ದೇಶದ 24 ಸ್ವಘೋಷಿತ ವಿಶ್ವವಿದ್ಯಾನಿಲಯಗಳು ನಕಲಿ: ಯುಜಿಸಿ

ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದಲ್ಲಿನ 24 ಸ್ವಯಂ ಘೋಷಿತ ವಿಶ್ವವಿದ್ಯಾನಿಲಯಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಕಲಿ ಎಂದು ಘೋಷಿಸಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ದೂರುಗಳು ಹಾಗೂ ವಿದ್ಯುನ್ಮಾನ ಮುದ್ರಣ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ೨೪ ಸ್ವಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಯುಜಿಸಿ ಘೋಷಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಎಂಟು ನಕಲಿ ವಿಶ್ವವಿದ್ಯಾಲಯಗಳಿವೆ. ನಂತರದ ಸ್ಥಾನದಲ್ಲಿ ದೆಹಲಿ (7), ಒಡಿಶಾ ಮತ್ತು ಪಶ್ಚಿಮ ಬಂಗಾಳ (ತಲಾ 2) ಹಾಗೂ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದೊಂದು ಖೊಟ್ಟಿ ಶಿಕ್ಷಣ ಸಂಸ್ಥೆಗಳಿವೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ನಕಲಿ ಅಥವಾ ಮಾನ್ಯತೆ ಇಲ್ಲದ ವಿಶ್ವವಿದ್ಯಾಲಯಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತ ವಿವರಿಸಿರುವ ಸಚಿವರು, ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ನಕಲಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಪಟ್ಟಿ ಬಗ್ಗೆ ಸಾರ್ವಜನಿಕ ನೋಟಿಸ್‌ಗಳನ್ನು ನೀಡಲಾಗಿದೆ. ತಮ್ಮ ವ್ಯಾಪ್ತಿಗಳಲ್ಲಿರುವ ಇಂಥ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಶಿಕ್ಷಣ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆದಿದೆ ಎಂದು ವಿವರಿಸಿದ್ದಾರೆ.

× Chat with us