ಆಂದೋಲನ ಓದುಗರಪತ್ರ : 24 ಶುಕ್ರವಾರ 2022

ಸರ್ವಾಧಿಕಾರಿ ಧೋರಣೆ ಸಲ್ಲದು

 ಕೇಂದ್ರ ಸರ್ಕಾರ ಘೋಷಣೆ ಮಾಡಿದ ‘ಅಗ್ನಿಪಥ್’ ಯೋಜನೆ ದೇಶಾದ್ಯಂತ ಯುವಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.  ಪ್ರತಿಭಟನೆ  ತೀವ್ರವಾಗಿದ್ದರೂ ಕೇಂದ್ರ ಸರ್ಕಾರ ದರ್ಪದಿಂದ ವರ್ತಿಸುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರು ಸೇನೆಗಳ ಮುಖ್ಯಸ್ಥರ ಮೂಲಕ  ಯೋಜನೆ ಪರ ಹೇಳಿಕೆ ಕೊಡಿಸಲಾಗಿದೆ. ಯುವಜನರ ದನಿ ಆಲಿಸದೇ, ಚೆರ್ಚಿಸದೆ ಬಲವಂತವಾಗಿ ಯೋಜನೆ ಜಾರಿ ಮಾಡುವುದು ಪ್ರಜಾಪ್ರಭುತ್ವ ನೀತಿಗೆ ವಿರುದ್ಧ. ಈಗ ಪ್ರತಿಭಟನೆ ನಡೆಸುತ್ತಿರುವರ  ಯುವಜನರ ವಿರುದ್ದ ಪ್ರಕರಣ ಧಾಖಲಾಗಿದ್ದರೆ ಅಂತಹವರನ್ನು ಸೇನಾ ನೇಮಕಾತಿಗೆ ಪರಿಗಣಿಸುವುದಿಲ್ಲ ಎಂದು ಸೇನಾ ಮುಖ್ಯಸ್ಥರು ಬೆದರಿಕೆ ಹಾಕುತ್ತಿರುವುದೂ ಸರ್ವಧಿಕಾರಿ ಧೋರಣೆಯೇ. ಹಾಲಿ ಇರುವ ಸೇನಾ ನೇಮಕಾತಿಯೇ ಮುಂದುವರಿಯಲಿ. ದೇಶಕಾಯುವ ಸೈನಿಕರ ಭದ್ರತೆ ಜೊತೆ ಚೆಲ್ಲಾಟ ವಾಡುವುದು ಸೈನಿಕರ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರದಿರದು. ಈಗಾಗಲೇ ಕೃಷಿ ಕಾಯ್ದೆ ಜಾರಿಗೆ ತಂದು ವರ್ಷಪೂರ್ತಿ ರೈತರು ಹೋರಾಟ ಮಾಡುವಂತೆ ಮಾಡಿದಿರಿ. ಕೊನೆಗೆ ಯಾವುದೇ ಷರತ್ತು ಇಲ್ಲದೆ ವಾಪಾಸ್ ತೆಗೆದುಕೊಂಡು ಮುಖಭಂಗ ಅನುಭವಿಸುವಂತಾಯಿತು. ಈ ಕೂಡಲೇ ‘ಅಗ್ನಿಪಥ್’ ಯೋಜನೆ ವಾಪಾಸು ಪಡೆಯದಿದ್ದರೆ ದೇಶದಾದ್ಯಂತ ಯುವಜನರ ಆಕ್ರೋಶಕ್ಕೆ ತುತ್ತಗುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ‘ಭವಿಷ್ಯ ದ  ಗಡಿ ರಕ್ಷಕರ ಭವಿಷ್ಯಕ್ಕೆ ಭದ್ರತೆ ನೀಡುವ ವಿಶ್ವಾಸ ಪಥ ಬೇಕಿದೆ’  (ಆಂದೋಲನ 21ಜೂನ್) ಸಂಪಾದಕಿಯ ಸಕಾಲಿಕ.

-ಮುಳ್ಳೂರು ಪ್ರಕಾಶ್, ಕನಕ ದಾಸ ನಗರ, ಮೈಸೂರು.


ಪ್ರಧಾನಿ ಮೋದಿಯವರ ಭೇಟಿಯ ಲಾಭವೇನು?

 ಜೂನ್ ೨೧, ೨೦೨೨ ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನದಂದು ಸಾಂಸೃತಿಕ ನಗರಿ ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದರು. ಯೋಗ ದಿನದ ಹಿಂದಿನ ದಿನ ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಸಮಾವೇಶ ನಡೆಸಿದರು.  ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಆಯ್ದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಅದು ಪ್ರಶ್ನೆಗಳ ಸಂವಾದವೋ ಅಥವಾ ಹೊಗಳಿಕೆಯ ಸಂವಾದವೋ? ನಮಗೆ ತಿಳಿಯದು. ಫಲಾನುಭವಿಗಳು ಮುಂದಿನ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳದೇ ಪ್ರಧಾನಿಗಳನ್ನು ಹೊಗಳಿ ಅಟ್ಟಕ್ಕೇರಿಸಿದರು. ನಂತರ ಸಮಾವೇಶದಲ್ಲಿ ಮಧ್ಯಮ ವರ್ಗ ಹಾಗೂ ಬಡ ಜನರ ಅಭಿವೃದ್ಧಿಯಾಗುವ  ಉಪಯೋಗವಾಗುವ ಯಾವುದೇ ರೀತಿಯ ಆಶ್ವಾಸನೆ ನೀಡದೇ, ಕೇವಲ ರಾಜಕೀಯ ಮತ್ತು ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು. ಪ್ರಸ್ತುತ ಜನರಿಗೆ ಏನು ಬೇಕಾಗಿದೆಯೋ ಅದನ್ನು ಮಾಡಬೇಕೆ ಹೊರತು ಇಲ್ಲ ಸಲ್ಲದ ಕೆಲಸ ಮಾಡಿ ಜನರ ತೆರಿಗೆ ಹಣವನ್ನು ವ್ಯರ್ಥವಾಗಿ ವೆಚ್ಚ ಮಾಡಿದರೆ ಏನು ಪ್ರಯೋಜನ ?

 – ಮಣಿಕಂಠ ತ್ರಿಶಂಕರ್, ಪತ್ರಿಕೋದ್ಯಮ ವಿದ್ಯಾರ್ಥಿ, ಮೈಸೂರು.


ದ್ರೌಪದಿ ಮುರ್ಮು ಆಯ್ಕೆ ಸ್ವಾಗತಾರ್ಹ

ಮುಂಬರುವ ರಾಷ್ಟಪತಿ ಚುನಾವಣೆಯಲ್ಲಿ ಆಡಳಿತಾರೂಡ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ನಾಯಕಿ ಹಾಗೂ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲೆ ಶ್ರೀಮತಿ ದ್ರೌಪದಿ ಮುರ್ಮು ಆಯ್ಕೆಗೊಂಡಿರುವುದು ಸ್ವಾಗತಾರ್ಹವಾಗಿದೆ.  ಶ್ರೀಮತಿ ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯಗಳ ನಾಯಕಿಯಾಗಿ ಆ ಜನಾಂಗಗಳ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ.  ಜೊತೆಗೆ ರಾಜಕೀಯದಲ್ಲೂ ಸಾಕಷ್ಟು ಪಳಗಿರುವ ಶ್ರೀಮತಿ ಮುರ್ಮು,  2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.  ವಿರೋದ ಪಕ್ಷಗಳು ಈಗಾಗಲೇ ಮಾಜಿ ಕೇಂದ್ರ ಸಚಿವ ಯಶ್ಬಂತ್ ಸಿನ್ಹ ರವರನ್ನು ರಾಷ್ಟಪತಿ ಹುದ್ದೆಗೆ ತಮ್ಮ  ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ, ಸರ್ವಸಮ್ಮತವಾದ ಆಯ್ಕೆಗೆ ಅವಕಾಶವಿಲ್ಲ. ಆದರೆ, ರಾಷ್ಡಪತಿಯಂತಹ ಸಾಂವಿಧಾನಿಕ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರೆ ಒಳ್ಳೆಯದು.  ಉಪ ರಾಷ್ಟಪತಿ ಹುದ್ದೆಯನ್ನು ಪ್ರತಿ ಪಕ್ಷಗಳಿಗೆ ಬಿಟ್ಟುಕೊಟ್ಟು ರಾಷ್ಟಪತಿ ಹುದ್ದೆಗೆ ಅವಿರೋಧ ಆಯ್ಕೆಗೆ ಆಡಳಿತಾರೂಢ ಎನ್ ಡಿ ಎ ಪ್ರಯತ್ನಿಸಬಹುದು.  ಇದೊಂದು ಸತ್ ಸಂಪ್ರದಾಯವಾಗಲಿದೆ. ಈ ನಿಟ್ಟಿನಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳು ಚರ್ಚೆ ನಡೆಸಬೇಕಾಗಿದೆ.

-ಡಾ. ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.