4ನೇ ಕೈಗಾರಿಕಾ ಕ್ರಾಂತಿಯಲ್ಲಿ ಕರ್ನಾಟಕಕ್ಕೆ ಗೆಲುವು: ಆಪಲ್ ಉಪಾಧ್ಯಕ್ಷೆ ವಿಶ್ವಾಸ

ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದ ಗುಣಾತ್ಮಕ ಸುಧಾರಣೆಗೆ ಹತ್ತಾರು ಉಪಕ್ರಮಗಳನ್ನು ತಂದಿರುವ ಕರ್ನಾಟಕ ರಾಜ್ಯವು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ ಎಂದು ಆಪಲ್ ಕಂಪನಿ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣ್ಯಂ ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ವರ್ಚ್ಯುಯಲ್ ಆಗಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ನಾಸ್ಕಾಂನಂತಹ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು 10 ಸಾವಿರ ನವೋದ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ಸಮಕಾಲೀನ ಉದ್ಯೋಗಗಳಿಗೆ ಬೇಕಾದ ಕೌಶಲ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಈಗಿನ ಉದ್ಯಮರಂಗದಲ್ಲಿ ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, ಆಗ್ಮೆಂಟೆಡ್ ವರ್ಚುಯಲ್ ರಿಯಾಲಿಟಿ, ರೋಬೋಟಿಕ್ಸ್ ಮುಂತಾದ ತಂತ್ರಜ್ಞಾನದ ಧಾರೆಗಳು ಮುಂಚೂಣಿಗೆ ಬಂದಿದ್ದು, ನಿರ್ಣಾಯಕ ಪಾತ್ರ ವಹಿಸುತ್ತಿವೆ. ಭಾರತದಲ್ಲಿ ಯುವಜನರಿಗೆ ಈ ಕಲಿಕೆಗಳನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಆಪಲ್ ಕಂಪನಿಯು 2017ರಿಂದಲೂ ಬೆಂಗಳೂರಿನಲ್ಲೇ ತನ್ನ ಐ-ಫೋನುಗಳನ್ನು ಉತ್ಪಾದಿಸುತ್ತಿದ್ದು, ಇತ್ತೀಚೆಗಷ್ಟೇ ಇದನ್ನು ಚೆನ್ನೈಗೆ ವಿಸ್ತರಿಸಿದೆ. ವಿಶೇಷವಾಗಿ ಬೆಂಗಳೂರು ಮತ್ತು ಒಟ್ಟಾರೆಯಾಗಿ ಭಾರತದೊಂದಿಗೆ ವ್ಯಾಪಕ ಸಹಭಾಗಿತ್ವ ಹೊಂದಿರುವ ಕಂಪನಿಯು ದೇಶದಲ್ಲಿ 10 ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಪ್ರಿಯಾ ವಿವರಿಸಿದರು.

ತಮ್ಮ ಸಂಸ್ಥೆಯು ಬೆಂಗಳೂರಿನಲ್ಲಿರುವ `ಎನೇಬಲ್ ಇಂಡಿಯಾ’ ಸಂಸ್ಥೆಯೊಂದಿಗೂ ಕೈಜೋಡಿಸಿದ್ದು, 2 ಸಾವಿರ ಮನೆಗಳಿಗೆ ಸೌರದೀಪಗಳನ್ನು ಒದಗಿಸಿದೆ. ಜತೆಗೆ ಬಡಕುಟುಂಬಗಳ ಸಾವಿರಾರು ಮಕ್ಕಳಿಗೆ ಕಲಿಕೆಗೆ ಅಗತ್ಯವಾದ ಡಿಜಿಟಲ್ ಸಾಧನಗಳನ್ನು ಪೂರೈಸಿದ್ದು, ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ ಎಂದು ತಿಳಿಸಿದರು.

‘ನಾನು ಕರ್ನಾಟಕದ ಹೆಮ್ಮೆಯ ಪುತ್ರಿ!’
ಕನ್ನಡದಲ್ಲೇ ತಮ್ಮ ಮಾತು ಆರಂಭಿಸಿದ ಪ್ರಿಯಾ ಬಾಲಸುಬ್ರಮಣ್ಯಂ `ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ನಾನು ಓದಿದ್ದು ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ. ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಏರ್ಪಡಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು,’ ಎಂದು ಹರ್ಷದಿಂದ ನುಡಿದರು. ಕೊನೆಯಲ್ಲಿ ಅವರು ತಮ್ಮ ಭಾಷಣವನ್ನು `ನಾನು ಕರ್ನಾಟಕದ ಹೆಮ್ಮೆಯ ಪುತ್ರಿ!’. ಎಂದು ಹೇಳಿದರು.