ಜುಲೈ ೨೫, ೨೦೨೨, ಭಾರತ ಅಚ್ಚಳಿಯದ ಅಪೂರ್ವ ಘಟನೆಗೆ ಸಾಕ್ಷಿಯಾಗಿದೆ. ಭಾರತ ಜನನಿಯ ತನುಜಾತೆಯಾದ ಒಡಿಶಾ ರಾಜ್ಯದ ಬುಡಕಟ್ಟು ಸಮುದಾಯದ ಹೆಣ್ಣುಮಗಳೊಬ್ಬರು, ನಾಡಿನ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದ್ದಾರೆ. ದೇಶದ ಪ್ರಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಕೀಯವಾಗಿ ಎಂತಹದ್ದೇ ಟೀಕೆ- ಟಿಪ್ಪಣಿಗಳು ಇದ್ದರೂ, ಬುಡಕಟ್ಟು ಮಹಿಳೆಯೊಬ್ಬರಿಗೆ ಇಂತಹ ಅವಕಾಶ ದಕ್ಕಿರುವುದಕ್ಕೆ ಇಡೀ ದೇಶವೇ ಹೆಮ್ಮೆಪಡಬೇಕು.
ಪ್ರತಿಭಾದೇವಿ ಪಾಟೀಲ್ ಸಿಂಗ್ ಅವರ ನಂತರ ರಾಷ್ಟ್ರಪತಿಯಂತಹ ಗೌರವಕ್ಕೆ ಪಾತ್ರವಾಗಿರುವ ಎರಡನೇ ಮಹಿಳೆ ಮುರ್ಮು. ಒಡಿಶಾದಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು. ನಂತರ ಬಿಜೆಪಿ ಸೇರಿ ಶಾಸಕರಾಗಿ ಆಯ್ಕೆಯಾದ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾಲರಾಗಿ ಮುರ್ಮು ಆಯ್ಕೆಯಾಗಿದ್ದರು. ೧೨ನೇ ಶತಮಾನದ ವಚನಕಾರ್ತಿ ಅಕ್ಕ ಮಹಾದೇವಿ, ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಕಸ್ತೂರಬಾ ಗಾಂಧಿ ಅವರ ಆಶಯಗಳು, ಕನಸುಗಳು ಮುರ್ಮು ಅವರ ರೂಪದಲ್ಲಿ ಸಾಕಾರಗೊಂಡಿವೆ ಎಂದೆನಿಸಿದರೂ, ಅದನ್ನು ನೇರವಾಗಿ ಒಪ್ಪಿಕೊಳ್ಳುವುದಕ್ಕೆ ಇಂದಿನ ರಾಜಕೀಯ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ.
ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿರುವುದರಲ್ಲಿ ರಾಜಕೀಯ, ಜಾತಿ, ಧರ್ಮ… ಯಾವುದೇ ಮಾನದಂಡ ಇದ್ದರೂ, ಅವೆಲ್ಲಕ್ಕೂ ಮುಖ್ಯವಾಗಿ ಅತ್ಯಂತ ಹಿಂದುಳಿದ ಹಾಗೂ ಅತಿ ಸೂಕ್ಷ್ಮ ಸಮುದಾಯದ ಮಹಿಳೆ ರಾಷ್ಟ್ರ ರಾಜಕೀಯದ ಮುಂಚೂಣಿಗೆ ಬಂದು ಅತ್ಯುನ್ನತ ಸ್ಥಾನಕ್ಕೇರುತ್ತಾರೆಂದರೆ, ಅದರ ಹಿರಿಮೆ, ಗರಿಮೆಯು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ಸಾರುವ ಸಂವಿಧಾನ’ ಮತ್ತು ಅದರ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೇ ಸಲ್ಲಬೇಕು.
ಮಹಿಳೆಯೂ ಪುರುಷನಿಗೆ ಸಮಾನ ಎಂಬುದನ್ನು ಅತ್ಯಂತ ಸಮರ್ಥವಾಗಿ ಎತ್ತಿಹಿಡಿದಿರುವುದು, ಸ್ತ್ರೀಯರಿಗೂ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಕಲ್ಪಿಸಿರುವುದು ದೇಶದ ಸಂವಿಧಾನದ ವೈಶಿಷ್ಟ್ಯ. ದ್ರೌಪದಿ ಮುರ್ಮು ಅವರ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅವರ ಸರಳತೆ ಈಗಾಗಲೇ ಜಗಜ್ಜಾಹೀರಾಗಿದೆ. ಜಾರ್ಖಂಡ್ನ ರಾಜ್ಯಪಾಲರಾಗಿ ಅವಧಿ ಪೂರ್ಣಗೊಳಿಸಿದ ನಂತರ ಅವರು ಎಲ್ಲ ಸವಲತ್ತುಗಳನ್ನು ತ್ಯಜಿಸಿ, ಸಾಧಾರಣ ಮನೆಯಲ್ಲಿ ವಾಸವಿದ್ದರು. ಅಲ್ಲದೆ, ದೇವಾಲಯವೊಂದರಲ್ಲಿ ಕಸ ಗುಡಿಸುವ ಕಾಯಕದಲ್ಲೇ ಜೀವನ ಶ್ರೇಷ್ಠತೆಯನ್ನು ಕಂಡುಕೊಂಡಿದ್ದರು. ಬಿ.ಎ.ಪದವೀಧರೆಯಾದ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚು ಕಡಿಮೆ ಮುರ್ಮು ಅವರು, ಶಿಕ್ಷಕರಾಗಿ, ರಾಜಕೀಯಕ್ಕೆ ಬಂದು ರಾಷ್ಟ್ರಪತಿಯ ಸ್ಥಾನಕ್ಕೇರಿದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಮಾದರಿಯಲ್ಲೇ ಹೆಜ್ಜೆ ಹಾಕಿದ್ದಾರೆ ಎಂದರೆ ತಪ್ಪಾಗಲಾರದು. ಆದರೆ ಮುರ್ಮು ಬುಡಕಟ್ಟು ಸಮುದಾಯದಲ್ಲಿ ಜನಿಸಿದವರು ಎಂಬುದು ಗಮನಾರ್ಹ.
ಬಿಜೆಪಿ ಪಕ್ಷದ ಮೂಲಕ ಮುರ್ಮು ಅವರು ರಾಷ್ಟ್ರಪತಿಯಾದ ಬಗ್ಗೆ ಬಹುಪಾಲು ಹೋರಾಟಗಾರರು, ಸ್ತ್ರೀ ವಾದಿಗಳಲ್ಲಿ ಅಸಮಾಧಾನ ಇದೆ. ಅದು ತಪ್ಪು ಎಂಬುದಾಗಿ ಸಾಬೀತುಪಡಿಸುವ ಸವಾಲು ಮುರ್ಮು ಅವರ ಮುಂದಿದೆ. ಅವರಿಗೆ ಬುಡಕುಟ್ಟ ಸಮುದಾಯದ ಸಮಸ್ಯೆಗಳ ಅನುಭವವೇ ಇದೆ. ಉಳಿದಂತೆ ಈ ನಾಡಿನ ದಲಿತರು, ಶೋಷಿತ ಸಮುದಾಯಗಳು, ಅದರಲ್ಲಿಯೂ ವಿಶೇಷವಾಗಿ ಈ ಸಮಾಜದ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಸಾಕಷ್ಟು ಅರಿವಿದೆ. ಹಾಗಾಗಿ ಮಹಿಳೆಯರ ಹಕ್ಕುಗಳು ಸೇರಿದಂತೆ ರಾಷ್ಟ್ರದ ದಮನಿತ ಸಮುದಾಯಗಳಿಗೆ ಮುರ್ಮು ಅವರು ತಮಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ತೀಕ್ಷ್ಣವಾಗಿ ಯೋಚಿಸಬೇಕಾಗುತ್ತದೆ.
ಮುರ್ಮು ಅವರು ರಾಷ್ಟ್ರಪತಿಯಾಗುವುದಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಕಾರಣ ಇರಬಹುದು. ಆದರೆ, ಈ ಹುದ್ದೆಯನ್ನು ಅಲಂಕರಿಸಿದ ಬಳಿಕ ಅವರು ಯಾವುದೇ ಪಕ್ಷ ಅಥವಾ ತಮ್ಮನ್ನು ಗೆಲ್ಲಿಸಿದವರ ಅಡಿಯಾಳಾಗಿರುವುದಿಲ್ಲ. ಮುರ್ಮು ಅವರ ಪ್ರತಿ ನಡೆಯು ದೇಶದ ಸಮಸ್ತ ನಾಗರಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಋಣಭಾರ, ಸ್ವಾಮಿನಿಷ್ಠೆ ಎಂಬ ಅರ್ಥವಿಲ್ಲದ ಪದಗಳ ವ್ಯಾಪ್ತಿಯನ್ನೂ ಮೀರಿ ಅವರು ನೊಂದ ಜನರ ಕಣ್ಣೀರೊರೆಸಲು ತಮ್ಮ ಅಧಿಕಾರ ವ್ಯಾಪ್ತಿಯಲ್ಲೇ ಸಾಧ್ಯವಾದದನ್ನು ಮಾಡಬೇಕು. ಯಾವುದೇ ಧರ್ಮ, ಜಾತಿಗಳ ಬಗ್ಗೆ ಪೂರ್ವಗ್ರಹ ಸಲ್ಲದು. ಗಾಂಧೀಜಿ ಅವರ ಸರ್ವೋದಯ ಆಶಯ ಅವರಾದ್ದಾಗಬೇಕು. ಈ ನಿಟ್ಟಿನಲ್ಲಿ ಮುರ್ಮು ಅವರ ಸೇವೆ ಇರಬೇಕು. ತಮ್ಮದೇ ಸಮುದಾಯವೂ ಸೇರಿದಂತೆ ಈ ನಾಡಿನ ಪ್ರತಿಯೊಬ್ಬ ನಾಗರಿಕರ ಮನದಲ್ಲಿಯೂ ಅವರ ಆಡಳಿತವು ತನ್ನದೇ ಆದ ಮುದ್ರೆಯೊತ್ತಬೇಕು.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಭಾವೈಕ್ಯತೆಯೇ ಮುಖ್ಯವಾಗುತ್ತದೆ. ಇಲ್ಲಿ ಬೇಕಿರುವುದು ಪುರಾಣ ಕಾವ್ಯ ಮಹಾಭಾರತ ಅಲ್ಲ. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ‘ಸರ್ವಜನಾಂಗದ ಶಾಂತಿ ತೋಟ’ವಾದ ನವಭಾರತ ಅಗತ್ಯ. ಪ್ರಸ್ತುತ ಭಾರತ ನಿರ್ಮಾಣದಲ್ಲಿ ಸಾಕಷ್ಟು ಜನರು ಕೊಡುಗೆ ಇದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಕಷ್ಟಕರವಾದರೆ, ಒಡೆಯುವಂತಹ ಕೆಲಸಗಳಿಗೆ ನೂತನ ರಾಷ್ಟ್ರಪತಿ ಅವರು ನಿಯಂತ್ರಣ ಹಾಕುವುದಕ್ಕೆ ಎದೆಗುಂದದೆ ಹೆಜ್ಜೆ ಇಡುವುದು ಅಗತ್ಯ. ಮಕ್ಕಳು ಎರಡಾಗಲಿ, ನಾಲ್ಕಾಗಲಿ… ಕೊನೆಗೆ ಕೋಟ್ಯಂತರ (ಪ್ರಜೆಗಳು) ಸಂಖ್ಯೆಯೇ ಆಗಲಿ ಎಲ್ಲರಿಗೂ ಸಮಾನವಾಗಿ ತಾಯ್ತನದ ಪ್ರೀತಿಯನ್ನು ಹಂಚುವ ‘ಮಹಾತಾಯಿ’ ಅವರಾಗಲಿ.