ಜೂ. ೨ ರಂದು ವಿಶ್ವ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನವನ್ನು ದೇಶದಾದ್ಯಂತ ಆಚರಣೆ
ಲೈಂಗಿಕ ಕಾರ್ಯಕರ್ತರ ಸಂಬಂಧ ಇತ್ತೀಚೆಗೆ ಸುಪ್ರಿಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಮುನ್ನಲೆಗೆ ಬಂದಿದ್ದು ಈ ಸಂಬಂಧವಾಗಿ ಒಂದು ಅವಲೋಕನ ಇಲ್ಲಿದೆ.
ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು ಪ್ರತಿ ವರ್ಷ ಜೂನ್ ೨ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನ ವನ್ನು ಆಚರಿಸಲಾಗುತ್ತದೆ. ಲೈಂಗಿಕ ಕೆಲಸದಲ್ಲಿ ತೊಡಗಿರುವವರು ಕಷ್ಟಗಳು ಮತ್ತು ಅವಮಾನಗಳನ್ನು ಎದುರಿಸುತ್ತಲೇ ಇರುತ್ತಾರೆ.ಕಾರ್ಯಕರ್ತರು ಅಪರಾಧೀಕರಣ, ಹಿಂಸಾಚಾರ, ತಾರತಮ್ಯ ಮತ್ತು ಇತರ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಅನುಭವಿಸುತ್ತಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಸೆಕ್ಸ್ ವರ್ಕರ್ಸ್ ಡೇ ಆಚರಿಸಲು ನಿರ್ಧರಿಸಲಾಯಿತು.
ಸುಪ್ರಿಂ ಕೋರ್ಟ್ ನ ನ್ಯಾಯಾಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಸ್ವಯಂಪ್ರೇರಿತ ಲೈಂಗಿಕ ವೃತ್ತಿ ಕಾನೂನು ಬಾಹಿರವಲ್ಲ ಎಂದಿದ್ದು, ಸ್ವಯಂಪ್ರೇರಿತ ಲೈಂಗಿಕ ಕೆಲಸವು ಕಾನೂನುಬಾಹಿರವಲ್ಲದ ಕಾರಣ ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವ ಮೂಲಕ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು ಅಥವಾ ಕಿರುಕುಳ ನೀಡಬಾರದು ಎಂದು ಹೇಳಿದೆ. ಲೈಂಗಿಕ ಕಾರ್ಯಕರ್ತರನ್ನು ಸಭ್ಯತೆ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ವಯಸ್ಕರು ಒಪ್ಪಿಗೆಯ ಲೈಂಗಿಕ ಕೆಲದಸದಲ್ಲಿ ತೊಡಗಿದಾಗ ಪೊಲೀಸರು ಮಧ್ಯಪ್ರವೇಶಿಸಬಾರದು ಅಥವಾ ಯಾವುದೇ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಸಂಬಂಧವಾಗಿ ಬೌದ್ಧಿಕ ವಲಯದಲ್ಲಿ ದೊಡ್ಡಮಟ್ಟದ ಚೆರ್ಚೆ ನಡೆಯುತ್ತಿದ್ದು, ಅದರ ವಿಶ್ಲೇಷಣೆಗಳು ಮುನ್ನಲೆಗೆ ಬಂದಿದೆ.
ಈ ಕುರಿತು ‘ಆಂದೋಲನ’ ದಿನ ಪತ್ರಿಕೆಯು ಕರ್ನಾಟಕ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಸದಸ್ಯರಾದ ರೂಪ ಹಾಸನ ಅವರು, ವೇಶ್ಯಾವಾಟಿಕೆ ಒಂದು ಸಂಕೀರ್ಣ ಮತ್ತು ಜಟಿಲ ಸಮಸ್ಯೆಯಾಗಿದ್ದು , ಇದನ್ನು ಬಹು ಆಯಾಮಗಳಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಹೆಣ್ಣುಮಕ್ಕಳ ಕಳ್ಳಸಾಗಣೆ ಮತ್ತು ಮಾರಾಟ ಇಂದು ವ್ಯಾಪಕವಾಗಿರುವುದನ್ನು ಮುಖ್ಯವಾಗಿ ಪರಿಗಣಿಸಿ ಅದಕ್ಕೆ ರಕ್ಷಣಾತ್ಮಕ ೋಂಜನೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ಕುರಿತ ಪೊಲೀಸ್ ಮತ್ತು ಕಾನೂನು ಅನುಷ್ಠಾನದ ಲೋಪ ಗಮನಾರ್ಹವಾಗಿದ್ದು. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿರುವಾಗ ಈ ಮೂಲಕ ವೇಶ್ಯಾಗೃಹಗಳಿಗೆ ತಳ್ಳಲ್ಪಡುವ ಹೆಣ್ಣುಮಕ್ಕಳ ಸಮಸ್ಯೆಯನ್ನು ನಿರ್ಲಕ್ಷಿಸಿ, ಅವರನ್ನು ವೇಶ್ಯಾವೃತ್ತಿಯಲ್ಲಿದ್ದಾರೆಂದು ಸುಮ್ಮನಾಗುವುದು ಅಮಾನವೀಯ. ಸರ್ಕಾರವು ಬೆಂದು ನರಳುತ್ತಿರುವ ಜೀವಗಳಿಗೆ ಆಸರೆಯಾಗುತ್ತ ಹೃದಯ ತೆರಯಲಿ ಎಂದು ನುಡಿದರು.
ಮುಂದುವೆರೆದು ಮಾತನಾಡಿದ ಅವರು, ಭಾರತದಂತಹ ದೇಶದಲ್ಲಿ ಬಡತನ, ನಿರುದ್ಯೋಗ, ವಲಸೆ, ಬಾಲ್ಯವಿವಾಹದ ಅನಿವಾರ್ಯತೆಗೆ ಸಿಕ್ಕಿಕೊಂಡ ತಳಸಮುದಾಯ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದು ನರಕ ಯಾತನೆ ಅನುಭವಿಸುತ್ತಿರುವಾಗ, ಇದನ್ನು ಅವರು ಸಂತೋಷದಿಂದ ಮಾಡುತ್ತಿರುವ ವೃತ್ತಿ ಎಂದು ಪರಿಗಣಿಸುವುದೂ ಖಂಡನೀಯ ಮತ್ತು ಇದು ಮನುಷ್ಯತ್ವಕ್ಕೆ ಮಾಡುವ ಅವಮಾನ ಎಂದು ವಿಷಾದಿಸಿದರು.
ಯಾವುದೋ ಕಾರಣಕ್ಕೆ ಕಾಮುಕರ ಜಾಲಕ್ಕೆ ಸಿಕ್ಕಿಕೊಂಡು, ಆ ಜಾಲದಿಂದ ಹೊರಬರಲು ಹಾತೊರೆಯುತ್ತಿರುವವರ ಸಂಖ್ಯೆ ಬೃಹತ್ತಾಗಿದೆ. ಇವರ ಈ ಸ್ಥಿತಿಗೆ ಸರ್ಕಾರ ಮತ್ತು ವ್ಯವಸ್ಥೆಯ ಲೋಪವೇ ಪ್ರಮುಖ ಕಾರಣವಾಗಿರುವುದು ಅಕ್ಷಮ್ಯ ಎಂದು ಖಾರವಾಗಿ ನುಡಿದ ಅವರು, ಮುಂದೆ ಈ ಸ್ಥಿತಿ ತಮ್ಮ ಮಕ್ಕಳಿಗೆ ಬರದಿರಲೆಂದು ತಳಮಳಿಸುತ್ತಿರುವ ಇಂತಹ ದಮನಿತರನ್ನು ಸಶಕ್ತವಾಗಿ ಪುನರ್ವಸತಿಗೊಳಿಸಲು ತಕ್ಷಣವೇ ಸರ್ಕಾರ ಕಾರ್ಯೋಂಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಈ ಕರುಣಾಜನಕ ಸಮಸ್ಯೆಗಳಿಗೆ ಹೋಲಿಸಿದರೆ ಇಷ್ಟಪಟ್ಟು ವೇಶ್ಯಾವಾಟಿಕೆಯಲ್ಲಿ ಇರಬಯಸುವ ಕೆಲವರ ಸಮಸ್ಯೆಗೆ ಬೇರೆಯದೇ ಆಯಾಮ ಇದೆ. ಅದಕ್ಕೆ ಕಾನೂನಿನ ಬೆಂಬಲವಂತೂ ಇದೆ. ಅದರ ಸಮರ್ಪಕ ಅನುಷ್ಠಾನ ಈಗಲಾದರೂ ಆಗುವಂತಾಗಲಿ. ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಹಬದಿಗೆ ಬರುವಂತಾಗಲಿ.