‘ಜನಮತ’ ಸಂಗ್ರಹಣೆಯ ಮೂಲಕ ‘ಮತಲಾಭ’ ಪಡೆಯುತ್ತಿದೆ ಬಿಜೆಪಿ?

‘‘ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಸರ್ಕಾರ ಮರಳಿ ಅಧಿಕಾರಕ್ಕೆ ಬರುತ್ತದೆ’’- ಹಾಗಂತ ಡಜನ್ನುಗಟ್ಟಲೆ ಹಿಂದಿ ಸುದ್ದಿವಾಹಿನಿಗಳು ನಿತ್ಯವೂ ಸುದ್ದಿಪ್ರಸಾರ ಮಾಡುತ್ತಿವೆ. ಸುದ್ದಿ ಪ್ರಸಾರದ ಮೂಲಕ ಜನರ ಅಭಿಪ್ರಾಯವನ್ನು ಬದಲಾಯಿಸಲು ಸಾಧ್ಯವೇ? ಸಾಧ್ಯ ಇರಬಹುದು. ಅದೇ ಕಾರಣಕ್ಕೆ, ಬಿಜೆಪಿಯನ್ನು ಬಗ್ಗು ಬಡಿಯುವ ಹುಮ್ಮಸ್ಸಿನಲ್ಲಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಸುದ್ದಿ ವಾಹಿನಗಳು ನಡೆಸುವ ಜನಮತ ಸಂಗ್ರಹ (ಓಪಿನಿಯನ್ ಪೋಲ್)  ಪ್ರಸಾರ ಮಾಡುವುದನ್ನು ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಉತ್ತರ ಭಾಗದಲ್ಲಿ ಹಿಂದಿ ಸುದ್ದಿವಾಹಿನಿಗಳು ನಾಯಿಕೊಡೆಗಳಂತೆ ಬೆಳೆದಿವೆ. ೧೦೦ಕ್ಕೂ ಹೆಚ್ಚು ಹಿಂದಿ ಸುದ್ದಿ ವಾಹಿನಿಗಳು ಚಾಲ್ತಿಯಲ್ಲಿವೆ. ಇವುಗಳ ಪೈಕಿ ಒಂದು ಡಜನ್ ಹಿಂದಿ ಸುದ್ದಿವಾಹಿನಿಗಳು ಶೇ.೫೦ರಷ್ಟು ವೀಕ್ಷಕರನ್ನು ಹೊಂದಿದ್ದರೆ, ಉಳಿದ ೯೦ಕ್ಕೂ ಹೆಚ್ಚು ವಾಹಿನಿಗಳು ಶೇ.೫೦ರಷ್ಟು ವೀಕ್ಷಕರನ್ನು ಹೊಂದಿವೆ. ಟಿಆರ್ಪಿ ಲೆಕ್ಕದಲ್ಲಿ ಮೊದಲ ಹತ್ತು ಅಗ್ರಸ್ಥಾನದಲ್ಲಿರುತ್ತಿದ್ದ ಸುದ್ದಿ ವಾಹಿನಿಗಳೆಲ್ಲವೂ ಆಡಳಿತ ಪಕ್ಷದ ಪರವಾಗಿ ಸುದ್ದಿ ಬಿತ್ತರಿಸುತ್ತಿದ್ದವೇ! ಅದರಲ್ಲೂ ಪ್ರಧಾನಿ ಮೋದಿ ಅವರ ಸುದ್ಧಿಗಳನ್ನು ಪ್ರಧಾನವಾಗಿ ಪ್ರಸಾರ ಮಾಡುತ್ತಾ, ಮೋದಿ ಇಮೇಜು ಕಾಪಾಡುವ ಸುರಕ್ಷಾ ಕವಚಗಳಂತೆ ಕಾರ್ಯನಿರ್ವಹಿಸಿತ್ತಿವೆ.

ಇವೇ ಸುದ್ದಿವಾಹಿನಿಗಳು ಈಗ ಜನಮತ ಸಂಗ್ರಹ ಮಾಡಿ ಪ್ರಸಾರ ಮಾಡುತ್ತಿವೆ. ಈ ಎಲ್ಲಾ ಸುದ್ದಿವಾಹಿನಿಗಳ ಜನಮತದ ಒಂದಂಶ ಏನೆಂದರೆ- ಯೋಗಿ ಆದಿತ್ಯನಾಥ ಅವರು ಮರಳಿ ಅಧಿಕಾರಕ್ಕೆ ಬರುತ್ತಾರೆ. ಆದರೆ, ಬಿಜೆಪಿಗೆ ಗೆಲ್ಲುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯುವ ತಗ್ಗುತ್ತದೆ. ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ೧೪೦ರಿಂದ ೧೬೦ ಸ್ಥಾನಗಳನ್ನು ಪಡೆಯುತ್ತದೆ’.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಸುಲಭದ ಹಾದಿಯಲ್ಲ. ಅದಕ್ಕೆ ಹತ್ತಾರು ಕಾರಣಗಳಿವೆ. ಚುನಾವಣೆ ಘೋಷಣೆಗೂ ಮುಂಚಿನಿಂದಲೂ ಮತ ಕ್ರೋಢೀಕರಣ ತಂತ್ರವಾಗಿ ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ದಾಳಿಗಳು, ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವ ಮುನ್ನ ಬಿಜೆಪಿ ರೈತ ಸಮುದಾಯಕ್ಕೆ ಮಾಡಿದ ಅಪಮಾನಗಳು ಚುನಾವಣೆಯ ಪ್ರಮುಖ ಅಂಶಗಳಾಗಿಲ್ಲದಿರಬಹುದು. ಆದರೆ, ಅವು ಜನಮನದಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿವೆ. ಯಾವುದೋ ಒಂದು ಸಂಘಟನೆಯನ್ನು ಮುಂದಿಟ್ಟುಕೊಂಡು ನೂರಾರು ವರ್ಷಗಳಿಂದ ಜತೆಜತೆಯಾಗಿಯೇ ಬಂದಿರುವ ಅಲ್ಪಸಂಖ್ಯಾತ ಸಮುದಾಯದವರನ್ನು ಬಿಟ್ಟುಕೊಡಲು ನಿಜವಾದ ಹಿಂದೂಗಳು ಸಿದ್ದರಿಲ್ಲ. ಅವರಿಗೆಲ್ಲ ಶಾಂತಿ- ಸೌಹಾರ್ದತೆ ಬೇಕಾಗಿದೆ. ಉದ್ಯೋಗ ಮತ್ತು ಗೌರವಯುತ ಬದುಕು ಬೇಕಾಗಿದೆ. ಕಳೆದ ಐದು ವರ್ಷಗಳಲ್ಲಿ ಏನೇನಾನಾಗಿದೆ ಎಂಬುದನ್ನು ಜನರು ಮರೆತಿಲ್ಲ. ಉತ್ತರ ಪ್ರದೇಶದಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿರುವ ಆಡಳಿತ ವಿರೋಧಿ ಅಲೆಯನ್ನು ಅರಗಿಸಿಕೊಳ್ಳಲು ಬಿಜೆಪಿ ಸಿದ್ದವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಸೋಲು ಎಂದರೆ ಆ ಸೋಲು ಬಿಜೆಪಿಯ ಸೋಲೂ ಆಲ್ಲ, ಯೋಗಿ ಆದಿತ್ಯನಾಥರ ಸೋಲೂ ಅಲ್ಲ. ಅದು ನೇರವಾಗಿಯೇ ಪ್ರಧಾನಿ ನರೇಂದ್ರಮೋದಿ ಅವರ ಸೋಲಾಗುತ್ತದೆ. ಆಗ ಮೋದಿಯವರ ವರ್ಚಸ್ಸಿಗೆ ಕುಂದುಂಟಾಗುತ್ತದೆ.

 

ಮೋದಿ ಅವರ ವರ್ಚಸ್ಸು ಕುಗ್ಗುವುದು ಯಾವ ಹಿಂದಿ ಸುದ್ದಿವಾಹಿನಿಗಳಿಗೆ ಬೇಕಿಲ್ಲ. ಏಕೆಂದರೆ ಬಹುತೇಕ ಸುದ್ದಿವಾಹಿನಿಗಳ ಮಾಲಿಕತ್ವವು ಉದ್ಯಮಿಗಳ ಕೈಲಿದೆ. ಈ ಉದ್ಯಮಿಗಳು ಮೋದಿಯವರ ಆಪ್ತವಲಯದಲ್ಲಿದ್ದಾರೆ. ಹೀಗಾಗಿ ವಸ್ತುಸ್ಥಿತಿಯನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಅಖಿಲೇಶ್ ಯಾದವ್ ಅವರು ಜನಮತ ಸಂಗ್ರಹಣೆ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿದ್ದಾರೆ.

 

ಅಷ್ಟಕ್ಕೂ ಮತಗಟ್ಟೆ ಸಮೀಕ್ಷೆಗಳೇ (ಎಕ್ಸಿಟ್ ಪೋಲ್) ಉಲ್ಟಾ ಹೊಡೆಯುತ್ತಿವೆ. ಹಾಗಿರುವಾಗ ಚುನಾವಣೆ ಇನ್ನೂ ತಿಂಗಳಿರುವಾಗ ನಡೆಸುವ ಜನಮತ ಸಂಗ್ರಹ ಎಷ್ಟು ನಿಖರವಾಗಿರಲು ಸಾಧ್ಯವೇ? ಇಲ್ಲಾ. ಆದರೆ, ಇಡೀ ತಿಂಗಳು ಇದೇ ಸುದ್ದಿಯನ್ನು ಬಹುತೇಕ ಎಲ್ಲಾ ವಾಹಿನಿಗಳು ಪ್ರಸಾರ ಮಾಡುತ್ತಲೇ ಬಂದರೆ, ಜನರ ಮನಸ್ಸು ಬದಲಾಗಬಹುದೇನೋ ಎಂಬ ಆತಂಕವು ಅಖಿಲೇಶ್ ಯಾದವ್ ಅವರಲ್ಲಿದ್ದಿರಬಹುದು.

 

 

೨೦೦೪ರ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ನೇತೃತ್ವದ ಎನ್ಡಿಎ ೨೫೦, ಯುಪಿಎ ೧೭೫ ಸ್ಥಾನ ಗೆಲ್ಲುತ್ತವೆಂದು ಒಪಿನಿಯನ್ ಪೋಲ್ ಭವಿಷ್ಯ ನುಡಿದಿದ್ದವು. ಆದರೆ,  ಫಲಿತಾಂಶ ಬಂದಾಗ ಎನ್ಡಿಎ ೧೮೭ ಮತ್ತು ಯುಪಿಎ ೨೧೮ ಸ್ಥಾನ ಪಡೆದಿದ್ದವು. ೨೦೧೫ರಲ್ಲಿ ದೆಹಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಪ್ ೩೫- ೪೦ ಸ್ಥಾನ ಗಳಿಸುತ್ತದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದ್ದವು. ಆದರೆ, ಆಪ್ ೬೭ಸ್ಥಾನ ಗೆದ್ದು ಎಲ್ಲರನ್ನು ಅಚ್ಚರಿ ಮೂಡಿಸಿತ್ತು. ೨೦೧೫ರಲ್ಲಿ ಬಿಹಾರದಲ್ಲಿ ಕೂಡಾ ಎನ್ಡಿಎ ಅಧಿಕಾರಕ್ಕೆ ಬರುತ್ತದೆಂದೇ ಭವಿಷ್ಯ ನುಡಿಯಲಾಗಿತ್ತು. ಆದರೆ, ಮಹಾಘಟಬಂಧನ್ ನಿಚ್ಛಳ ಬಹುಮತ ಪಡೆದಿತ್ತು. ೨೦೧೬ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕರುಣಾನಿಧಿ ಗೆಲ್ಲುತ್ತಾರೆಂದು ಭವಿಷ್ಯ ನುಡಿಯಲಾಗಿತ್ತು. ಆದರೆ, ಎಐಡಿಎಂಕೆ ನಿಚ್ಚಳ ಬಹುಮತ ಪಡೆದಿತ್ತು. ೨೦೧೭ರ ಉತ್ತರ ಪ್ರದೇಶ ಚುನಾವಣೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದರೂ ಅಧಿಕಾರ ಗ್ರಹಿಸುವಷ್ಟು ಸ್ಥಾನ ಪಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ಆದರೆ, ಎಲ್ಲಾ ಒಪಿನಿಯನ್ ಪೋಲ್ ಗಳ ಭವಿಷ್ಯ ಸುಳ್ಳಾಗಿತ್ತು. ಬಿಜೆಪಿ ೩೧೨ ಸ್ಥಾನಗಳಿಸಿ ಐತಿಹಾಸಿಕ ದಾಖಲೆ ಮಾಡಿತ್ತು.

ಜನಮತ ಸಂಗ್ರಹದ ಫಲಿತಾಂಶಗಳು ನಿಜವಾಗಬೇಕೆಂದಿಲ್ಲ.  ಸುಧೀರ್ಘ, ವ್ಯವಸ್ಥಿತ ಪ್ರಚಾರದ ಪರಿಣಾಮವನ್ನು ಅಂದಾಜಿಸುವುದು ಕಷ್ಟ. ಈಗ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಹೋರಾಟ ಮಾಡುವುದರ ಜತೆಗೆ ಈ ವ್ಯವಸ್ಥಿತ ಪ್ರಚಾರದ ವಿರುದ್ಧವೂ ಹೋರಾಟ ಮಾಡಬೇಕಿದೆ.

(ವಿವಿದ ಮೂಲಗಳಿಂದ)