ಬ್ಯಾಂಕ್ ಬಡ್ಡಿ ದರಗಳು ಏರುಮುಖವಾಗಲಿವೆಯೇ?

ಎಲ್ಲ ರಂಗಗಳೂ ಸಾಲಕ್ಕಾಗಿ ಬಾಯಿಬಿಟ್ಟುಕೊಂಡು ಕೂತಿವೆ

ಕೇಂದ್ರ ಮುಂಗಡ ಪತ್ರ ಮಂಡನೆಯ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಫೆಬ್ರವರಿ ಐದರಂದು ೨೦೨೦- ೨೧ರ ಕೊನೆಯ ದ್ವೈಮಾಸಿಕ ಹಣಕಾಸು ನೀತಿ ವಿಮರ್ಶೆಯನ್ನು ಪ್ರಕಟಿಸಿದೆ. ಆರ್ಥಿಕ ಬೆಲವಣಿಗೆಗೆ ಪೂರಕವಾದ ‘ಉದಾರ’ ನಿಲುವನ್ನು ಮುಂದುವರಿಸಿದ್ದಲ್ಲದೇ ಹಣಕಾಸು ನೀತಿಇಯ ಪ್ರಮುಖ ಸಾಧನಗಳಾದ (ನೀತಿ ಬಡ್ಡಿ ದರಗಳು) ರೆಪೊ ದರ, ರಿವರ್ಸ್ ರೆಪೊ ದರ ಮತ್ತು ಬ್ಯಾಂಕ್ ರೇಟ್‌ಗಳಲ್ಲಿ ಬದಲಾವಣೆ ಮಾಡಿಲ್ಲ. ಆದರೆ ಕೋವಿಡ್- ೧೯ ಕಾರಣದಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟದ ವಿಶೇಷ ಸಂದರ್ಭದಲ್ಲಿ ಆರ್ಥಿಕ ಚೇತರಿಕೆಗಾಗಿ ಸಡಿಲಗೊಳಿಸಲಾಗಿದ್ದ ಕೆಲವು ನೀತಿಗಳನ್ನು ನಿಧಾನವಾಗಿ ಹಂತ ಹಂತವಾಗಿ ಬಿಗಿಗೊಳಿಸುವ ಇಂಗಿತವನ್ನು ಸೂಚ್ಯವಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಅಥ್ ವ್ಯವಸ್ಥೆಗೆ ಆರ್ಥಿಕ ಪುನಶ್ಚೇತನಕ್ಕಾಗಿ ಅವಶ್ಯವಾಗಿರುವ ನಗದು ಹರಿವು (Liquidity) ಒದಗಿಸಲು ರಿಸರ್ವ್ ಬ್ಯಾಂಕ್ ಬದ್ಧವಾಗಿದೆ. ಅಲ್ಲದೇ ಪುನಶ್ಚೇತ ಬೆಳವಣಿಗೆಯಾಗಿ ಮುಂದುವರಿಯ ಬೇಕಾಗಿರುವ ಪೂರಕ ಹಣಕಾಸು ವಾತಾವರಣ ಕಲ್ಪಿಸಲು ಸದಾ ಸಿದ್ಧವಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಹಿಡಿದಿಡಲ್ಪಟ್ಟ (Pent up) ಗ್ರಾಹಕ ಮತ್ತು ಉತ್ಪಾದನಾ ವಲಯದ ಬೇಡಿಕೆ ಕಾಣಿಸಿಕೊಂಡು ಪೇಟೆಗಳಲ್ಲಿ ಚಟುವಟಿಕೆಗಳು ಹೆಚ್ಚುವಂತೆ ಮಾಡಿರುವ ದಿನಗಳು ಕಳೆದೆರಡು ತಿಂಗಳುಗಳಲ್ಲೇ (ನವೆಂಬರ್ ಮತ್ತು ಡಿಸೆಂಬರ್) ಮುಗಿದಿದ್ದು ಈಗ ವಾಸ್ತವವಾದ ಬೇಡಿಕೆಯ ಹೆಚ್ಚುವಿಕೆ ಮುಂದುವರಿಯುವ ದಿನಗಳ ಚಿತ್ರಣ ದಟ್ಟವಾಗಿ ಕಣ್ಣ ಮುಂದೆ ಕಾಣುತ್ತಿದೆ. ಇದು ಅರ್ಥ ಮಂತ್ರಿಗಳಂತೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರ ಖಚಿತ ಅಭಿಪ್ರಾಯವೂ ಹೌದು. ಅದಕ್ಕಾಗಿಯೇ ಅವರು ನಗದು ಹರಿವಿನ ಕೊರೆಯಾಗಬಾರದೆಂದು ಕಳೆದ ವರ್ಷ ಖರೀದಿಸಿದಂತೆ ೪ ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್ ಬಾಂಡುಗಳನ್ನು ಖರೀದಿಸುವುದನ್ನು ೨೦೨೧- ೨೨ ರಲ್ಲಿಯು ಮುಂದುವರಿಸುವ ಭರವಸೆಯನ್ನು ಕೊಟ್ಟಿದ್ದಾರೆ. ಅವಶ್ಯವಿದ್ದರೆ ಈ ಮೊತ್ತವನ್ನು ಹೆಚ್ಚಿಸುವ ಇರಾದೆಯನ್ನೂ ಪ್ರಕಟಿಸಲಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ (Inflation) ದರವು ಜನವರಿ ತಿಂಗಳಲ್ಲಿ ಶೇ.೪.೫ಕ್ಕೆ ಇಳಿದಿದ್ದು (ಡಿಸೆಂಬರ್ ತಿಂಗಳಲ್ಲಿ ಶೇ.೭.೦೫ ಕ್ಕಿಂತ ಹೆಚ್ಚಿತ್ತು) ಅದು ಅಂಗೀಕೃತ ಮಿತಿಯಲ್ಲಿಯೇ ಇರುವ ಕಾರಣದಿಂದ ಆರ್ಥಿಕ ಬೆಳವಣಿಗೆ ಕಡೆಗೆ ಆದ್ಯತೆ ಕೊಡಲು ಸಾಧ್ಯವಾಯಿತು. ಬ್ಯಾಂಕ್‌ಗಳು ಸರ್ಕಾರಿ ಬಾಂಡುಗಳನ್ನು ಖರೀದಿಸಿ ತಮ್ಮಲ್ಲೇ ನಗದೀಕರಣ ದಿನಾಂಕದವರೆಗೆ (Held to maturity) ಇಟ್ಟುಕೊಳ್ಳುವ ಮಿತಿಯನ್ನು ತಮ್ಮ ಒಟ್ಟು ಠೇವಣಿಗಳ ಶೇ.೧೯.೫ ರಷ್ಟು ಮೊದಲು ಇದ್ದದ್ದನ್ನು ಕಳೆದ ವರ್ಷ ಶೇ.೨೨.೦ಗೆ ಹೆಚ್ಚಿಸಲಾಗಿತ್ತು. ಈಗ ಇದೇ ಪ್ರಮಾಣವನ್ನು ಮಾರ್ಚ್ ೩೧, ೨೦೨೨ ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಈ ವರ್ಷದ ಕೊನೆ ತಿಂಗಳಲ್ಲಿ (ಫೆಬ್ರವರಿ ಮತ್ತು ಮಾರ್ಚ್) ಕೇಂದ್ರ ಸರ್ಕಾರ ಪೇಟೆಯಿಂದ ಸರ್ಕಾರದ ಬಾಂಡುಗಳ ಮೂಲಕ ೮೦,೦೦೦ ಕೋಟಿ ರೂ.ಗಳ ಸಾಲ ಮತ್ತು ೨೦೨೧- ೨೨ ರಲ್ಲಿ ಪಡೆಯಬೇಕೆಂದು ಬಜೆಟ್‌ನಲ್ಲಿ ಅಂದಾಜಿಸಿರುವ ೧೨ ಲಕ್ಷ ಕೋಟಿ ರೂ. ಸಾಲ ಪಡೆಯಲು ಸರ್ಕಾರಕ್ಕೆ ಅನುಕೂಲವಾಗಬಹುದು. ಇವೆರಡೂ ಪ್ರಸ್ತಾವನೆಗಳಿಂದ ಕಾರ್ಪೊರೇಟ್ ಬಾಂಡ್ ಪೇಟೆ ಮತ್ತು ಸರ್ಕಾರದ ಬಾಂಡ್ ಪೇಟೆ ಇನ್ನಷ್ಟು ಬೆಳೆದು ಜಾಗತಿಕ ಮಟ್ಟದಲ್ಲಿ ಪ್ರಬುದ್ಧ ಸಾಲಪತ್ರ ಪೇಟೆಯಾಗಿ ವಿದೇಶಿ ಬಂಡವಾಳ ಹೆಚ್ಚು ಹರಿದು ಬರಲು ಸಾಧ್ಯವಾಗಬಹುದು. ಅಲ್ಲದೆ ಸಣ್ಣ ಬಾಂಡ್ ಹೂಡಿಕೆದಾರರು ನೇರವಾಘಿ (ಬ್ರೋಕರರಿಲ್ಲದೆ) ವ್ಯವಹಾರ ಮಾಡಲು ರಿಸರ್ವ್ ಬ್ಯಾಂಕ್ ಈಗ ಅವಕಾಶ ಮಾಡಿಕೊಟ್ಟಿದೆ.
ನಗದು ನಿಧಿ ಪ್ರಮಾಣ ಏರಿಕೆ
ಕಾಯ್ದೆ ಪ್ರಕಾರ ಬ್ಯಾಂಕ್‌ಗಳು ತಮ್ಮ ಒಟ್ಟು ಠೇವಣಿಗಳ (Time and Demand Liabilities- ಚಾಲ್ತಿ ಖಾತೆ, ಎಸ್.ಬಿ.ಖಾತೆ, ಸಾವಧಿ ಠೇವಣಿಗಳು ಮತ್ತು ಇತರ ಠೇವಣಿಗಳು)ನಿಗದಿತ ಪ್ರಮಾಣದಲ್ಲಿ ನಗದು ರಿಸರ್ವ್ ಬ್ಯಾಂಕ್‌ನಲ್ಲಿ ಯಾವಾಗಲೂ ಇಟ್ಟಿರಬೇಕು. ಇದಕ್ಕೆ ಅದು ಬಡ್ಡಿ ಕೊಡುವುದಿಲ್ಲ. ಈ ಮೊತ್ತವನ್ನು ಸಾಲ ಕೊಡಲು ಬಳಸುವಂತಿಲ್ಲ. ಇದರಲ್ಲಿ ಇತರ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳು (ನಗದು) ಸೇರುತ್ತವೆ. ಇದನ್ನೇ ನಗದು ನಿಧಿ ಪ್ರಮಾಣ (Cash Reserve Ratio) ಎನ್ನುವುದು. ಬ್ಯಾಂಕ್‌ಗಳು ನಗದು ವ್ಯವಹಾರ ಸವ್ಯವಸ್ಥಿತವಾಗಿ ಮತ್ತು ಸುಭದ್ರವಾಗಿ ನಿರ್ವಹಣೆಯಾಗಲು ಇದು ಭದ್ರತಾ ನಿಧಿ ಇದ್ದ ಹಾಗೆ ಬ್ಯಾಂಕ್‌ಗಳ ನಗದು ವ್ಯವಹಾರ ಸುವ್ಯವಸ್ಥಿತವಾಗಿ ಮತ್ತು ಸುಭದ್ರವಾಗಿ ನಿರ್ವಹಣೆಯಾಗಲು ಇದು ಭದ್ರತಾ ನಿಧಿ ಇದ್ದ ಹಾಗೆ. ಬ್ಯಾಂಕ್‌ಗಳ ಪತ್ತು ನಿರ್ಮಾಣವನ್ನು (ಸಾಲ ಕೊಡುವ ಪ್ರಕ್ರಿಯೆಯನ್ನು) ನಿಯಂತ್ರಿಸಲು (Credit Control) ಕೇಂದ್ರೀಯ ಬ್ಯಾಂಕ್ (ರಿಸರ್ವ್ ಬ್ಯಾಂಕ್) ಬಳಸುವ ಪರಿಮಾಣಾತ್ಮಕ ಸಾಧನಗಳಲ್ಲಿ ಇದೂ ಒಂದು. ಹಣದುಬ್ಬರ ನಿಯಂತ್ರಣಕ್ಕೂ ಒಂದು ಸಾಧನವಾಗಿ ರಿಸರ್ವ್ ಬ್ಯಾಂಕ್ ಈ ಪ್ರಮಾಣವನ್ನು ಬಳಸುವುದುಂಟು.
ಬಹಳ ವರ್ಷಗಳಿಂದ ಈ ನಗದು ನಿಧಿ ಪ್ರಮಾಣ ಶೇ.೪.೦ ಇತ್ತು ಕಳೆದ ವರ್ಷ ಆರ್ಥಿಕ ಹಿನ್ನಡೆಯಲ್ಲದೆ ಕೋವಿಡ್- ೧೯ ಕಾರಣದಿಂದ ಜರ್ಜರಿತವಾದಾಗ ಬ್ಯಾಂಕ್ ಪತ್ತು ವಿಸ್ತರಣೆ ಹೆಚ್ಚಿಸಲು ಶೇ.೧ ರಷ್ಟು ಕಡಿಮೆ ಮಾಡಿ ಶೇ.೩.೦ಗೆ ಇಳಿಸಲಾಗಿತ್ತು. ಈ ದ್ವೈಮಾಸಿಕ ಪ್ರಕಟಣೆಯ ಪ್ರಕಾರ ಇದೇ ಮಾರ್ಚ್ ೨೭ರಿಂದ ಸಿ.ಆರ್.ಆರ್ ಶೇ.೩.೫ಕ್ಕೆ ಏರುತ್ತದೆ. ಹಾಗೆ ಮೇ ೨೨ರಿಂದ ಮೊದಲಿನ ಮಟ್ಟಕ್ಕೆ ಅಂದರೆ ಶೇ.೪.೦ ಗೆ ಹೋಗಿ ನಿಲ್ಲುತ್ತದೆ. ಇದರ ಪರಿಣಾಮವಾಗಿ ಈ ಎರಡು  ತಿಂಗಳ ಅವಧಿಯಲ್ಲೇ ಬ್ಯಾಂಕ್ ಠೇವಣಿಗಳಲ್ಲಿ ಸುಮಾರು ೮೫,೦೦೦ ದಿಂದ ೯೫,೦೦೦ ಕೋಟಿ ರೂ.ಗಳು ಸಿ.ಆರ್.ಆರ್ ಗೆ ರಿಸರ್ವ್ ಬ್ಯಾಂಕ್‌ಗೆ ಹೆಚ್ಚುವರಿ ಹೋಗುತ್ತವೆ. ಅಂದರೆ ಅಷ್ಟು ಮೊತ್ತ ಬ್ಯಾಂಕ್‌ಗಳಿಗೆ ಸಾಲ ಕೊಡಲಿಕ್ಕಾಗಿಯಾಗಲೀ ಹೂಡಿಕೆಗಳಿಗಾಗಿಯಾಗಲಿ ಲಭ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಪತ್ತು ವಿಸ್ತರಣೆಗೆ ಠೇವಣಿ ಹಣ ಸಿಗದೇ ಆದಾಯವೂ ಕಡಿಮೆಯಾಗುತ್ತದೆ.
ಮೊದಲೇ ಆರ್ಥಿಕ ಹಿನ್ನಡೆ ಇದೆ. ಎಲ್ಲ ರಂಗಗಳಲ್ಲೂ ಸಾಲಕ್ಕಾಗಿ ಬಾಯಿ ತೆರೆದುಕೊಂಡು ಕುಳಿತಿರುವ ಸ್ಥಿತಿ ಇದೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಇದು ಸರಿಯೆ ಎನ್ನುವ ಪ್ರಶ್ನೆ ಏಳುತ್ತದೆ.
ಬ್ಯಾಂಕ್ ಠೇವಣಿಗಳೂ ಬಡ್ಡಿ ದರಗಳೂ
ಬ್ಯಾಂಕ್ ಠೇವಣಿಗಳ ಬಡ್ಡಿ ದರಗಳು ತಳಮಟ್ಟದಲ್ಲಿವೆ ಎಂಬುದು ಎಲ್ಲರಿಗೂ ಗೊತ್ತು. ಇದರಿಂದಾಗಿ ಬ್ಯಾಂಕ್‌ಗಳಿಗೆ ಹರಿದು ಬರಬೇಕಾಗಿದ್ದ ಉಳಿತಾಯಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಲಾಭದಾಯಕವಿರುವ ಬೇರೆಡೆಗೆ (ಚಿನ್ನ, ಬೆಳ್ಳಿ ಮುಂ.) ಹೋಗುತ್ತಿರುವುದು ಕಂಡು ಬಂದಿದೆ. ಬ್ಯಾಂಕ್ ಠೇವಣಿಗಳ ಹೆಚ್ಚಳ ಪ್ರಮಾಣ ಕಡಿಮೆಯಾಗಿದೆ. ಒಂದು ಕಡೆ ಹೆಚ್ಚು ಸಾಲ ಕೊಡಲು ಲಭ್ಯವಿರುವ ನಗದು ಕಡಿಮೆಯಾಗಿದೆ. ಒಂದು ಕಡೆ ಹೆಚ್ಚು ಸಾಲ ಕೊಡಲು ಲಭ್ಯವಿರುವ ನಗದು ಕಡಿಮೆಯಾಗಿದೆ. ಇನ್ನೊಂದೆಡೆ ಠೇವಣಿಗಳ ಒಳ ಹರಿವು ಕಡಿಮೆಯಾಗುತ್ತಿದೆ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ.
ಇದಕ್ಕೆ ಇನ್ನೊಂದು ಆಯಾವೂ ಇದೆ. ಠೇವಣಿಗಳ ಮೇಲಿನ ಬಡ್ಡಿ ಆದಾಯವನ್ನೇ ನಂಬಿಕೊಂಡಿರುವ ನಿವೃತ್ತರು ಮಹಿಳೆಯರು, ಹಿರಿಯ ನಾಗರಿಕರು ಮುಂತಾದವರ ಆದಾಯಗಳು ಕುಸಿದಿದ್ದು ನಿತ್ಯದ ಅವಶ್ಯಕತೆಗಳಿಗೆ ಪರದಾಡುವಂತಾಗಿದೆ. ಅತ್ತ ಆದಾಯ ಕಡಿಮೆ, ಇತ್ತ ಅನಿಶ್ಚಿತತೆ ಬೆರೆ ಇರುವುದರಿಂದ ಖರ್ಚು ಮಾಡದೇ ಆಪದ್ಧನವಾಗಿ ನಗದು ಇಟ್ಟುಕೊಂಡಿರುವ ಸಾಧ್ಯತೆಯೂ ಇದೆ. ಹೀಗಾಗಿ ಪೇಟೆಯಲ್ಲಿ ಬೇಡಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದನ್ನು ಸರಿಪಡಿಬೇಕಾದರೆ ಬ್ಯಾಂಕ್ ಠೇವಣಿಗಳ ಬಡ್ಡಿ ದರಗಳನ್ನು ಅಷ್ಟಷ್ಟೇ ಹೆಚ್ಚಿಸುತ್ತ ಹೋಗಬೇಕು. ಆಗ ಬ್ಯಾಂಕ್ ಠೇವಣಿಗಳೂ ಹೆಚ್ಚುತ್ತವೆ. ಮತ್ತು ಇವರೆಲ್ಲ ಕೈ ಬಿಚ್ಚಿ ಖರ್ಚು ಮಾಡುತ್ತಾರೆ. ಪೇಟೆಗಳಲ್ಲಿ ಬೇಡಿಕೆಯೂ ಹೆಚ್ಚುತ್ತದೆ. ಹೂಡಿಕೆಗಳೂ ಹೆಚ್ಚುತ್ತವೆ.
ರೆಪೊ ದರವನ್ನು ಗಣನೀಯವಾಗಿ ಕಡಿಮೆ ಮಾಡಿದ್ದರೂ ಬ್ಯಾಂಕ್‌ಗಳು ಅದರ ಲಾಭವನ್ನು ಸಾಲಗಾರರಿಗೆ ಪೂರ್ಣವಾಗಿ ವರ್ಗಾಯಿಸಿಲ್ಲವೆಂಬ ಆತಂಕ ರಿಸರ್ವ್ ಬ್ಯಾಂಕ್‌ನಲ್ಲಿ ಮತ್ತು ತಜ್ಞರಲ್ಲಿ ಈಗಲೂ ಇದೆ. ರಿಸರ್ವ್ ರೆಪೊ ದರ (ರಿಸರ್ವ್ ಬ್ಯಾಂಕ್ ತನ್ನಲ್ಲಿ ಬ್ಯಾಂಕ್‌ಗಳು ತಾತ್ಕಾಲಿಕವಾಗಿ ಇಟ್ಟ ಹೆಚ್ಚುವರಿ ಅಲ್ಪಾವಧಿ ಠೇವಣಿಗಳ ಮೇಲೆ ಕೊಡುವ ಬಡ್ಡಿ ದರ) ಸೇವಿಂಗ್ಸ್ ಬ್ಯಾಂಕ್ ಬಡ್ಡಿ ದರಕ್ಕ ಸಮೀಪದಲ್ಲಿ ಇದ್ದಾಗ ಎಷ್ಟೋ ಸಲ ಬ್ಯಾಂಕ್‌ಗಳೂ ಸಾಲಗಳನ್ನೂ ಕೊಡದೇ (ಎನ್.ಪಿ.ಎ. ಭಯದಿಂದ) ಹೂಡಿಕೆಗಳನ್ನು ಮಾಡದೇ ಹೆಚ್ಚುವರಿ ನಗದನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಇಟ್ಟು ಅಷ್ಟಕ್ಕೇ ತೃಪ್ತಿಪಟ್ಟಿದ್ದೂ ಉಂಟು. ಹಾಗೆ ಆಗದಂತೆ ನೋಡಿಕೊಳ್ಳಲು ರಿವರ್ಸ್ ರೆಪೊ ದರವನ್ನು ತೀರ ಕೆಳಗೆ ಇಳಿಸಲಾಯಿತು. ಇದರಿಂದ ಈ ಪ್ರವೃತ್ತಿ ಕಡಿಮೆಯಾಗಿ ಸುರಕ್ಷಿತ ಸರ್ಕಅರದ ಬಾಂಡ್‌ಗಳಲ್ಲಿ (ಬಡ್ಡಿ ಕಡಿಮೆ ಇದ್ದರೂ) ಹೂಡಿಕೆ ಮಾಡಲಾಗುತ್ತಿತ್ತು.
ಈಗ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹಂತ ಹಂತವಾಗಿಂiiದರೂ ಹೆಚ್ಚಿಸಲೇಬೇಕಾಗುತ್ತದೆ. ಕುಸಿದಿರುವ ಠೇವಣಿ ಬೆಳವಣಿಗೆ ದರವನ್ನು ಹೆಚ್ಚಿಸಿಕೊಳ್ಳಲು ಮತ್ತು ಸಿ.ಆರ್.ಆರ್. ಹೆಚ್ಚಳ ಠೇವಣಿಗಳಿಂದ ತುಂಬಿಕೊಳ್ಳಲು ಇದು ಅನಿವಾರ್ಯವಾಗಿರುತ್ತದೆ. ಕೆಲವು ಕಿರುಕುಳ (Retail) ಸಾಲಗಳ ಬಡ್ಡಿ ದರವನ್ನೂ ಅಷ್ಟಷ್ಟೇ ಹೆಚ್ಚಿಸಬಹುದು.
ಇದು ಅರ್ಥ ವ್ಯವಸ್ಥೆಯ ಬೆಳವಣಿಗೆಗೂ ಪೂರಕವಾಗುವ ಸಾಧ್ಯತೆ ಇದೆ. ಬಡ್ಡಿ ಆದಾಯ ಹೆಚ್ಚುವುದಾದರೆ ಠೇವಣಿದಾರರ ಕೊಳ್ಳುವ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಹೆಚ್ಚಾಗುತ್ತದೆ. ಇದರಿಂದ ಪೇಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆರ್ಥಿಕ ಚೇತರಿಕೆಯ ವೇಗ ಇನ್ನೂ ಹೆಚ್ಚಾಗುತ್ತದೆ. ರಿಸರ್ವ್ ಬ್ಯಾಂಕ್‌ನ ಸಿ.ಆರ್.ಆರ್. ಹೆಚ್ಚಳ ನಿರ್ಧಾರದಲ್ಲಿ ಈ ಉದ್ದೇಶ ಅಡಕವಾಗಿರುವಂತಿದೆ. ಇದರಿಂದ ನಗದು ಕೊರತೆ ಅನುಭವಿಸುತ್ತಿರುವ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರ ವ್ಯವಹಾರಗಳಿಗೆ ಮತ್ತು ಅಸಂಘಟಿತ ವಲಯಕ್ಕೆ ಸುಲಭವಾಗಿ ಸಾಲ ಒದಗಿಸುವ ಬ್ಯಾಂಕೇತರ ಹಣಕಾಸು ಕಂಪನಿಗಳಿಗೂ ಒಂದಿಷ್ಟು ಜೀವ ಜಲ ಒದಗಿಸಿದಂತಾಗುತ್ತದೆ.
ಒಂದು ಮಾತು: ಆರ್ಥಿಕ ಚೇತರಿಕೆ ಮಾತು ಬಂದಾಗ ನಮ್ಮ ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯಂ ಹೇಳಿದಂತೆ ಮೇಲ್ನೋಟಕ್ಕೆ ಕುಸಿತ ತಳಮಟ್ಟ ತಲುಪಿದ್ದು ಈಗ ಇಡೀ ಅರ್ಥ ವ್ಯವಸ್ಥೆ ಮೇಲ್ಮುಖವಾಗಿದೆ ಎಂದು ಖಚಿತವಾಗಿ ಹೇಳುವಂತಿಲ್ಲ. ಅಸಂಘಟಿತ ವಲಯ ಮತ್ತು  ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ಇನ್ನೂ ಕಷ್ಟದಲ್ಲಿಯೇ ಇವೆ. ಅವುಗಳ ಚೇತರಿಕೆಗೆ ಇನ್ನಷ್ಟು ಕ್ರಮ ಬೇಕು.

ಪ್ರೊ.ಆರ್.ಎಂ.ಚಿಂತಾಮಣಿ
× Chat with us