ಸಾಲುಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ನೋಂದಣಿ ಪತ್ರ ಹಸ್ತಾಂತರ

ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್​ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ನೀಡಿದರು.

ಸಂದರ್ಭದಲ್ಲಿ ಮಾತನಾಡಿದ ಬಿಡಿಎ ವಿಶ್ವನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲುಮರದ ತಿಮ್ಮಕ್ಕರಿಗೆ ನಿವೇಶನ ನೀಡಿರುವುದರಿಂದ ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಆನಂದ್, ಉಪಕಾರ್ಯದರ್ಶಿ ಡಾ.ಮಧು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.