ಭರವಸೆ ಕಳೆದುಕೊಳ್ಳದ ಶ್ರಮಜೀವಿಗಳು

ಕೋವಿಡ್ ಕಾರಣಕ್ಕೆ ೨೦೨೦ರ ಮಾರ್ಚ್ನಿಂದ ಶಾಲೆಗಳು ನಡೆಯುತ್ತಿಲ್ಲ. ಬಡ ಮಕ್ಕಳ ಪಾಠ ಮತ್ತು ಊಟ ಎರಡಕ್ಕೂ ಧಕ್ಕೆ ಉಂಟಾಗಿದೆ. ಇದು ಒಂದೆಡೆಯಾದರೆ, ಮಕ್ಕಳಿಗೆ ಪಾಠ ಮಾಡುವ ಅತಿಥಿ ಶಿಕ್ಷಕರು, ಊಟ ಬಡಿಸುವವರು ಸಂಬಳವಿಲ್ಲದೆ ಕಂಗಾಲಾಗಿರುವುದು ಇನ್ನೊಂದೆಡೆ!

ಮೈಸೂರಿನ ಶಾಲೆಯೊಂದರಲ್ಲಿ ದಶಕಗಳಿಂದ ಬಿಸಿಯೂಟ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಆಕೆ ಒಂಟಿ ಮಹಿಳೆ. ಪರವೂರಿನಿಂದ ಬಂದು ಮೈಸೂರಿನಲ್ಲಿ ಆಸರೆ ಪಡೆದುಕೊಂಡವರು. ಗಂಡ, ಮಕ್ಕಳು ಯಾರೂ ಇಲ್ಲ. ತನ್ನ ದುಡಿತದಿಂದ ಬರುವ ಗೌರವಧನದಿಂದಲೇ ಬದುಕು. ಮೊದಲ ಲಾಕ್ ಡೌನ್ ಅವಧಿಯಲ್ಲಿ ತಿಂಗಳು ಗಟ್ಟಲೆ ಸರ್ಕಾರ ಗೌರವಧನವನ್ನೇ ನೀಡಲಿಲ್ಲ. ಬೇರೆ ಕೆಲಸ ದೊರಕುವುದೂ ಆಗ ಸಾಧ್ಯವಿರಲಿಲ್ಲ. ಮನೆಗೆ ಬೇಕಾದ ದಿನಸಿ ತರಲೂ ಸಾಧ್ಯವಾಗದೆ ಒದ್ದಾಡಿದರು. ಬಾಡಿಗೆ ಕಟ್ಟುವಂತೆ ಮನೆಯ ಮಾಲೀಕನ ಒತ್ತಾಯ ಬೇರೆ. ಕಂಗಾಲಾದ ಆಕೆ ಮನೆಗೆ ಬೀಗ ಜಡಿದು ಸಂಬಂಧಿಕರ ಹಳ್ಳಿಗೆ ತೆರಳಿದರು. ಅಲ್ಲಿ ಏನೋ ಕೈಗೆಲಸಗಳನ್ನು ಮಾಡಿ ಬದುಕಿ ಉಳಿದು ಲಾಕ್ ಡೌನ್ ಮುಗಿದ ಮೇಲೆ ಮೈಸೂರಿಗೆ ವಾಪಸ್ ಬಂದರು. ಈಗ ಊಟಕ್ಕೆ ಸಮನಾದ ನಗದನ್ನು ಮಕ್ಕಳ ಖಾತೆಗೆ ವರ್ಗಾಯಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಬಿಸಿಯೂಟ ನೌಕರರ ಭವಿಷ್ಯ ಏನೆಂಬುದು ಅನಿಶ್ಚಿತ.

ಇನ್ನು ಕಾಲೇಜುಗಳ ಕಥೆಯೂ ಭಿನ್ನವಾಗಿಲ್ಲ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳು (ಸಿಡಿಸಿ) ಬೋಧಕೇತರ ಕೆಲಸಗಳಿಗೆ ನೌಕರರನ್ನು ನೇಮಕ ಮಾಡಿಕೊಂಡಿವೆ. ಇಂತಹ ಒಂದೂವರೆ ಸಾವಿರ ನೌಕರರು ರಾಜ್ಯದಲ್ಲಿದ್ದಾರೆ. ಇವರಿಗೆ ಕನಿಷ್ಟ ವೇತನ ಎಂಬುದಿಲ್ಲ, ಒಂದೊಂದು ಕಾಲೇಜಿನಲ್ಲಿ ಒಂದೊಂದು ಸಂಬಳ. ಕೆಲಸದ ಸ್ವರೂಪವೂ ಬೇರೆಬೇರೆ. ಶಾಶ್ವತ ಸ್ವರೂಪದ ಕೆಲಸಗಳಿಗೆ ಇಲಾಖೆ ಹುದ್ದೆಗಳನ್ನೇ ಸೃಷ್ಟಿಸಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಇವರಿಗೆ ವೇತನವೂ ಇಲ್ಲ. ಇಂತಹ ಒಂದು ಕಾಲೇಜಿನಲ್ಲಿ ದುಡಿಯುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಕೆಲಸ ಕಳೆದುಕೊಂಡರು. ಇಬ್ಬರು ಹೆಣ್ಣುಮಕ್ಕಳಿರುವ, ಗಂಡ ಇಲ್ಲದ ಆಕೆಗೆ ಲಾಕ್ ಡೌನ್ ಅವಧಿಯಲ್ಲಿ ಆದಾಯವೇ ಇಲ್ಲದಂತಾಯಿತು. ಬಾಡಿಗೆ ಕಟ್ಟದ ಕಾರಣ ಮನೆ ಮಾಲೀಕ ಮನೆಯಿಂದ ಹೊರಹಾಕಿದ. ಇಬ್ಬರು ಹೆಣ್ಣುಮಕ್ಕಳೊಂದಿಗೆ ಆಕೆ ಒಂದು ಪಾಳು ದೇಗುಲದಲ್ಲಿ ದಿನಗಟ್ಟಲೆ ಕಳೆಯಬೇಕಾಯಿತು.

ತಮ್ಮ ಶ್ರಮವನ್ನೇ ನಂಬಿರುವ ಜನ ಜೀವನದಲ್ಲಿ ಭರವಸೆ ಕಳೆದುಕೊಳ್ಳುವುದಿಲ್ಲ. ಸಣ್ಣ ಪುಟ್ಟ ಕಾರಣಗಳಿಗೆ ಬದುಕು ಬೇಡ ಎನಿಸುವ ಮಂದಿ ಇವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಇಬ್ಬರು ಮಹಿಳೆಯರ ಬದುಕುವ ಛಲಕ್ಕೆ ಒಂದು ಸಲಾಂ ಹೇಳೋಣ. ಇಂತಹ ಪರಿಸ್ಥಿತಿಗೆ ಅವರನ್ನು ತಳ್ಳಿದ ಸರ್ಕಾರವನ್ನು ಪ್ರಶ್ನಿಸೋಣ.

  • ಬಿ.ರವಿ, ಜಿಲ್ಲಾ ಕಾರ್ಯದರ್ಶಿ, ಎಸ್ಯುಸಿಐ(ಸಿ), ಮೈಸೂರು
× Chat with us