ಪರ್ಮನೆಂಟ್‌ ಅಡ್ರೆಸ್ ಇಲ್ಲದ ನಿರ್ಗತಿಕರಿಗೆ ಸರ್ಕಾರ ಲಸಿಕೆ ನೀಡುವುದು ಯಾವಾಗ?

ಮೈಸೂರು: ಇವರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಚಪ್ಪರ, ಇವರಿಗೂ ಉಸಿರಿದೆ ಅನ್ನೋದು ದಿಟ. ಆದರೆ, ಈ ಬಡಪಾಯಿ ಜನರನ್ನು ರಾಜ್ಯ ಸರ್ಕಾರ ಮರೆತಿದೆ. ಉಣ್ಣಲು, ಉಡಲು ಕೊಡುವುದು ಹಾಗಿರಲಿ, ಕೊರೊನಾ ವೈರಾಣುವಿನ ನಾಗಾಲೋಟವನ್ನು ನಿಯಂತ್ರಿಸಲು ನೀಡುತ್ತಿರುವ ಲಸಿಕೆ ನೀಡುವುದಕ್ಕಾದರೂ ಚಿಂತಿಸಿದಂತೆ ಕಾಣುತ್ತಿಲ್ಲ.

ನಗರದಲ್ಲಿರುವ ನಿರ್ಗತಿಕರು, ಭಿಕ್ಷಾಟನೆ ಮಾಡುವವರಿಗೆ ಮನೆ-ಮಠಗಳ ಆಶ್ರಯ ಇಲ್ಲ. ವಲಸೆ ಕಾರ್ಮಿಕರ ಸ್ಥಿತಿಯೂ ಹೆಚ್ಚು ಕಡಿಮೆ ಇದೇ ಆಗಿದೆ. ಬಹುತೇಕ ಬಳಿ ದಾಖಲೆಗಳು ಇಲ್ಲ. ಇವರು ಲಸಿಕೆ ಪಡೆಯಲು ಅನರ್ಹರೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆಸಕ್ತಿ ತೋರಿದ್ದು, ಸರ್ಕಾರಿ ಆಸ್ಪತ್ರೆಗಳು, ಪಿಎಚ್‌ಸಿ ಮತ್ತಿತರ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಲಸಿಕೆ ಪಡೆಯಬೇಕಾದ ವ್ಯಕ್ತಿಯೂ ಆಧಾರ್ ಕಾರ್ಡ್ ಸಂಖ್ಯೆಯನ್ನುನೋಂದಾಯಿಸಬೇಕೆಂಬ ನಿಯಮವಿದೆ. ಆದರೆ, ವಲಸೆ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಚಿಂದಿ ಆಯುವವರು, ಭಿಕ್ಷುಕರು, ಬಸ್ ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಅಸಹಾಯಕರು. ಬಹುತೇಕರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳು ಇರುವುದಿಲ್ಲ. ಆಧಾರ್ ಕಾರ್ಡ್ ಇಲ್ಲ ಎಂಬ ಒಂದೇ ಕಾರಣಕ್ಕೆ ಅವರು ಲಸಿಕೆಯಿಂದ ವಂಚಿತರಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಅನಾಥರು, ಮನೆ ಬಿಟ್ಟವರು: ವಲಸೆ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಚಿಂದಿ ಆಯುವವರು, ಭಿಕ್ಷುಕರು, ಬಸ್ಸು ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಅಸಹಾಯಕರು. ತಮ್ಮವರನ್ನು ಕಳೆದುಕೊಂಡೋ ಅಥವಾ ಅನಾಥವಾಗಿಯೋ ಮನೆ ಬಿಟ್ಟು ಬಂದು ನಗರದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ತಂಗುದಾಣಗಳಲ್ಲಿ ಬದುಕು ದೂಡುವವರಾಗಿದ್ದಾರೆ. ಈ ಪೈಕಿ ಕೆಲವರು ಕೂಲಿ ಕೆಲಸ ಮಾಡಿ ಹೊಟ್ಟೆಪಾಡು ನೋಡಿಕೊಂಡು, ರಸ್ತೆ ಬದಿಯಲ್ಲಿ ಸಿಗುವ ಜಾಗದಲ್ಲಿ ಮಲಗುತ್ತಾರೆ.

—————–

ನಿರ್ಗತಿಕರಿಗೆ ಲಸಿಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಇನ್ನೂ ಮಾಡಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಗಾಗಿ ಕಾಯುತ್ತಿದ್ದೇವೆ.

-ಡಾ.ಎಲ್.ರವಿ, ನೋಡೆಲ್ ಅಧಿಕಾರಿ, ಕೋವಿಡ್ ಲಸಿಕೆ ಕೇಂದ್ರ

ವೃದ್ಧಾಶ್ರಮದಲ್ಲಿರುವ ಹಿರಿುಂ ನಾಗರಿಕರು, ಭಿಕ್ಷುಕರು ಹಾಗೂ ಅಲೆವಾರಿಗಳು ಮತ್ತು ಅಸಹಾುಂಕರಿಗೆ ಸರ್ಕಾರ ೧ತಂಡ ರಚನೆ ವಾಡಿ ಲಸಿಕೆ ಹಾಕಿಸುವುದಕ್ಕೆ ಮುಂದಾಗಬೇಕು. ಅವರೂ ನಮ್ಮ ಹಾಗೆ ಮನುಷ್ಯರು.

-ನವೀನ್, ಸಾವಾಜಿಕ ಹೋರಾಟಗಾರ ಮೈಸೂರು.

ಭಿಕ್ಷುಕರಿಗೆ, ನಿರ್ಗತಿಕರಿಗೆ ವ್ಯಾಕ್ಸಿನ್ ಹಾಕಿಸುವ ಪ್ರಕ್ರಿಯೆಗೆ ಸರ್ಕಾರ ಸೂಚನೆ ನೀಡಬೇಕು. ಇದಕ್ಕೆ ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಉತ್ತಮ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.

– ಆರ್.ರಘು ಕೌಟಿಲ್ಯ, ಅಧ್ಯಕ್ಷ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ


ಪ್ರತ್ಯೇಕ ವ್ಯವಸ್ಥೆ ಮಾಡಿ: ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ನಿರ್ಗತಿಕರಿಗೆ ವಸತಿ ಮತ್ತು ಊಟ ಕಲ್ಪಿಸುವ ರೀತಿಯಲ್ಲಿ ಲಸಿಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

                                                                                                                                                           -ಚಿರಂಜೀವಿ ಸಿ. ಹುಲ್ಲಹಳ್ಳಿ