ರೂಪದರ್ಶಿಗೆ ಕೆಟ್ಟ ರೀತಿಯ ಕೇಶ ವಿನ್ಯಾಸ: 2 ಕೋಟಿ ಪರಿಹಾರ ನೀಡಲು ಸಲೂನ್‌ಗೆ ಆದೇಶ

ಹೊಸದಿಲ್ಲಿ: ಐಟಿಸಿ ಹೋಟೆಲ್‌ ಸಮೂಹದ (ಸಲೂನ್)‌ ಸಿಬ್ಬಂದಿ ಮಾಡಿದ ಕೆಟ್ಟ ರೀತಿಯಲ್ಲಿ ಕೇಶ ವಿನ್ಯಾಸದಿಂದಾಗಿ ಮಾಡೆಲ್‌ ಆಗುವ ಕನಸು ಭಗ್ನಗೊಂಡ ರೂಪದರ್ಶಿಗೆ 2 ಕೋಟಿ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ತನ್ನ ಸಲೂನ್‌ ಮೂಲಕ ಕೇಶ ಸೇವೆಯನ್ನು ನೀಡುವಲ್ಲಿ ಲೋಪವೆಸಗಿದ ಪಂಚತಾರಾ ಹೋಟೆಲ್ ಐಟಿಸಿ ಮೌರ್ಯಗೆ ರೂಪದರ್ಶಿ ಆಶ್ನಾ ರಾಯ್ ಅವರಿಗೆ ಪರಿಹಾರ ನೀಡುವಂತೆ ಅಯೋಗ ಸೂಚಿಸಿದೆ.‌

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ನ್ಯಾ. ಆರ್‌.ಕೆ.ಅಗರ್‌ವಾಲ್ ಮತ್ತು ಸದಸ್ಯ ಡಾ. ಎಸ್‌.ಎಂ.ಕಾನಿಟ್ಕರ್‌ ಅವರಿದ್ದ ಪೀಠವು ಮಹಿಳೆಯರು ತಮ್ಮ ಕೇಶದ ವಿಷಯದಲ್ಲಿ ಅತ್ಯಂತ ʻಜಾಗರೂಕತೆ ಮತ್ತು ಎಚ್ಚರʼದಿಂದ ಇರುತ್ತಾರೆ. ʻತಮ್ಮ ಕೇಶರಾಶಿಯನ್ನು ಉತ್ತಮವಾಗಿರಿಸಿಕೊಳ್ಳಲು ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ತಮ್ಮ ತಲೆಗೂದಲೊಂದಿಗೆ ಅವರಿಗೆ ಭಾವುಕ ನಂಟಿರುತ್ತದೆʼ ಎಂದು ಅಭಿಪ್ರಾಯಪಟ್ಟಿತು.

ರೂಪದರ್ಶಿ ವಿಎಲ್‌ಸಿಸಿ ಮತ್ತು ಪ್ಯಾಂಟೀನ್‌ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಕೆಟ್ಟ ರೀತಿಯ ಕೇಶವಿನ್ಯಾಸದಿಂದ ಆಕೆ ತನ್ನ ನಿರೀಕ್ಷಿತ ಯೋಜನೆಗಳನ್ನು ಕಳೆದುಕೊಳ್ಳುವಂತಾಯಿತು. ಸಿಬ್ಬಂದಿಯ ಲೋಪದಿಂದಾಗಿ ರೂಪದರ್ಶಿಯ ತಲೆ ಚರ್ಮ ಸುಟ್ಟಿದ್ದು, ಅಲರ್ಜಿ ಹಾಗೂ ತುರಿಕೆ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರೆ ರೂಪದರ್ಶಿಯಾದ ಆಶ್ನಾ ರಾಯ್‌ ನವದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‌ನ ಸಲೂನ್‌ಗೆ 2018ರ ಏಪ್ರಿಲ್‌ ತಿಂಗಳಲ್ಲಿ ಕೇಶ ವಿನ್ಯಾಸಕ್ಕಾಗಿ ಭೇಟಿ ಇತ್ತರು. ಆಕೆ, ಆನಂತರದ ವಾರದಲ್ಲಿ ಸಂದರ್ಶನ ಸಮಿತಿಯೊಂದರ ಮುಂದೆ ಯೋಜನೆಯೊಂದರ ಸಲುವಾಗಿ ಕಾಣಿಸಿಕೊಳ್ಳಬೇಕಿದ್ದರಿಂದ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಅಗತ್ಯತೆ ಇತ್ತು. ಸಲೂನ್‌ನಲ್ಲಿ ತಾವು ಯಾವಾಗಲೂ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದ ಹೇರ್‌ಡ್ರೆಸರ್‌ಗಾಗಿ ಆಶ್ನಾ ಬೇಡಿಕೆ ಇರಿಸಿದರು. ಆದರೆ, ಆಕೆ ಲಭ್ಯವಿಲ್ಲದ ಕಾರಣಕ್ಕೆ ಮತ್ತೋರ್ವ ವಿನ್ಯಾಸಕಾರ್ತಿಯನ್ನು ಅವರಿಗೆ ನೀಡಲಾಯಿತು.

ಕೇಶ ವಿನ್ಯಾಸದ ವೇಳೆ ಆಶ್ನಾ ರಾಯ್‌ ಅವರ ಅಣತಿಗೆ ವಿರುದ್ಧವಾಗಿ ವಿನ್ಯಾಸಕಾರ್ತಿಯು ಅವರ ತಲೆಗೂದಲನ್ನು ಕತ್ತರಿಸಿದ್ದರು. ಉದ್ದವಿರುವ ತಲೆಗೂದಲನ್ನು ‘ಲಾಂಗ್‌ ಫ್ಲಿಕ್ಸ್/ಲೇಯರ್ಸ್’ ರೀತಿಯಲ್ಲಿ ಬರುವಂತೆ, ನಾಲ್ಕು ಇಂಚಷ್ಟೇ ಉದ್ದವನ್ನು ಕಡಿಮೆ ಮಾಡುವಂತೆ ಆಶ್ನಾ ಸೂಚಿಸಿದ್ದರು. ಆಶ್ನಾ ಕನ್ನಡಕವನ್ನು ಧರಿಸುತ್ತಿದ್ದ ಕಾರಣಕ್ಕೆ ಹಾಗೂ ದೃಷ್ಟಿ ದೋಷವನ್ನು ಹೊಂದಿದ್ದರಿಂದ ಒಮ್ಮೆ ಕೇಶ ವಿನ್ಯಾಸಕ್ಕೆ ಕೂತು ತಲೆತಗ್ಗಿಸಿದ ನಂತರ ಅವರಿಗೆ ತಲೆ ಮೇಲೆ ಎತ್ತಿ ತಮ್ಮ ಕೇಶ ವಿನ್ಯಾಸವನ್ನು ಗಮನಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇತ್ತ ವಿನ್ಯಾಸವನ್ನು ಮಾಡಿದ ವಿನ್ಯಾಸಕಾರ್ತಿಯು ಕೇವಲ ನಾಲ್ಕು ಇಂಚು ಕೂದಲನ್ನು ಮಾತ್ರವೇ ಉಳಿಸಿ ಉಳಿದ ತಲೆಕೂದಲನ್ನು ಕತ್ತರಿಸಿದ್ದಳು. ಇದರಿಂದ ಆಶ್ನಾ ತೀವ್ರ ಆಘಾತಕ್ಕೆ ಒಳಗಾದರು. ಆಶ್ನಾ ಹೇಳಿದ್ದ ವಿನ್ಯಾಸಕ್ಕೆ ಬದಲಾಗಿ, ವಿನ್ಯಾಸಕಾರ್ತಿಯು ತುಂಡುಗೂದಲಿನ ‘ಲಂಡನ್‌ ಹೇರ್‌ಕಟ್‌’ ವಿನ್ಯಾಸವನ್ನು ಮಾಡಿದ್ದರು.
ಇದರಿಂದ ತೊಂದರೆಗೆ ಒಳಗಾದ ರೂಪದರ್ಶಿ ರಾಷ್ಟ್ರೀಯ ಗ್ರಾಹಕ ವ್ಯಾಹ್ಯಗಳ ಪರಿಹಾರ ಆಯೋಗದ ಮುಂದೆ ತನ್ನ ರೂಪದರ್ಶಿ ವೃತ್ತಿಯೊಂದಿಗೆ ಚೆಲ್ಲಾಟವಾಡಿದ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದರು.