ಅಗ್ನಿಪಥಕ್ಕೆ ಪ್ರತಿಭಟನೆಯ ಅಡೆತಡೆ
ಗ್ರಾಚುಯಿಟಿ, ಪೆನ್ಷನ್ ಮತ್ತಿತರ ದೀರ್ಘಕಾಲಿನ ವೆಚ್ಚ ಉಳಿಸಲು ಅಲ್ಪಕಾಲೀನ ಸೇನಾ ಸೇವೆಯ ಯೋಜನೆ ಅಗ್ನಿಪಥಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಉತ್ತರದಲ್ಲಿ ಭುಗಿಲೆದ್ದ ಹಿಂಸಾಚಾರದ ಕೆನ್ನಾಲಿಗೆ ದಕ್ಷಿಣದ ರಾಜ್ಯಗಳಿಗೂ ಹರಡಿದೆ. ಈ ಯೋಜನೆ ಕುರಿತಂತೆ ಸೇನಾ ತಜ್ಞರಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ದೇಶದ ಸುರಕ್ಷತೆಯ ಸಂಗತಿಯನ್ನು ಆರ್ಥಿಕ ಉಳಿತಾಯದ ದಾರಿಗೆ ಎಳೆದು ತರುವುದರ ಬಗ್ಗೆ ಸೇನಾ ತಜ್ಞರು ಆಕ್ಷೇಪಿಸಿದ್ದಾರೆ. ಅಷ್ಟಕ್ಕೂ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದವರು ಮುಂದೇನು ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ. ಕೇಂದ್ರ ಸರ್ಕಾರದ ದುಡ್ಡು ಉಳಿಸುವ ಲೆಕ್ಕಾಚಾರದಿಂದ ದೇಶದ ಸುರಕ್ಷತೆಗೆ ಧಕ್ಕೆಯಾಗುತ್ತದೆಯಷ್ಟೇ ಅಲ್ಲಾ, ಯುವಕರ ಭವಿಷ್ಯವೂ ಅತಂತ್ರವಾಗುತ್ತದೆ ಎಂಬ ವಾದಗಳು ಕೇಳಿಬಂದಿವೆ. ಇಂತಹ ಯೋಜನೆಗಳನ್ನು ಘೋಷಿಸುವ ಮುನ್ನ ತಂತ್ರಜ್ಞರು ಮತ್ತು ಎಲ್ಲಾ ಭಾಗೀದರಾರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಏಕಾಏಕಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ತಪ್ಪು. ಇದು ಮತ್ತೊಂದು ಡಿಮಾನಿಟೈಸೆಷನ್ ಯೋಜನೆ ಆಗಲಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.
ಅಗ್ನಿಪಥದ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಅಗ್ನಿಪಥದ ವಿರುದ್ಧ ಕಣ್ಣಿಗೆ ಕಾಣಿಸುತ್ತಿರುವ ಹಿಂಸಾಚಾರದ ಪ್ರತಿಭಟನೆಗಳಿಂತಲೂ ಹತ್ತುಪಟ್ಟು ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ. ಹರ್ಯಾಣ ರಾಜ್ಯದ ಪಾಣಿಪತ್ ನಲ್ಲಿ ನಡೆದ ಶಾಂತರೀತಿಯ ಪ್ರತಿಭಟನೆಯಲ್ಲಿ ಯುವಕ ಕೇಳಿದ ಪ್ರಶ್ನೆ ಇದು: ‘ನಾನು ಸುಮಾರು 9 ವರ್ಷಗಳಿಂದ ಸೇನೆಯ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ, ಈಗ ನಾನು ಕೇವಲ 4 ವರ್ಷ ಸೇವೆ ಸಲ್ಲಿಸಿದರೆ, ಶೇ. 25ರಷ್ಟು ವಿಭಾಗದಲ್ಲಿ ನನ್ನನ್ನು ಉಳಿಸಿಕೊಳ್ಳಲಾಗುವುದೇ ಎಂದು ನನಗೆ ಖಚಿತವಿಲ್ಲ. ನಾನು 12 ನೇ ತರಗತಿಯವರೆಗೆ ಓದಿದ್ದೇನೆ ಮತ್ತು ನಾನಿನ್ನು ಪದವೀಧರ ಆಗಿಲ್ಲ. ನಾನು ನಾಲ್ಕು ವರ್ಷ ಸೇವೆ ಸಲ್ಲಿಸಿ 26 ನೇ ವಯಸ್ಸಿನಲ್ಲಿ ಬಿಟ್ಟರೆ, ಪದವಿ ಪೂರ್ಣಗೊಳಿಸಲು ನನಗೆ ಇನ್ನೂ ನಾಲ್ಕು ವರ್ಷಗಳು ಬೇಕಾಗುತ್ತದೆ, 30ನೇ ವಯಸ್ಸಿನಲ್ಲಿ ನಾನು ಹೇಗೆ ಮತ್ತು ಯಾವ ಕೆಲಸ ಪಡೆಯಲು ಸಾಧ್ಯ? ಕೇಂದ್ರ ಸರ್ಕಾರ ಉದ್ಯೋಗದ ಭರವಸೆ ನೀಡುತ್ತದೆಯೇ?’ ಈ ಪ್ರಶ್ನೆಗಳಲ್ಲೇ ಉತ್ತರಗಳು ಅಡಗಿವೆ. ಈ ಉತ್ತರಗಳಿಗೆ ಪರಿಹಾರ ಕಂಡುಕೊಂಡರೆ ಅಗ್ನಿಪಥ ಶಾಂತಿಪಥವಾಗುತ್ತದೆ. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಶಾಂತಿಪಥ ಬೇಕಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!
ಮಳೆ ಸುರಿಯೇ ತಣಿಯದಿರುವುದೇ ಹಣದುಬ್ಬರ?
ಯಥೇಚ್ಛವಾಗಿ ಮಳೆ ಸುರಿದರೆ ಹಣದುಬ್ಬರ ತಣಿಯಲಿದೆ. ಸಮೃದ್ಧ ಮಳೆಯಿಂದಾಗಿ ಬಂಪರ್ ಬೆಳೆ ಬಂದರೆ ಸಹಜವಾಗಿಯೇ ಆಹಾರ ಉತ್ಪನ್ನಗಳ ಬೆಲೆ ಕುಸಿಯುತ್ತದೆ. ಸದ್ಯ ಹಣದುಬ್ಬರಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳೆಂದರೆ- ಇಂಧನ ಮತ್ತು ಆಹಾರ ಧಾನ್ಯಗಳು. ಸದ್ಯಕ್ಕೆ ಇಂಧನ ಬೆಲೆ ತಣಿಯುವ ಸಾಧ್ಯತೆ ಕ್ಷೀಣಿಸಿದೆ. ಆದರೆ, ಅರ್ಥಶಾಸ್ತ್ರಜ್ಞರು ಮಾತ್ರ ಸಮೃದ್ಧ ಮಳೆ ಸುರಿದೊಡೆ ಹಣದುಬ್ಬರ ತಣಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಉದಾರತೆ ತೋರಿಸಿ ಹೇರಿರುವ ಸುಂಕವನ್ನು ಕೊಂಚ ತಗ್ಗಿಸಿದರೂ ಇಂಧನದಿಂದಾಗಿ ಏರಿರುವ ಹಣದುಬ್ಬರ ತಗ್ಗಲಿದೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿ ನಗದು ಹರಿವಿನ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆ ಮಾಡಿ ನಗದಿನ ಮೇಲೆ ನಿಯಂತ್ರಣ ಹೇರಲಿದೆ. ಅಂತಿಮವಾಗಿ ಆರ್ಬಿಐ- ಕೇಂದ್ರ ಸರ್ಕಾರ ಮತ್ತು ವರುಣ ದೇವ ಮಾತ್ರವೇ ಹಣದುಬ್ಬರ ತಣಿಸಲು ಸಾಧ್ಯ! ಮಳೆಯ ಸುರಿಯಲಿದೆ, ಬಡ್ಡಿ ಏರಲಿದೆ, ಸುಂಕ ತಗ್ಗಲಿದೆಯೇ? ಇದು ಟ್ರಿಲಿಯನ್ ಡಾಲರ್ ಪ್ರಶ್ನೆ!
ಭಾರತದ ಅವಮಾನಕ್ಕೆ ಆಫ್ಗನ್ ನಲ್ಲಿ ಪ್ರತಿಕಾರ
ಅಫ್ಘಾನಿಸ್ತಾನದ ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಮುಸ್ಲಿಂ ಮೂಲಭೂತವಾದಿ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಪ್ರವಾದಿ ಮಹಮ್ಮದ್ ಅವರಿಗೆ ಮಾಡಿದ ಅವಮಾನಕ್ಕೆ ಇದು ಪ್ರತೀಕಾರ ಎಂದು ಐಸಿಸ್ ಹೇಳಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಈ ತಿಂಗಳ ಆರಂಭದಲ್ಲಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ್ದ ಹೇಳಿಕೆಗಳಿಂದ ಹಲವಾರು ದೇಶಗಳಲ್ಲಿ ಪ್ರತಿಭಟನೆಗಳು ಹುಟ್ಟಿಕೊಂಡವು. ಐಸಿಸ್ ತನ್ನ ಅಮಾಕ್ ಪ್ರಚಾರ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಶನಿವಾರದ ದಾಳಿಯು ಹಿಂದೂಗಳು ಮತ್ತು ಸಿಖ್ಖರನ್ನು ಮತ್ತು “ಅಲ್ಲಾಹನ ಸಂದೇಶವಾಹಕರಿಗೆ ಬೆಂಬಲ ನೀಡುವ ಕ್ರಿಯೆಯಲ್ಲಿ” ಅವರನ್ನು ರಕ್ಷಿಸಿದ “ಧರ್ಮಭ್ರಷ್ಟರನ್ನು” ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಅದರ ಹೋರಾಟಗಾರರೊಬ್ಬರು “ಕಾಬೂಲ್ನಲ್ಲಿ ಹಿಂದೂ ಮತ್ತು ಸಿಖ್ ಬಹುದೇವತಾವಾದಿಗಳ ದೇವಾಲಯಕ್ಕೆ ನುಗ್ಗಿ, ಅದರ ಸಿಬ್ಬಂದಿಯನ್ನು ಕೊಂದ ನಂತರ, ಅದರೊಳಗಿದ್ದವರ ಮೇಲೆ ಮೆಷಿನ್ ಗನ್ ನಿಂದ ಗುಂಡು ಹಾರಿಸಿದ್ದಲ್ಲದೇ ಹ್ಯಾಂಡ್ ಗ್ರೆನೇಡ್ಗಳನ್ನು ಎಸೆದರು” ಎಂದು ಐಸಿಸ್ ಹೇಳಿಕೊಂಡಿದೆ.