ವಿವೇಕಾ ಸ್ಮಾರಕಕ್ಕೆ ಸರ್ಕಾರದಿಂದ ನಾವೇನು ಜಾಗ ಕೇಳಿರಲಿಲ್ಲ: ಸ್ವಾಮಿ ಮುಕ್ತಿದಾನಂದಜೀ

ಮೈಸೂರು: ನಗರದ ಮಧ್ಯಭಾಗದಲ್ಲಿ ವಿವೇಕಾ ಸ್ಮಾರಕ ನಿರ್ಮಾಣ ಮಾಡಬೇಕು ನಮಗೆ ಜಾಗ ಕೊಡಿ ಎಂದು ಸರ್ಕಾರವನ್ನು ನಾವೇನು ಕೇಳಿರಲಿಲ್ಲ. ಕೇಂದ್ರ ಸರ್ಕಾರದವರು ನಮ್ಮ ಮೇಲೆ ವಿಶ್ವಾಸವಿಟ್ಟು ಕೊಲ್ಕತ್ತಾದ ಬೇಲೂರು ಮಠವನ್ನು ಸಂಪರ್ಕಿಸಿ, ಸ್ಮಾರಕ ನಿರ್ಮಾಣ ಕಾರ್ಯವನ್ನು ವಹಿಸಿದ್ದಾರೆ. ಆದರೆ ಈ ಸತ್ಯವನ್ನು ಅರಿತುಕೊಳ್ಳದೇ ರಾಮಕೃಷ್ಣ ಆಶ್ರಮದಿಂದ ಹಗಲು ದರೋಡೆ, ಮೋಸ ಎನ್ನುವ ಮಾತುಗಳು ಪ್ರತಿನಿತ್ಯ ಕೇಳಿಬರುತ್ತಿರುವುದು ಮನಸ್ಸಿಗೆ ಘಾಸಿ ಉಂಟು ಮಾಡಿದೆ ಎಂದು ರಾಮಕೃಷ್ಣ ಆಶ್ರಮದ ಮೈಸೂರು ಶಾಖೆಯ ಮುಖ್ಯಸ್ಥರಾದ ಸ್ವಾಮಿ ಮುಕ್ತಿದಾನಂದಜೀ ಅವರು ಅವಲತ್ತುಕೊಂಡರು.

ವಿವೇಕಾ ಸ್ಮಾರಕವೆಂದರೇ ಪ್ರತಿಮೆ ಸ್ಥಾಪನೆ ಮಾಡುವುದಲ್ಲ. ಬದಲಾಗಿ ಕನ್ನಡ ನೆಲೆಯ ಸಾವಿರಾರು ಯುವಕರಿಗೆ ಮೌಲ್ಯಧಾರಿತ ಶಿಕ್ಷಣ ನೀಡುವುದು. ಅವರ ಮನಸ್ಸನ್ನು ಏಕಾಗ್ರತೆಗೊಳಿಸಿಕೊಳ್ಳುವಂತೆ ಮಾಡಿ ಸಮಾಜದಲ್ಲಿ ಉನ್ನತ ಕೆಲಸ ಮಾಡಲು ಪ್ರೇರೇಪಿಸುವಂತಹ ಕೋರ್ಸ್‌ಗಳನ್ನು ಹೇಳಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ವಿವೇಕಾ ಸ್ಮಾರಕಕ್ಕೆ ೫ ಕೋಟಿ ಅನುದಾನ ನೀಡುವ ಭರವಸೆ ನೀಡಿದೆ. ಮುಂಗಡವಾಗಿ ೨೫ ಲಕ್ಷ ರೂಪಾಯಿ ಕೊಟ್ಟಿದೆ. ಯಡಿಯೂರಪ್ಪ ಅವರು ೨ ಕೋಟಿ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದರೂ. ಈ ಯಾವ ಅನುದಾನವನ್ನು ಇನ್ನು ಬಿಡುಗಡೆಯಾಗಿಲ್ಲ. ಈ ವಿಚಾರ ಹೀಗೆ ಮುಂದುವರೆದರೇ ಕೇಂದ್ರ ಸರ್ಕಾರಕ್ಕೆ ನಾವು ೨೫ ಲಕ್ಷ ರೂಪಾಯಿಯನ್ನು ಬಡ್ಡಿ ಸಮೇತ ವಾಪಸ್ ನೀಡಬೇಕಾಗುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಮಾರಕ ನಿರ್ಮಾಣದ ವಿಚಾರವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಭರವಸೆಯನ್ನು ನೀಡುತ್ತಲೇ ಬರುತ್ತಿವೆ ಹೊರತು ಮುಂದೆ ಯಾವ ಕಾರ್ಯಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಮಕೃಷ್ಣ ಆಶ್ರಮವೂ ಯಾವ ಧರ್ಮವನ್ನು, ಯಾವ ಸಮುದಾಯಕ್ಕೂ ನೋವುಂಟು ಮಾಡುವ ಕೆಲಸ ಮಾಡುವುದಿಲ್ಲ. ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುತ್ತೇವೆ ಎಂದರು.

ಈ ವೇಳೆ ಹಿರಿಯ ಕಾಂಗ್ರೆಸ್‌ ಮುಖಂಡ ಮಾತನಾಡಿ, ವಿವೇಕಾ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ರಾಮಕೃಷ್ಣ ಆಶ್ರಮಕ್ಕೆ ನೀಡಿರುವ ಜಾಗವನ್ನು ಸಂರಕ್ಷಿಸಿಕೊಳ್ಳಲು ಅಹಿಂಸಾತ್ಮಕ ಚಳವಳಿಯನ್ನು ರೂಪಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಡಿ.ಮಾದೇಗೌಡ ಅವರು ತಿಳಿಸಿದರು.

× Chat with us