ಸದ್ಯವೇ ಪಾತಕಿ ರವಿಯ ಬಂಧನ: ಆರಗ ಜ್ಞಾನೇಂದ್ರ
ಹುಬ್ಬಳ್ಳಿ: ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ತನಿಖೆಗೆ ಸೂಚಿಸಲಾಗಿದೆ. ಆತನ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸ್ಯಾಂಟ್ರೋ ರವಿ ವಿರುದ್ಧ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿತ್ತು. ಇದೆಲ್ಲವೂ ಆಗಿರುವುದು ಕಾಂಗ್ರೆಸ್ ಕಾಲದಲ್ಲಿ. ಆತನಿಗೆ 20 ವರ್ಷಗಳ ಅಪರಾಧ ಚರಿತ್ರೆ ಇದೆ. ಯಾವ ಸಂದರ್ಭಗಳಲ್ಲಿ ಯಾರ ಯಾರ ಸರ್ಕಾರ ಇತ್ತು, ಯಾವ ಯಾವ ಮಂತ್ರಿಗಳಿದ್ದರು, ಯಾರ ಯಾರ ಜೊತೆ ಸಂಪರ್ಕವಿತ್ತು ಎಲ್ಲವೂ ತನಿಖೆಯಾಗಲಿದೆ ಹೊರಬರಲಿದೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಆತನಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ನಡುವೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಸದ್ಯವೇ ಆತನ ಬಂಧನ ಆಗಲಿದೆ. ಆತನ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಸಧ್ಯ ಸ್ಯಾಂಟ್ರೋ ರವಿ ಹಿಂಬಾಲಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆದಿದೆ. ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಆತನಿಗಾಗಿ ಹುಡುಕಾಟ ನಡೆಸಲಾಗಿದೆ. ಶೀಘ್ರದಲ್ಲಿಯೇ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದರು.