ಸರ್ಕಾರಿ ನೌಕರಿ ಕನಸಾಗಿಯೇ ಉಳಿದಿದೆ ಎಂಬ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಧಾರವಾಡದಲ್ಲಿ ಮೊದಲ ಬಾರಿಗೆ ಸ್ಛೋಟಗೊಂಡಿದೆ. ಅದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ೫೦,೦೦೦ ಹುದ್ದೆಗಳಿಗೆ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಆದರೆ, ನಿರುದ್ಯೋಗಿಗಳಿಗೆ ಒಂದು ಸ್ಪಷ್ಟತೆ ಬೇಕಿದೆ. ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ವಿಷಯದಲ್ಲಿ ಗೊಂದಲ ಇದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆ ಗಳಲ್ಲಿ ಒಟ್ಟಾರೆ ೨.೮೪ ಲಕ್ಷ ಹುದ್ದೆಗಳು ಖಾಲಿ ಇವೆ ಎನ್ನಲಾಗಿದೆ. ಆದರೆ ಸರ್ಕಾರ ಆರ್ಥಿಕ ಶಕ್ತಿ ಅವಂಬಿಸಿ ನೇಮಕಾತಿ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿಯಲ್ಲಿ ಸರ್ಕಾರವೇ ಘೋಷಿಸಿರುವಂತೆ ೫೦,೦೦೦ ಹುದ್ದೆಗಳನ್ನು ಭರ್ತಿ ಮಾಡು ವುದೂ ದುಸ್ತರ ಅನಿಸುತ್ತದೆ.
ಸರ್ಕಾರಿ ಹುದ್ದೆಗಳ ನೇಮಕಾತಿಗೆ ಹಣಕಾಸಿನ ಕೊರತೆ ಮಾತ್ರವಲ್ಲ, ಮೀಸಲಾತಿ ಗೊಂದಲ ಕೂಡ ಅಡ್ಡಿಯಾಗಿದೆ. ರಾಜ್ಯ ಸರ್ಕಾರ ಸದ್ಯಕ್ಕೆ ಒಳ ಮೀಸಲಾ ತಿಯನ್ನು ಅನುಸರಿಸುವುದಿಲ್ಲ. ಹಿಂದಿನ ಮೀಸಲಾತಿಯನ್ನೇ ಅಳವಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದೆ. ಇದಕ್ಕೂ ಕಾನೂನು ತೊಡಕು ಎದುರಾಗುವ ಅಪಾಯವಿದೆ. ಅತ್ತ ರಾಜ್ಯಪಾಲರು ಒಳ ಮೀಸಲಾತಿಗೆ ಅಂಕಿತ ಹಾಕಿದ್ದಾರೆ. ಆದರೆ, ಒಳ ಮೀಸಲಾತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ.
ಹಾಗಾಗಿ ಹಿಂದಿನ ಮೀಸಲಾತಿ ಅನುಸಾರ ನೇಮಕಾತಿ ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ‘ಒಳ ಮೀಸಲಾತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ಆದೇಶವನ್ನು ಪಾಲಿಸುವುದು ಕಡ್ಡಾಯ’ ಎಂಬ ಷರತ್ತನ್ನು ಅನ್ವಯಿಸಲಿದೆ ಎಂದು ಹೇಳಲಾಗಿದೆ.
ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಕಳೆದ ವಾರ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ಸಹಸ್ರಾರು ನಿರುದ್ಯೋಗಿಗಳು, ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಯುವಜನರಲ್ಲಿ ಸಂಚಲನ ಮೂಡಿಸಿದ್ದು, ಪ್ರತಿಭಟನಾಕಾರರು ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದ್ದಾರೆ. ಬಾಕಿ ಇರುವ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಬೇಕು. ನೇಮಕಾತಿಗೆ ಹೊಸ ಅಧಿಸೂಚನೆ ಹೊರಡಿಸಬೇಕು.
ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳ ಬೇಡಿಕೆಯಲ್ಲಿಯೂ ವಾಸ್ತವತೆ ಇದೆ. ದಶಕಗಳಿಂದಲೂ ದೊಡ್ಡ ಮಟ್ಟದಲ್ಲಿ ನೇಮಕಾತಿ ನಡೆದೇ ಇಲ್ಲ. ಸಾಮಾನ್ಯ ಪದವಿಗಳು ಇರಲಿ, ವೃತ್ತಿಪರ ಶಿಕ್ಷಣ ತರಬೇತಿ ಪಡೆದವರಿಗೂ ಸರ್ಕಾರಿ ಹುದ್ದೆ ಕೈಗೆಟುಕದಂತಾ ಗಿದೆ. ಅಲ್ಲೊಂದು, ಇಲ್ಲೊಂದು ಹುದ್ದೆಗಳನ್ನು ಭರ್ತಿ ಮಾಡಿದರೆ ಅದೇ ದೊಡ್ಡದು. ಅಲ್ಲದೆ, ಬಹುತೇಕ ಇಲಾಖೆ ಗಳಲ್ಲಿ ಗುತ್ತಿಗೆ ಆಧಾರಿತ ನೌಕರರ ಸಂಖ್ಯೆಯೇ ಹೆಚ್ಚಾಗಿದೆ.
ಸರ್ಕಾರವು ಕನಿಷ್ಠ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದರತ್ತ ವಾದರೂ ಗಮನಹರಿ ಸಬೇಕು. ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳಿಗೆ ಒಪ್ಪಂದದಂತೆ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸ ಬೇಕು. ಅಲ್ಲದೇ, ಅವು ಬಯಸುವ ವಿದ್ಯಾರ್ಹತೆ ಉಳ್ಳವರನ್ನು ಸರ್ಕಾರದ ಮೂಲಕವೇ ನೇಮಕ ಮಾಡಿಕೊಳ್ಳಲು ತಾಕೀತು ಮಾಡಬೇಕು. ಇಲ್ಲದಿದ್ದರೆ, ಖಾಸಗಿ ಸಂಸ್ಥೆಗಳು ಹೊರ ರಾಜ್ಯದವರನ್ನು ನೇಮಕ ಮಾಡಿಕೊಳ್ಳಬಹುದು ಅಥವಾ ಕಡಿಮೆ ಜನರನ್ನು ತೆಗೆದುಕೊಂಡು ಹೆಚ್ಚು ಕೆಲಸ ಮಾಡಿಸಬಹುದು. ಉದಾಹರಣೆಗೆ ೧೦೦ ಮಂದಿ ಕಾರ್ಮಿಕರ ಅಗತ್ಯ ಇದ್ದರೆ, ಕೇವಲ ೫೦ ಜನರಿಂದ ಅಷ್ಟೂ ಕೆಲಸ ಮಾಡಿಸುವ ಸಾಧ್ಯತೆಯೂ ಇದೆ. ಅಲ್ಲದೆ, ಕೆಲಸದ ಅವಧಿಯನ್ನು ಹೆಚ್ಚು ಮಾಡುವ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಸರ್ಕಾರ ನಡೆಸುವ ಉದ್ಯೋಗ ಮೇಳಗಳು ನಿರೀಕ್ಷೆಯಷ್ಟು ಫಲಪ್ರದ ವಾಗಿಲ್ಲ. ಹಾಗೆ ನಿರೀಕ್ಷಿಸುವುದೂ ಅಷ್ಟು ಸಮಂಜಸವಾಗಿ ಕಾಣುತ್ತಿಲ್ಲ. ಹಿಂದೆ ರಾಜ್ಯ ಸರ್ಕಾರವೇ ಕಾರ್ಮಿಕ ಇಲಾಖೆಯಡಿ ‘ಉದ್ಯೋಗ ವಿನಿಮಯ ಕೇಂದ್ರ’ ವಿಭಾಗವನ್ನು ತೆರೆದಿತ್ತು. ೧೮ ವರ್ಷ ವಯಸ್ಸಾದ, ಎಸ್‌ಎಸ್‌ಎಲ್‌ಸಿ ಪಾಸಾದ ಯುವಜನರು ಆ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದರು.
ಸರ್ಕಾರದ ಯಾವುದೇ ಇಲಾಖೆಯಲ್ಲಿ ಹುದ್ದೆ ಖಾಲಿಯಾದರೆ, ಈ ಕೇಂದ್ರದ ಮೂಲಕ ಅರ್ಹರ ಪಟ್ಟಿಯನ್ನು ಪರಿಶೀಲಿಸಿ, ಸಂದರ್ಶನಕ್ಕೆ ಕರೆ ನೀಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಯೇ ಮರೀಚಿಕೆಯಾಗಿದ್ದು, ‘ಒಂದಾನೊಂದು ಕಾಲದಲ್ಲಿ…’ ಎಂಬಂತಹ ಸ್ಥಿತಿಗೆ ತಲುಪಿತು. ಉದ್ಯೋಗಾಕಾಂಕ್ಷಿಗಳ ಮನಸ್ಥಿತಿಯನ್ನು ಸರ್ಕಾರ ಸೂಕ್ಷ ವಾಗಿ ಅವಲೋಕಿಸಬೇಕಿದೆ. ಯುವಶಕ್ತಿಯನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸುವ ನಿಟ್ಟಿನಲ್ಲಿ ಉದ್ಯೋಗ ನೇಮಕಾತಿ ಸಂಬಂಧ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರತಿವರ್ಷ ಬಜೆಟ್ ಮಾದರಿಯಲ್ಲೇ ಹುದ್ದೆಗಳ ಭರ್ತಿಗೂ ಕ್ರಮವಹಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಏಕಕಾಲದಲ್ಲಿ ತುಂಬಬೇಕು ಎಂಬ ನಿರೀಕ್ಷೆ ಸಾಧುವಲ್ಲ. ಆದರೆ, ಪ್ರತಿವರ್ಷ ಕನಿಷ್ಠ ಪ್ರಮಾಣದಲ್ಲಿ ನೌಕರಿಗಳನ್ನು ಭರ್ತಿ ಮಾಡಿದ್ದರೆ, ನಿರುದ್ಯೋಗಿಗಳ ಪ್ರತಿಭಟನೆಗೆ ಅವಕಾಶ ಇರುತ್ತಿರಲಿಲ್ಲ. ಸರ್ಕಾರ ಪೂರ್ವಗ್ರಹಗಳಿಲ್ಲದೆ ಹುದ್ದೆಗಳನೇಮಕಾತಿಗೆ ಕ್ರಮ ಕೈಗೊಳ್ಳಬೇಕಿರುವುದು ಅತ್ಯಗತ್ಯ.
” ಸರ್ಕಾರವು ಕನಿಷ್ಠ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದರತ್ತವಾದರೂ ಗಮನಹರಿಸಬೇಕು. ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳಿಗೆ ಒಪ್ಪಂದದಂತೆ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಸಕಾಲದಲ್ಲಿಒದಗಿಸಬೇಕು ಅಲ್ಲದೆ, ಅವು ಬಯಸುವ ವಿದ್ಯಾರ್ಹತೆ ಉಳ್ಳವರನ್ನು ಸರ್ಕಾರದಮೂಲಕವೇ ನೇಮಕ ಮಾಡಿಕೊಳ್ಳಲು ತಾಕೀತು ಮಾಡಬೇಕು.”
ಅಣ್ಣೂರು ಸತೀಶ್ ನಾಳೆ ಸಂಜೆ ವಿಜೃಂಭಣೆಯ ರಥೋತ್ಸವ,ಅನ್ನಸಂತರ್ಪಣೆ ಭಾರತೀನಗರ: ಕಾರ್ಕಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೩ರ…
ಗಿರೀಶ್ ಹುಣಸೂರು ಕೆಪಿಎಸ್, ಪಿಎಂಶ್ರೀ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮೈಸೂರು: ಇಂದಿನ ಮಕ್ಕಳಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು: ಹಲವು ಅವ್ಯವಹಾರಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿ ಯಾಗಿದ್ದ ಹಿಂದಿನ ಮುಡಾ, ಎಂಡಿಎ ಆಗಿ ಪರಿವರ್ತನೆಯಾದ…
ಡಾ.ಎಸ್. ಕೃಷ್ಣಪ್ಪ ಕಿತ್ತೂರು ಇಂದು ಕೈವಾರ ತಾತಯ್ಯ ಅವರ ಜಯಂತಿ ‘ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ’... ೧೮ನೇ ಶತಮಾ…
ವಿಶ್ವಪ್ರಸಾದ್ ಆಳ್ವ ಒಂದೆರಡು ವರ್ಷಗಳ ಹಿಂದೆ ದೇಶದ ಹಣಕಾಸು ಸಚಿವರು ಮೂಲ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್…
ಪ್ರೊ.ಪ್ರೇಮ ಶೇಖರ ಒಂದೂವರೆ ತಿಂಗಳಿನಿಂದ ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದಂತಹ ಯುದ್ಧ ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾಗಿದೆ. ಜನವರಿ ಮೊದಲ ಭಾಗದಲ್ಲಿ…