ಜಮೀನಿನಲ್ಲಿ ಕಾಡು ಹಂದಿಗಳ ಹಿಂಡು ಹಾವಳಿ: ಅರಿಶಿನ, ಈರುಳ್ಳಿ ಫಸಲು ನಾಶ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮದ ಜಮೀನೊಂದಕ್ಕೆ ಸೋಮವಾರ ತಡರಾತ್ರಿ ಕಾಡು ಹಂದಿಗಳು ಹಿಂಡು ಲಗ್ಗೆ ಇಟ್ಟು ಅರಿಶಿನ ಹಾಗೂ ಈರುಳ್ಳಿ ಫಸಲನ್ನು ನಾಶಗೊಳಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

ಶಾಗ್ಯ ಗ್ರಾಮದ ಮಂಟ್ಯ ಎಂಬವರು ಗ್ರಾಮದ ಹೊರವಲಯದಲ್ಲಿ 2 ಎಕರೆ ಜಮೀನಿನನ್ನು ಹೊಂದಿದ್ದು, ಅರಿಶಿನ ಹಾಗೂ ಈರುಳ್ಳಿ ಫಸಲನ್ನು ಬೆಳೆದಿದ್ದರು. ಆದರೆ ಸೋಮವಾರ ತಡರಾತ್ರಿ 12 ಗಂಟೆಯ ಸಮಯದಲ್ಲಿ ಸಮೀಪದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಿಂದ ಕಾಡು ಹಂದಿಗಳ ಹಿಂಡು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಗೊಳಿಸಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ.

ಈ ಭಾಗದಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡು ಹಂದಿಗಳ ಕಾಟ ವಿಪರಿತವಾಗಿದ್ದು, ಆಗ್ಗಾಗ್ಗೆ ಜಮೀನುಗಳ ಮೇಲೆ ಲಗ್ಗೆ ಇಟ್ಟು ಫಸಲನ್ನು ನಾಶಗೊಳಿಸುತ್ತಿದೆ. ಇದರಿಂದ ರೈತರು ನಷ್ಟವನ್ನು ಅನುಭವಿಸಬೇಕಿದೆ. ಅಲ್ಲದೇ ಸೋಮವಾರ ರಾತ್ರಿ ನಮ್ಮ ಜಮೀನಿಗೆ ಲಗ್ಗೆ ಇಟ್ಟು ಅರಿಶಿನ ಹಾಗೂ ಈರುಳ್ಳಿ ಫಲಸನ್ನು ನಾಶಗೊಳಿಸಿವೆ. ಇದರಿಂದ ಲಕ್ಷಾಂತರ ರೂ ವ್ಯಯಿಸಿ ಫಸಲನ್ನು ಬೆಳೆದ ನನಗೆ ನಷ್ಟವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಮೂಲಕ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಇದರ ಜತೆಗೆ ಜಮೀನಿಗೆ ಲಗ್ಗೆ ಇಡುವ ಕಾಡು ಹಂದಿಗಳ ಕಡಿವಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ರೈತ ಮಂಟ್ಯ ಒತ್ತಾಯಿಸಿದ್ದಾರೆ.

× Chat with us