children Parents
ಡಾ. ಅಶ್ವಿನಿ
ಒಂದನೇ ತರಗತಿಯಲ್ಲಿ ಓದುವ ಆರು ವರ್ಷದ ಪ್ರೇರಣಾ ಅಪ್ಪ-ಅಮ್ಮನ ಮುದ್ದು ಮಗಳು. ಪ್ರೇರಣಾ ಮೊದಲಿನಿಂದಲೂ ಎಲ್ಲ ಚಟುವಟಿಕೆಗಳಲ್ಲೂ ಚುರುಕು. ಸದಾ ನಗುತ್ತಾ, ಹರಳು ಹುರಿದಂತೆ ಮಾತನಾಡುವ ಅವಳು ಎಲ್ಲರ ಕಣ್ಮಣಿ. ಶಾಲೆಯಲ್ಲಿ ಎಲ್ಲ ಶಿಕ್ಷಕಿಯರ ಅಚ್ಚುಮೆಚ್ಚು. ಅವಳಿಲ್ಲದ ದಿನ ತರಗತಿಯೆಲ್ಲ ಮೌನ. ಆದರೆ ಕೆಲವು ದಿನಗಳಿಂದ ಪ್ರೇರಣಾಳ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ಮಾತು ಇಷ್ಟ ಪಡದೆ ಮೌನವಾಗಿರುತ್ತಿದ್ದಳು. ತರಗತಿಯಲ್ಲಿಯೂ ಯಾವುದೇ ಪ್ರಶ್ನೆ ಕೇಳದೆ ತಲೆ ತಗ್ಗಿಸಿ ಕುಳಿತ್ತಿರುತ್ತಿದ್ದ ಪ್ರೇರಣಾಳನ್ನು ಕಂಡು ಅವಳ ಶಿಕ್ಷಕಿ ರಶ್ಮಿಗೆ ಆಶ್ಚರ್ಯವಾಗಿತ್ತು. ಅವಳನ್ನು ಹತ್ತಿರ ಕರೆದು ತಲೆ ಸವರಿ ಏನಾಯಿತು? ಎಂದು ಕೇಳಿದ ತಕ್ಷಣ ಅಳಲು ಶುರುಮಾಡಿದಳು. ಸಮಾಧಾನ ಮಾಡಿದ ನಂತರ ನಿಧಾನವಾಗಿ ಶಿಕ್ಷಕಿಗೆ ಹೇಳಿದಳು, ‘ಮಿಸ್, ನನ್ನ ಅಪ್ಪ ಅಮ್ಮ ಯಾವಾಗಲೂ ತುಂಬಾ ಜಗಳವಾಡುತ್ತಾರೆ. ಅಮ್ಮ ಮನೆ ಬಿಟ್ಟು ಹೋಗುತ್ತೇನೆ ಎಂದರು. ಅಪ್ಪ ಹೋಗು ಎಂದರು. ಅಮ್ಮ ಹೋಗಿಬಿಟ್ಟರೆ ನಾ ಏನು ಮಾಡಲಿ?
ತನ್ಮಯ್ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಮೊದಲಿನಿಂದಲೂ ಓದಿನಲ್ಲಿ ಅಷ್ಟೇನೂ ಮುಂದಿಲ್ಲದ ಅವನು ಕಷ್ಟಪಟ್ಟು ಶ್ರಮ ಹಾಕಿ ತೇರ್ಗಡೆಯಾಗುತ್ತಿದ್ದ. ಕಳೆದ ಪರೀಕ್ಷೆಯಲ್ಲಿ ಪಾಸ್ ಆಗುವುದು ಕೂಡ ಸಾಧ್ಯವಾಗಿರಲಿಲ್ಲ. ಏಕೆ ಎಂದು ಗೆಳೆಯ ಕೇಳಿದಾಗ ‘ಜೀವನವೇ ಬೇಜಾರಾಗಿ ಹೋಗಿದೆ. ಎಲ್ಲಿಯಾದರೂ ದೂರ ಹೋಗಿ ಬಿಡೋಣ ಅನ್ನಿಸುತ್ತದೆ. ಮನೆಗೆ ಹೋಗಲು ಇಷ್ಟ ಆಗೋದಿಲ್ಲ’ ಎಂದ ಅವನ ನೋವಿನ ಹಿಂದೆ ಇದ್ದದ್ದು ಪ್ರತಿದಿನ ಮನೆಯಲ್ಲಿ ನಡೆಯುತ್ತಿದ್ದ ಅಪ್ಪ-ಅಮ್ಮನ ಜಗಳ. ಮೇಲಿನ ಈ ಪ್ರಕರಣಗಳು ಎಲ್ಲರ ಮನೆಯ ಸಂಗತಿಯೂ ಹೌದು. ಜಗಳ ಆಡದ ಗಂಡ-ಹೆಂಡತಿ ವಿರಳಾತಿ ವಿರಳ. ಎಲ್ಲರೂ ಬದುಕಿನ ಏಳು-ಬೀಳುಗಳಲ್ಲಿ, ಒತ್ತಡದಲ್ಲಿ ಯಾವುದೋ ಕಾರಣಕ್ಕೆ ಜಗಳ ಆಡುವುದು ಸಹಜ. ಆದರೆ ಜಗಳವೇ ಬದುಕಾಗಿಬಿಟ್ಟರೆ ಅದರ ಪರಿಣಾಮ ಬೇರೆ. ಪೋಷಕರು ಮಕ್ಕಳ ಎದುರು ಸದಾ ಜಗಳ ಆಡುತ್ತಿದ್ದರೆ ಅದು ಮಕ್ಕಳ ಮನಸ್ಸಿಗೆ ಆಘಾತವನ್ನುಂಟು ಮಾಡುತ್ತದೆ.
ಬದುಕಿನ ಒತ್ತಡಗಳು ಎಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಎಷ್ಟೇ ತಾಳ್ಮೆ ಕಾಯ್ದುಕೊಳ್ಳುತ್ತೇನೆ ಎಂದುಕೊಂಡರೂ ಅದು ಸಾಧ್ಯವಾಗದೆ ಹೋಗುತ್ತದೆ. ಮಕ್ಕಳ ಕಾರಣಕ್ಕಾಗಿಯೇ ಜಗಳ ನಡೆಯುವ ಸಂದರ್ಭಗಳು ಅನೇಕ. ಅಪ್ಪ ಒಂದು ಹೇಳಿದರೆ ಅಮ್ಮ ಒಂದು ಹೇಳುತ್ತಾಳೆ. ಅಪ್ಪ ಮಗುವನ್ನು ಬೈದಾಗ ಅಮ್ಮ ಅದರ ಪರ ವಹಿಸಿಕೊಳ್ಳುತ್ತಾಳೆ. ಇದು ಜಗಳ ಮತ್ತಷ್ಟು ತಾರಕಕ್ಕೆ ಹೋಗುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಜಗಳ ಪ್ರಾರಂಭವಾದ ವಿಷಯವೇ ಮರೆತುಹೋಗಿ ಗಂಡ-ಹೆಂಡತಿಯ ನಡುವೆ ತಾನೇ ಸರಿ ಎಂಬ ಕಾರಣಕ್ಕೆ ಜಗಳ ಶುರುವಾಗಿ ಬಿಡುತ್ತದೆ. ಒಬ್ಬರು ಮಕ್ಕಳನ್ನು ತಿದ್ದುವಾಗ ಮತ್ತೊಬ್ಬರು ಮಧ್ಯೆ ಪ್ರವೇಶಿಸಬಾರದು. ಅದು ತಪ್ಪು ಎಂದಾದಲ್ಲಿ ನಂತರ ಸಂಗಾತಿಗೆ ತಿಳಿಸುವುದು ಉತ್ತಮ. ಮಕ್ಕಳು ಬಿಡು ಅಪ್ಪ ಬಯ್ಯುವಾಗ ಅಮ್ಮ, ಅಮ್ಮ ಬಯ್ಯುವಾಗ ಅಪ್ಪ ನನ್ನ ಪರ ನಿಲ್ಲುತ್ತಾರೆ ಎಂಬ ಮನಸ್ಥಿತಿಗೆ ತಲುಪಿಬಿಡುತ್ತವೆ.
ಹಾಗಾದರೆ, ಈ ಸಂದರ್ಭಗಳನ್ನು ನಿಯಂತ್ರಿಸುವುದಾದರೂ ಹೇಗೆ? ಮಕ್ಕಳ ಮನಸ್ಸಿಗೆ ಆಘಾತವಾಗದಂತೆ ಪೋಷಕರು ಗಮನ ಹರಿಸುವುದು ಹೇಗೆ? ಕುಟುಂಬ ಎಂದ ಮೇಲೆ ಮಕ್ಕಳು ಸಹ ಅದರ ಭಾಗ. ಮಕ್ಕಳು ನೋಡಿ ಕಲಿಯುತ್ತಾರೆ. ಅವರು ಕಂಡಿದ್ದನ್ನು ಅನುಕರಿಸಿ ಅದೇ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ಮನಃಶಾಸ್ತ್ರಜ್ಞರು ಒಪ್ಪಿಕೊಳ್ಳುತ್ತಾರೆ. ಹಾಗಿದ್ದ ಮೇಲೆ ನಾವು ಮಕ್ಕಳಿಗೆ ಅನುಕರಣೆ ಮಾಡಲು ಉತ್ತಮವಾದ ಅಂಶಗಳನ್ನು ನೀಡಬೇಕಲ್ಲವೇ? ನಿರಂತರವಾಗಿ ಸಂಘರ್ಷದಲ್ಲಿ ತೊಡಗಿರುವ ಪೋಷಕರನ್ನು ಕಂಡ ಎಳೆಯ ಮನಸ್ಸುಗಳು ಅದೇ ಹಾದಿಯನ್ನು ತುಳಿಯುವ ಸಾಧ್ಯತೆಗಳು ಹೆಚ್ಚು. ಅಂತಹ ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ಕಂಡುಬರುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜೊತೆ ಹೆಚ್ಚಾಗಿ ಜಗಳದಲ್ಲಿ ತೊಡಗಿಕೊಳ್ಳುವ ಸಂದರ್ಭಗಳನ್ನು ಕಾಣಬಹುದು ಅಥವಾ ಅವರಲ್ಲಿ ಕೀಳರಿಮೆಯನ್ನು ಸಹ ಉಂಟು ಮಾಡಬಹುದು. ಬೇಸರದಲ್ಲಿ ನೊಂದು ಹೋಗುವ ಮನ ಯಾರ ಜೊತೆ ಮಾತನಾಡಲೂ ಇಚ್ಛಿಸದು. ಎಲ್ಲ ಮಕ್ಕಳು ಅವರ ಪೋಷಕರ ಬಗ್ಗೆ ಸಂತಸದ ಸಂಗತಿಗಳನ್ನು ಹಂಚಿಕೊಳ್ಳುತ್ತಿರುವಾಗ ಈ ಮಕ್ಕಳು ಮೌನ ವಹಿಸಿ ತಲೆ ತಗ್ಗಿಸಿ ಕುಳಿತುಬಿಡುತ್ತಾರೆ. ನನ್ನ ಮನೆಯಲ್ಲಿ ಸಹಜ ವಾತಾವರಣ ಇಲ್ಲ ಎಂಬ ಭಾವನೆ ಅವರ ಮನದಲ್ಲಿ ನಿಂತುಬಿಡುತ್ತದೆ.
ಕುಟುಂಬದ ವಿಷಯಗಳು ಕಷ್ಟ-ನಷ್ಟಗಳು ಮಕ್ಕಳಿಗೂ ತಿಳಿದಿರಬೇಕು. ಮಕ್ಕಳ ಜೊತೆ ಸ್ನೇಹಿತರಂತೆ ಇರಬೇಕು ಎಂಬ ಅಂಶ ಸತ್ಯವಾದರೂ ಮಕ್ಕಳ ನೆಮ್ಮದಿ, ಆತ್ಮವಿಶ್ವಾಸ, ಸಂತೋಷವನ್ನು ಕಾಪಾಡುವುದು ಪೋಷಕರ ಹೊಣೆ. ಹೊಂದಾಣಿಕೆ, ಪ್ರೀತಿ ಮತ್ತು ಸಹಕಾರ ಸಂಬಂಧಗಳ ಆಧಾರ ಎಂಬುದನ್ನು ನಿರೂಪಿಸಬೇಕು.
(ಲೇಖಕರು ಪತ್ರಿಕೋದ್ಯಮ ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು)
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…