ಬೆಂಗಳೂರು : ಆಗಸ್ಟ್ ತಿಂಗಳ ಆರಂಭಕ್ಕೆ ಇನ್ನು ಮೂರೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಆಗಸ್ಟ್ ತಿಂಗಳಲ್ಲಿ ಯಾವೆಲ್ಲ ಬದಲಾವಣೆಗಳಾಗುತ್ತವೆ? ಅವು ಹೇಗೆ ಸಾಮಾನ್ಯ ನಾಗರಿಕನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯೋದು ಅಗತ್ಯ. ಏಕೆಂದ್ರೆ ಕೆಲವು ಆರ್ಥಿಕ ನಿಯಮಗಳಲ್ಲಿನ ಬದಲಾವಣೆ ನೇರವಾಗಿ ನಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತವೆ. ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳಿರುವ ಕಾರಣ ಬ್ಯಾಂಕುಗಳಿಗೆ ಒಟ್ಟು 18 ದಿನಗಳ ರಜೆಯಿದೆ. ಹೀಗಾಗಿ ಆಗಸ್ಟ್ ನಲ್ಲಿ ಬ್ಯಾಂಕಿಗೆ ಹೋಗಿ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಒಮ್ಮೆ ರಜಾಪಟ್ಟಿಯನ್ನು ನೋಡೋದು ಒಳ್ಳೆಯದು. ಇನ್ನು ಪ್ರತಿ ತಿಂಗಳಂತೆ ಆಗಸ್ಟ್ ಪ್ರಾರಂಭದಲ್ಲಿ ಕೂಡ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಹಾಗಾದ್ರೆ ಆಗಸ್ಟ್ ತಿಂಗಳಲ್ಲಿ ಯಾವೆಲ್ಲ ಪ್ರಮುಖ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ.
ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ವ್ಯವಸ್ಥೆ
ಒಂದು ವೇಳೆ ನೀವು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿದ್ದರೆ, ತಪ್ಪದೇ ಈ ಒಂದು ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಆಗಸ್ಟ್ 1ರಿಂದ ಬ್ಯಾಂಕ್ ಆಫ್ ಬರೋಡಾದ ಚೆಕ್ ಮೂಲಕ ಪಾವತಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಆರ್ ಬಿಐ ಮಾರ್ಗಸೂಚಿಗಳ ಅನ್ವಯ ಆಗಸ್ಟ್ 1ರಿಂದ ಬ್ಯಾಂಕ್ ಆಫ್ ಬರೋಡಾದಲ್ಲಿ 5ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟ ಮೊತ್ತದ ಚೆಕ್ ಪಾವತಿಗೆ ಪಾಸಿಟಿವ್ ಪೇ ವ್ಯವಸ್ಥೆ ಜಾರಿಯಾಗಲಿದೆ. ಪಾಸಿಟಿವ್ ಪೇ ಚೆಕ್ ಕ್ಲಿಯರಿಂಗ್ ವ್ಯವಸ್ಥೆಯ ಭಾಗವಾಗಿದ್ದು, ಅದರಡಿಯಲ್ಲಿ ಖಾತೆದಾರರು ಚೆಕ್ ವಿತರಣೆ ಸಂದರ್ಭದಲ್ಲಿ ನೀಡಿದ ಮಾಹಿತಿ ಆಧಾರಿಸಿ ಚೆಕ್ ಗಳನ್ನು ಪಾವತಿಗೆ ಕಳುಹಿಸುವ ಪ್ರಕ್ರಿಯೆಯನ್ನು ಬ್ಯಾಂಕ್ ಮಾಡುತ್ತದೆ. ಈ ವ್ಯವಸ್ಥೆಯಲ್ಲಿ ಚೆಕ್ ಕ್ಲಿಯರ್ ಆಗಬೇಕೆಂದ್ರೆ ಅದನ್ನು ನೀಡಿರೋ ವ್ಯಕ್ತಿ ಬ್ಯಾಂಕಿಗೆ ಈ ಕುರಿತು ಕೆಲವು ಮಾಹಿತಿಗಳನ್ನು ಮುಂಚಿತವಾಗಿ ನೀಡಬೇಕು. ಅಂದ್ರೆ ಚೆಕ್ ಸಂಖ್ಯೆ, ಚೆಕ್ ದಿನಾಂಕ ಪಾವತಿ ಸ್ವೀಕರಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ ಇತ್ಯಾದಿ. ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಷನ್ ಗೆ ಲಾಗಿ ಇನ್ ಆಗಿ ಕೂಡ ಪಾಸಿಟಿವ್ ಪೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು.
ಎಲ್ ಪಿಜಿ ಸಿಲಿಂಡರ್ ಬೆಲೆ ಬದಲಾವಣೆ
ಪ್ರತಿ ತಿಂಗಳ ಮೊದಲನೇ ದಿನ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆಯಾಗೋದು ಸಹಜ. ಹಾಗೆಯೇ ಆಗಸ್ಟ್ 1ರಂದು ಕೂಡ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಈ ಬಾರಿ ಕಂಪನಿಗಳು ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಎರಡೂ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಆಗಸ್ಟ್ ನಲ್ಲಿ ಒಂದು ಸಿಲಿಂಡರ್ ಬೆಲೆಯಲ್ಲಿ 30ರೂ.ನಿಂದ 40ರೂ. ತನಕ ಬದಲಾವಣೆಯಾಗುವ ಸಾಧ್ಯತೆಯಿದೆ. ಜುಲೈನಲ್ಲಿ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 50ರೂ. ಹೆಚ್ಚಳ ಮಾಡಲಾಗಿತ್ತು. ಆದರೆ, 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 8.50ರೂ. ಇಳಿಕೆ ಮಾಡಲಾಗಿತ್ತು.
ಬ್ಯಾಂಕಿಗೆ ದೀರ್ಘ ರಜೆ
ಆಗಸ್ಟ್ ಅಂದ್ರೆ ಹಬ್ಬಗಳ ತಿಂಗಳು. ಮೊಹರಂ, ರಕ್ಷಾಬಂಧನ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹೀಗೆ ಹಬ್ಬಗಳ ಸಾಲೇ ಇದೆ. ಇದರ ಜೊತೆಗೆ ಭಾನುವಾರಗಳು, ಎರಡನೇ ಹಾಗೂ ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರಲಿವೆ.