ಬೆಂಗಳೂರು : ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಮಾಡುವ ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಯ ಅನುಮೋದನೆ ಪಡೆಯಬೇಕು. ಒಂದು ವೇಳೆ ಪೂರ್ವಾನುಮೋದನೆ ಪಡೆಯದೆ ವರ್ಗಾವಣೆ ಮಾಡಿದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಪರ ಕಾರ್ಯದರ್ಶಿ ಜೆ.ಡಿ.ಮಧುಚಂದ್ರ ತೇಜಸ್ವಿ ಸುತ್ತೋಲೆ ಹೊರಡಿಸಿದ್ದಾರೆ.
ಯಾವುದೇ ರೀತಿಯ ಅವಧಿಪೂರ್ವ ವರ್ಗಾವಣೆಗಳನ್ನು ಹಾಗೂ ಸಾಮಾನ್ಯ ವರ್ಗಾವಣಾ ಅವಧಿ ಮುಗಿದ ನಂತರ ಯಾವುದೇ ವರ್ಗಾವಣೆಗಳನ್ನು ಸರಕಾರಿ ನೌಕರರು ಒಂದು ಸ್ಥಳದಲ್ಲಿರಬಹುದಾದ ಅವಧಿ ವಿಸ್ತರಿಸಿ ಮಾಡುವ ವರ್ಗಾವಣೆ ಮಾಡುವ ಮುನ್ನ ಸಚಿವಾಲಯದ ಆಡಳಿತ ಇಲಾಖೆಗಳು ಮುಖ್ಯಮಂತ್ರಿಯ ಅನುಮೋದನೆಯನ್ನು ತಪ್ಪದೇ ಪಡೆಯಬೇಕು. ಸರಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಯಾವುದೇ ಪ್ರಸಂಗದಲ್ಲಿಯೂ ಮೊದಲು ವರ್ಗಾವಣೆ ಮಾಡಿ ನಂತರ ಮುಖ್ಯಮಂತ್ರಿಯವರ ಘಟನೋತ್ತರ ಅನುಮೋದನೆ ಪಡೆಯತಕ್ಕದ್ದು. ಈಗಾಗಲೇ 2023ರ ಮೇ 30ರಿಂದ ಜೂನ್ 30ರವರೆಗೆ 2023-24ನೇ ಸಾಲಿಗೆ ಗ್ರೂಪ್ ಎ, ಬಿ, ಸಿ. ಮತ್ತು ಡಿ ವರ್ಗದ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರಷ್ಟನ್ನು ಮೀರದಂತೆ ಜೂನ್ 1ರಿಂದ ಜುಲೈ 3ರ ವರೆಗೆ ಸಾರ್ವತ್ರಿಕ ವರ್ಗಾವಣೆಗಳನ್ನು ಕೈಗೊಳ್ಳಲು ಇಲಾಖಾ ಸಚಿವರಿಗೆ ಅಧಿಕಾರ ನೀಡಿ ಆದೇಶಿಸಲಾಗಿತ್ತು.
ಆದರೆ, ನಿಗದಿತ ವರ್ಗಾವಣೆ ನಂತರವೂ ಇಲಾಖೆ ಹಂತದಲ್ಲಿ ವರ್ಗಾವಣೆಗಳನ್ನು ಮಾಡಿದರೆ ನಂತರ ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.