ಬೆಂಗಳೂರು: ಭಾರತವನ್ನು ನಶೆಮುಕ್ತ (ಮಾದಕದ್ರವ್ಯ) ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಸಮಾಜಕ್ಕೆ ಮಾರಕವಾಗಿರುವ ಈ ಪಿಡುಗನ್ನು ನಿಯಂತ್ರಣ ಮಾಡಲು ಎಲ್ಲ ರಾಜ್ಯಗಳ ಸಹಕಾರ ಅತ್ಯಗತ್ಯ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮಾದಕದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ಮುಕ್ತ ರಾಷ್ಟ್ರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲು ಗೃಹ ಇಲಾಖೆಗೆ ಸಾಕಷ್ಟು ಸವಾಲುಗಳಿವೆ. ಈ ನಿಟ್ಟಿನಲ್ಲಿ ಮಾದಕ ವಸ್ತು ಮುಕ್ತ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ ಎಂದರು.
ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಮಾದಕವಸ್ತುಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದರೆ ಇದು ಇಷ್ಟು ಪೆಂಡಭೂತವಾಗಿ ಬೆಳೆಯುತ್ತಿರಲಿಲ್ಲ. ಹಿಂದಿನ ಎಲ್ಲ ಸರ್ಕಾರಗಳ ವೈಫಲ್ಯವೇ ದೇಶದಲ್ಲಿ ಮಾದಕವಸ್ತುಗಳು ವ್ಯಾಪಕವಾಗಿ ಬೆಳೆಯಲು ಕಾರಣವಾಯಿತು ಎಂದು ಟೀಕಿಸಿದರು.
ಮಕ್ಕಳನ್ನ ಡ್ರಗ್ಸ್ನಿಂದ ರಕ್ಷಣೆ ಮಾಡಬೇಕಿದೆ. ಸರಬರಾಜು ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಕೇಂದ್ರ ಸರ್ಕಾರ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಪ್ರಧಾನ ಮಂತ್ರಿಗಳ ಈ ನಡೆಗೆ ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಸಹಾಯ, ಸಹಕಾರ ಮತ್ತು ಸಹಯೋಗ ಎಂಬ ಮೂರು ಮಂತ್ರದಿಂದ ಬದಲಾವಣೆ ಸಾಧ್ಯ. ರಾಜ್ಯ ಸರ್ಕಾರಗಳು ಕೇಂದ್ರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದ ಅಮಿತ್ ಷಾ, ನಮ್ಮ ಮಕ್ಕಳನ್ನು ಮಾದಕವ್ಯಸನದಿಂದ ಮುಕ್ತಗೊಳಿಸಬೇಕು. ನಾವು ಜಾಗೃತರಾದರೆ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಯುವಕರು ಇದರ ಸುಳಿಗೆ ಸಿಲುಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಪೋಷಕರು ಕೂಡ ಹೆಚ್ಚು ನಿಗಾವಹಿಸಬೇಕೆಂದರು.
ಜಗತ್ತಿನಲ್ಲಿ ಮಾದಕವಸ್ತುಗಳನ್ನು ನಿಷೇಧ ಮಾಡಬೇಕೆಂಬುದು ನಮ್ಮ ಆಲೋಚನೆಯಾಗಿದೆ. ಕಡೆ ಪಕ್ಷ ಇದನ್ನು ಬಿಗಿಯಾದ ಕಾನೂನುಗಳ ಮೂಲಕ ನಿಯಂತ್ರಣಕ್ಕೆ ತರಲು ಅವಕಾಶವಿದೆ. ಇದರ ಜಾಲವನ್ನು ವ್ಯವಸ್ಥಿತವಾಗಿ ಬಗ್ಗು ಬಡಿಯಬೇಕು. ಈಗಿರುವ ಎನ್ಡಿಪಿಎಸ್ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಷಾ ಪ್ರತಿಪಾದಿಸಿದರು.
ಮಾದಕವಸ್ತುಗಳ ವಿರುದ್ಧ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. 2022ರಿಂದ ಜೂನ್.1 ರಿಂದ 75 ದಿನಗಳ ಕಾಲ ದೇಶಾದ್ಯಂತ ಅಭಿಯಾನ ನಡೆಸಿದ್ದೇವೆ. ಶೂನ್ಯ ಸಹಿಷ್ಣುತೆ ತರಲು ನಮ್ಮ ಸರ್ಕಾರ ಬದ್ದವಾಗಿದೆ. ದೇಶದ ರಕ್ಷಣೆಯಲ್ಲಿ ಎಲ್ಲ ಸರ್ಕಾರಗಳು ಕೈ ಜೋಡಿಸಿದರೆ ಮಾತ್ರ ಸಾಧ್ಯ ಎಂದರು.
ಮಾದಕವಸ್ತು ಮುಕ್ತ ಭಾರತಕ್ಕೆ ಪ್ರಧಾನಿ ನರೇಂದ್ರಮೋದಿ ಪಣ ತೊಟ್ಟಿದ್ದಾರೆ. ಇದನ್ನು ಸರಬರಾಜು ಮಾಡುವ ಜಾಲಗಳನ್ನು ಕಾಲಕಾಲದಲ್ಲಿ ಹತ್ತಿಕ್ಕಿದ್ದೇವೆ. ಸರ್ಕಾರಗಳು ಈ ಕೆಲಸ ಮಾಡುತ್ತವೆ ಎಂದು ಯಾರೊಬ್ಬರು ಮೈಮರೆಯಬಾರದು. ವ್ಯವಸ್ಥೆಯ ಜೊತೆ ಸಾರ್ವಜನಿಕರು ಕೈ ಜೋಡಿಸಿದರೆ ಅದು ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಎಂದು ಅಮಿತ್ ಷಾ ಅಭಿಪ್ರಾಯಪಟ್ಟರು.
ದೇಶದ ಭದ್ರತೆಗೆ ಎಲ್ಲ ಇಲಾಖೆಗಳು ಒಗ್ಗಟ್ಟಾಗಿ ಶ್ರಮಿಸಬೇಕು. ಡ್ರಗ್ಸ್ ಎಲ್ಲಿಂದ ಬಂದು ಎಲ್ಲಿಗೆ ತಲುಪುತ್ತದೆ ಎಂಬ ಬಗ್ಗೆ ತನಿಖೆಯಾಗಬೇಕು. ದಕ್ಷಿಣ ರಾಜ್ಯಗಳು ಡ್ರಗ್ಸ್ ತನಿಖೆಯ ಸ್ವರೂಪ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
22,000 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದೇವೆ. ಕೊಕೇನ್ ಸೇರಿ ದುಬಾರಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಯುವ ಸಮುದಾಯವನ್ನು ನಶೆ ಮುಕ್ತ ಮಾಡ್ತಿದ್ದೇವೆ. ಅತ್ಯಾಧುನಿಕ ಕೇಂದ್ರಗಳನ್ನು ಆರಂಭ ಮಾಡುತ್ತಿದ್ದೇವೆ. ಮಾದಕ ವಸ್ತುಗಳ ನಿಯಂತ್ರಣಕ್ಕೆ ಬಿಗಿ ಕಾನೂನು ಹೇರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೂರು ಮಂತ್ರಗಳ ಮೂಲಕ ಡ್ರಗ್ಸ್ ಜಾಲವನ್ನ ಹತ್ತಿಕ್ಕಲು ಸಾಧ್ಯ. ಸಹಾಯ, ಸಹಕಾರ, ಸಹಯೋಗದಿಂದ ಬದಲಾವಣೆ ಸಾಧ್ಯ. ಜಗತ್ತಿನ ಹಲವು ದೇಶಗಳಲ್ಲಿ ಶೇ.40ರಷ್ಟು ಡ್ರಗ್ಸ್ ಹಬ್ಬಿದೆ. ಸಾಗರ ಮಾರ್ಗದಲ್ಲಿ ಹೆಚ್ಚು ಡ್ರಗ್ಸ್ ಬರ್ತಿತ್ತು. ನೌಕಾದಳ, ವಾಣಿಜ್ಯ ವಿಭಾಗ ಹದ್ದಿನ ಕಣ್ಣಿಟ್ಟಿದೆ ಎಂದು ಹೇಳಿದರು.
ಪಾಕಿಸ್ತಾನ ಹಲವೆಡೆಯಿಂದ ಡ್ರಗ್ಸ್ ಬರ್ತಿದೆ. ಪಾಕ್ ನಿಂದ ಬರ್ತಿರೋ ಡ್ರಗ್ಸ್ ಕಂಟ್ರೋಲ್. ದಕ್ಷಣಿ ರಾಜ್ಯಗಳ ಬಂದರಿನಲ್ಲಿ ಟೈಟ್ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಡ್ರಗ್ಸ್ ಕಂಟ್ರೋಲ್ ಆಗಬೇಕು. ಪೋರ್ಟಲ್ ಮೂಲಕ ಮಾಹಿತಿ ಹಂಚಿಕೆ ಆಗಬೇಕು. ಇ-ಪೋರ್ಟಲ್ ಮೂಲಕ ಡ್ರಗ್ಸ್ ಮಾಹಿತಿ ಹಂಚಿಕೊಳ್ಳಬೇಕೆಂದು ಅಮಿತ್ ಶಾ ಕೋರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಾವು ಕರ್ನಾಟಕದಲ್ಲಿ ಡ್ರಗ್ಸ್ ನಿಯಂತ್ರಣದಲ್ಲಿ ಜೀರೊ ಟಾಲೆರನ್ಸ್ ಜಾರಿಗೊಳಿಸಿದ್ದೇವೆ. ಇದರ ನಿಯಂತ್ರಣಕ್ಕೆ ಸಮಾಜದ ಸಹಕಾರ ಮುಖ್ಯ. ಸಾಮಾನ್ಯವಾಗಿ ಕ್ರೈಮ್ ಲೀಡ್ಸ್ ದಿ ಲಾ ಎಂದು, ಆದರೆ ಈಗ ಅದು ಬದಲಾಗಿದ್ದು. ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕಾನೂನು ಅಪರಾಧವನ್ನು ನಿಯಂತ್ರಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮೊದಲು ಪ್ರತಿ ವರ್ಷ ವಾರ್ಷಿಕ 1000 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಈ ಪ್ರತಿ ವರ್ಷ ಐದು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ನಾವು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅಲ್ಲದೆ ಬಹಳ ಕೇಸ್ ಗಳಲ್ಲಿ ಶಿಕ್ಷೆಗೆ ಒಳಪಡಿಸಿದ್ದೇವೆ. ರಾಜ್ಯದಲ್ಲಿ ಡ್ರಗ್ ನಿಯಂತ್ರಣ ಕ್ಕೆ ಗಂಭಿರ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರ ಕೆವಲ ಆರವತ್ತು ಕೀ.ಮಿ ಅಂತರದಲ್ಲಿ ತಮಿಳುನಾಡು ಗಡಿ ಇದೆ. ಹಾಗಾಗಿ ನಾರ್ಕೊಟೆಕ್ ವಿಚಾರದಲ್ಲಿ ನಮ್ಮ ನಡುವೆ ಸಹಕಾರ ಅತ್ಯಂತ ಮುಖ್ಯ. ಡ್ರಗ್ಸ್ ಪ್ರಕರಣ ದಾಖಲಿಸುವಾಗ ಸಾಕಷ್ಟು ಒತ್ತಡ ಎದುರಿಸಿದ್ದೇವೆ. ನಾವು ಎನ್ಡಿಪಿಎಸ್ ಕಾಯ್ದೆಯನ್ನು ಸರಳಿಕರಣಗೊಳಿಸಿ ಹೆಚ್ಚಿನ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದುಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.