನಗಳು, ಪ್ರಸಂಗಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.

ಸಾವಿರಾರು ಸಭಿಕರ ಉಪಸ್ಥಿತಿಯಲ್ಲಿ ವಿಶಾಲವಾದ ವೇದಿಕೆಯಲ್ಲಿ ಶಿಸ್ತುಬದ್ಧವಾಗಿ ರೂಪಿಸಿದ ‘ಆಂದೋಲನ- ೫೦ರ ಸಾರ್ಥಕ ಪಯಣ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಆಂಗ್ಲ ಭಾಷೆಯಲ್ಲಿ ‘ಆಂದೋಲನ’ ಸೇರಿದಂತೆ ಇಡೀ ಭಾರತದ ಪತ್ರಿಕೋದ್ಯಮದ ಬಗ್ಗೆ ತಮ್ಮ ಎಂದಿನ ಶೈಲಿಯಲ್ಲಿ ಚಾಟಿ ಬೀಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಂದೋಲನ’ ದಿನಪತ್ರಿಕೆಯ ಆರಂಭದ ಘಟ್ಟವನ್ನು ಬಿಡಿಸಿಟ್ಟರಲ್ಲದೆ, ಪತ್ರಿಕೆ ಎಲ್ಲ ಬಗೆಯ ಜನಪರ ಚಳವಳಿಗಳನ್ನೂ ಬೆಂಬಲಿಸುತ್ತಾ, ತಾನೂ ಬೆಳೆದ ಬಗೆಯನ್ನು ವಿವರಿಸಿದರು. ನಟ ಶಿವರಾಜ್ ಕುಮಾರ್ ಅವರು ತಮಗೆ ಗೊತ್ತಿರುವ ಕೆಲವೇ ಪತ್ರಿಕೆಗಳಲ್ಲಿ ‘ಆಂದೋಲನ’ವೂ ಒಂದು ಎನ್ನುವ ಮೂಲಕ ‘ಪತ್ರಿಕೆ’ಯ ಹರಹುವನ್ನು ಸಭಿಕರ ಮುಂದಿಟ್ಟರು.

ವೇದಿಕೆಯಲ್ಲಿ ರಾಜಶೇಖರ ಕೋಟಿ ಅವರನ್ನು ಕರೆತಂದಂತಹ ಅನುಭವ, ಆನಂದಕ್ಕೆ ಕಾರಣವಾಗಿದ್ದು ಸಾಕ್ಷ್ಯಚಿತ್ರ ಬಿಡುಗಡೆ. ಕೋಟಿಯವರು ಹರಯದಲ್ಲಿ ಗಡ್ಡಧಾರಿಯಾಗಿದ್ದಾಗಿನ ಚಿತ್ರದಿಂದ ಆರಂಭವಾಗಿ ಹಲವು ಬಗೆಯ ಹಳೆಯ ಫೋಟೊಗಳನ್ನು ಹಿನ್ನೆಲೆ ಧ್ವನಿಯಲ್ಲಿ ಅತ್ಯಂತ ಸುಂದರವಾಗಿ ಮೂಡಿಬರುವಂತೆ ಮಾಡಲಾಗಿತ್ತು. ಕೋಟಿಯವರ ನಿಷ್ಕಲ್ಮಶ ನಗುಮುಖ, ಮಮತೆಯ ‘ಕೋಠಿ’ಯೇ ಆಗಿದ್ದ ಕಂಗಳು ಸಭಿಕರ ಮನದಾಳದಲ್ಲಿ ಶಾಶ್ವತವಾಗಿ ಅಚ್ಚೊತ್ತುವಂತೆ ಮಾಡಿತ್ತು.

ಯಾವುದೇ ಅಡೆತಡೆ ಇಲ್ಲದೆ, ವ್ಯವಸ್ಥಿತ ರೀತಿಯಲ್ಲಿ ನಡೆದ ಕಾರ್ಯಕ್ರಮವು ‘ಆಂದೋಲನ’ ಬಳಗದ ನಿರಂತರ ಶ್ರಮಕ್ಕೆ ಕನ್ನಡಿ ಹಿಡಿದಿತ್ತು. ವೇದಿಕೆಯ ಹಿಂದೆ ಕಾರ್ಯಕ್ರಮವನ್ನು ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡಿದ್ದು ಇನ್ನೊಂದು ವಿಶೇಷವಾಗಿ ನೋಡುಗರ ಮನಸೂರೆಗೊಂಡಿತ್ತು.

ಕಾರ್ಯಕ್ರಮದಲ್ಲಿ ತರಾತುರಿ ಇರಲಿಲ್ಲ. ಬಂದವರಿಗೆ ಕಾರ್ಯಕ್ರಮದ ಉದ್ದೇಶ, ‘ಆಂದೋಲನ’ ಉಗಮ, ಅದರ ಸ್ಥಾಪನೆಗೆ ರಾಜಶೇಖರ ಕೋಟಿ ಅವರಿಗಿದ್ದ ಕಾರಣ, ಕಾರ್ಯ, ಉತ್ತರ ಕರ್ನಾಟಕದಿಂದ ಬರಿಗೈಲಿ ಬಂದು ಶ್ರೀಗಂಧದ ನಾಡು ಮೈಸೂರಿನಲ್ಲಿ ತಮ್ಮದೇ ಛಾಪು ಮೂಡಿಸಿದ ಬಗ್ಗೆ ಅರಿಯುವ ಅದಮ್ಯ ಕುತೂಹಲ ಎದ್ದು ಕಾಣುತ್ತಿತ್ತು.

 

 

ಮಾಧ್ಯಮಗಳು ಈಗಂತೂ ಕುಟುಂಬದ ವಿಷಯಗಳೂ ಸೇರಿದಂತೆ ಜನರಿಗೆ ಅನಗತ್ಯವಾದ ಸುದ್ದಿಗಳನ್ನೇ ಬಿತ್ತರಿಸುತ್ತಿವೆ. ಇದರಿಂದ ಜನರೂ ಮಾಧ್ಯಮಗಳ ಬಗ್ಗೆ ಅಗೌರವ ತೋರುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಇಂಥ ಮನಸ್ಥಿತಿ ಮಾಧ್ಯಮಗಳಲ್ಲಿ ಬದಲಾಗಬೇಕು. ರೋಚಕ, ಸುಳ್ಳು ಸುದ್ದಿಗಳಿಗೆ ಮಾಧ್ಯಮಗಳು ಒತ್ತು ನೀಡಬಾರದು. -ಸಿದ್ದರಾಮಯ್ಯ, ಮಾಜಿ ಸಿಎಂ

‘ಆಂದೋಲನ’ವನ್ನು ಕ್ರಿಯಾಶೀಲ ಮತ್ತು ರಚನಾತ್ಮಕ ಪತ್ರಿಕೆಯನ್ನಾಗಿ ಬೆಳೆಸಿದ ಕೋಟಿಯವರು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಹಕಾರ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜಶೇಖರ ಕೋಟಿಯವರ ಆಶಯಗಳಿಗೆ ಅನುಗುಣವಾಗಿ ಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ. – ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವರು


ಸಿನಿಮಾ ಕುರಿತು ಮಾತನಾಡುವ ಮಟ್ಟಿಗೆ ರಾಜಕೀಯ ಮತ್ತು ಪತ್ರಿಕೆಗಳ ಕುರಿತು ಮಾತನಾಡಲಾರೆ. ಆದರೆ ಚಿತ್ರ ರಂಗಕ್ಕೂ ಪತ್ರಿಕಾರಂಗಕ್ಕೂ ಬಹಳ ನಂಟಿದೆ. ‘ಆಂದೋಲನ’ ೫೦ ವರ್ಷಗಳನ್ನು ಪೂರೈಸಿರುವುದು ಬಹಳ ಸಂತೋಷ ತಂದಿದೆ. ಕೋಟಿ ಅವರು ಈ ರಂಗಕ್ಕೆ ಬೇರೆಯದೇ ತಿರುವು ನೀಡಿದ್ದರು.  –  ಶಿವರಾಜಕುಮಾರ್, ಹಿರಿಯ ನಟ


ಓದುಗರು, ಅನೇಕ ಹೋರಾಟಗಾರರು, ಸಾಹಿತಿ ಗಳು, ಕಲಾವಿದರು, ಪತ್ರಕರ್ತರು ಪತ್ರಿಕೆಗೆ ಹೆಗಲು ನೀಡಿದ್ದೀರಿ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೊಸ ಸ್ವರೂಪಗಳೊಂದಿಗೆ ‘ಆಂದೋಲನ’ ಮುಂದುವರಿಯುತ್ತಿದೆ. – ರಶ್ಮಿ ಕೋಟಿ, ವ್ಯವಸ್ಥಾಪಕ ಸಂಪಾದಕರು, ‘ಆಂದೋಲನʼ

 

 

andolana

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

7 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

9 hours ago