ಬೆಂಗಳೂರು: ಏರೋ ಇಂಡಿಯಾ ಏರ್ ಶೋ ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರ ರಾತ್ರಿ ರಾಜಭವನದಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಂಡು ಸಿನಿಮಾ ತಾರೆಯರು ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರ ಜೊತೆ ಸಂವಾದ ನಡೆಸಿದ್ದಾರೆ.
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್, ಕಾಂತಾರ ಸಿನಿಮಾ ಮೂಲಕ ತುಳುನಾಡ ಸಂಸ್ಕೃತಿಯನ್ನು ಇಡೀ ದೇಶಕ್ಕೆ ತಿಳಿಸಿದ ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ ಕುಮಾರ್, ʼಅಯ್ಯೋʼ ಖ್ಯಾತಿಯ ಶ್ರದ್ಧಾ ಜೈನ್ ಮತ್ತಿತರರು ರಾಜಭವನದಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿದ್ದರು.
ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಕೂಡ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾಗೆ ಆಹ್ವಾನ ನೀಡಲಾಗಿತ್ತು.
ನಟ ಯಶ್ ಇನ್ಸ್ಟಾ ಗ್ರಾಂ ನಲ್ಲಿ ಮೋದಿ ಅವರೊಂದಿಗಿನ ಭೇಟಿಯ ಫೋಟೋ ಹಂಚಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರದ ಕುರಿತು ಮಾತುಕತೆ
ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಇದೇ ವೇಳೆ, ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರದ ಕುರಿತು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಅಭಿವೃದ್ಧಿಯ ಕುರಿತಾಗಿಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳ ಬಗ್ಗೆಯೂ ಪ್ರಧಾನಿ ಹಾಗೂ ಗಣ್ಯರು ಮಾತುಕತೆ ನಡೆಸಿದರು.