ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮದುವೆಯಾದ ಮೈಸೂರಿನ ಯುವಕ ಆದಿಲ್ ಖಾನ್ ದುರಾನಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ರಾಖಿಯನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಓಶಿವಾರ ಪೊಲೀಸರು ಆದಿಲ್ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ರಾಖಿ ಸಾವಂತ್ ಅವರು ಓಶಿವರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲಿ ದಾಖಲಿಸಿದ ಕಾರಣಗಳು ಯಾವುದೆಂದು ತಿಳಿದುಬಂದಿಲ್ಲ. ಆದಿಲ್ ಖಾನ್ ಇಟ್ಟುಕೊಂಡಿದ್ದ ವಿವಾಹೇತರ ಸಂಬಂಧ ಈ ಎಫ್ಐಆರ್ಗೆ ಕಾರಣ ಎನ್ನಲಾಗುತ್ತಿದೆ.
ಈ ಹಿಂದೆ ರಾಖಿ ಸಾವಂತ್ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ತನ್ನ ತಾಯಿಯ ಚಿಕಿತ್ಸೆಗೆ ಆದಿಲ್ ಹಣ ನೀಡಿಲ್ಲ. ಆದಿಲ್ ಖಾನ್ನಿಂದಾಗಿಯೇ ತಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದರು.
ತನ್ನಿಂದ ಬೇರ್ಪಟ್ಟು ಗೆಳತಿ ತನು ಜೊತೆ ವಾಸಿಸುತ್ತಿದ್ದೇ ನೆ ಎಂದು ಆದಿಲ್ ಖಾನ್ ದುರಾನಿ ಹೇಳಿದ್ದಾಗಿ ಕೂಡ ನಟಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.
ಆದಿಲ್ ತನ್ನ ಗೆಳತಿ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ರಾಖಿ ಮಾಧ್ಯಮಗಳಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಅವರು ಆದಿಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದಿಲ್ ತನ್ನನ್ನು ನಿಂದಿಸುವ ಮೂಲಕ ಬಾಲಿವುಡ್ ನಲ್ಲಿ ಸ್ಟಾರ್ ಆಗಲು ಹೊರಟಿದ್ದಾರೆ. ತನ್ನ ಬಳಿ ಇದ್ದ ಎಲ್ಲ ಹಣವನ್ನು ತೆಗೆದುಕೊಂಡಿದ್ದಾರೆ. ಆದಿಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ರಾಖಿ ತಿಳಿಸಿದ್ದಾರೆ.
ರಾಖಿ ಅವರು ಆದಿಲ್ ಜೊತೆ ಮುಂಬೈನ ಹೋಟೆಲ್ ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಒಬ್ಬರನ್ನೊಬ್ಬರು ಮುದ್ದಿಸುವುದೂ ಕೂಡ ಕಂಡು ಬಂದಿತ್ತು.
ಹೊಸ ವರ್ಷದ ಆರಂಭದಲ್ಲೇ ಆದಿಲ್ ಜೊತೆ ಮದುವೆಯಾಗಿರುವ ಬಗ್ಗೆ ರಾಖಿ ಮಾಹಿತಿ ಮಾಹಿತಿ ಹಂಚಿಕೊಂಡಿದ್ದರು. ಏಳು ತಿಂಗಳ ಹಿಂದೆ ಆದಿಲ್ ಅವರನ್ನು ರಾಖಿ ವಿವಾಹವಾಗಿರುವುದಾಗಿ ತಿಳಿಸಿದ್ದರು. ಆದಿಲ್ ಜೊತೆಗಿನ ರಾಖಿಯ ಮದುವೆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.
ಕೆಲ ದಿನಗಳ ಹಿಂದೆ ನಟಿ ರಾಖಿ ಸಾವಂತ್ ತಾಯಿ ಜಯಾ ಭೇದಾ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ರಾಖಿ ಸಾವಂತ್ ಮತ್ತು ಪತಿ ಆದಿಲ್ ಖಾನ್ ದುರಾನಿ ನಡೆಸಿಕೊಟ್ಟಿದ್ದರು . ಆ ವೇಳೆ ಆದಿಲ್ ರಾಖಿ ಜೊತೆಯೇ ಇದ್ದರು.