ಯುಗಾದಿಯ ವಿಶೇಷ ಅಡುಗೆ ರೆಸಿಪಿಗಳು!

ಯುಗಾದಿ ವರ್ಷದ ಮೊದಲ ಹಬ್ಬ. ಹಬ್ಬಗಳಲ್ಲಿ ಆಚರಣೆ, ಪೂಜೆಗಳಷ್ಟೇ ಮುಖ್ಯವಾದುದು ಹಬ್ಬದಂದು ಮಾಡುವ ಅಡುಗೆ. ಕೆಲವೊಮ್ಮೆ ಕಡಿಮೆ ಸಮಯದಲ್ಲಿ ರುಚಿಕರವಾದ ಅಡುಗೆಗಳನ್ನು ಮಾಡಬೇಕಾಗುತ್ತದೆ. ಅಲ್ಲದೆ ಹಬ್ಬದ ದಿನ ಯಾರೂ ತೀರಾ ಸಾಧಾರಣವಾದ ಅಡುಗೆಗಳನ್ನು ಮಾಡುವುದಿಲ್ಲ. ಯುಗಾದಿಯಂದು ಹಬ್ಬ ಆಚರಿಸಿದ ನಂತರ ಮಧ್ಯಾಹ್ನ ಕುಳಿತು ಸವಿಯಲು ಒಂದಷ್ಟು ವಿಶೇಷ ಖಾದ್ಯಗಳಿದ್ದರೆ ಎಷ್ಟು ಚೆಂದವಲ್ಲವೇ? ಆದ್ದರಿಂದ ಹಲವು ವಿಶೇಷ ಅಡುಗೆಗಳ ರೆಸಿಪಿಗಳನ್ನು ಓದುಗರಿಗಾಗಿ ನೀಡಲಾಗಿದೆ. ಈ ಹಬ್ಬಕ್ಕೆ ಈ ವಿಶೇಷ ಅಡುಗೆಗಳನ್ನು ತಯಾರಿಸಿ ಸವಿಯಿರಿ.

ಹುಳಿ ಅನ್ನ, ಹಸಿ ಮಜ್ಜಿಗೆ ಹುಳಿ:

ಮೊದಲು ಒಂದಷ್ಟು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಡಿ. ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಕಡಲೆಕಾಯಿಬೀಜ, ಉದ್ದಿನ ಬೇಳೆ ಹಾಗೂ ಕಡಲೆ ಬೇಳೆ, ಇಂಗು, ಒಣಮೆಣಸಿನಕಾಯಿ ಒಗ್ಗರಣೆ ಹಾಕಿ. ಪಾತ್ರೆಯೊಂದರಲ್ಲಿ ಅನ್ನ ಹರಡಿಕೊಂಡು ಅದಕ್ಕೆ ಸ್ವಲ್ಪ ಬೆಲ್ಲದ ಪುಡಿ, ಹುಣಸೆಹಣ್ಣಿನ ಗಟ್ಟಿ ರಸ, ಉಪ್ಪು, ತೆಂಗಿನತುರಿ, ಕರಿಬೇವು, ತಿಳಿಸಾರಿನ ಪುಡಿ (೩-೪ ಚಮಚ), ಹುರಿದ ಬಿಳಿ ಎಳ್ಳು ಸ್ವಲ್ಪ ಹಾಕಿ ನಂತರ ಆಗಲೇ ತಯಾರಿಸಿಟ್ಟುಕೊಂಡ ಒಗ್ಗರಣೆ ಮಿಶ್ರಣ ಮಾಡಿದರೆ ಹುಳಿ ಅನ್ನ ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುತ್ತದೆ.
ಹಸಿ ಮಜ್ಜಿಗೆ ಹುಳಿ: ಸ್ವಲ್ಪ ಸಾಸಿವೆ, ಇಂಗು, ಹುರಿಗಡಲೆ, ತೆಂಗಿನಕಾಯಿ, ೨-೩ ಒಣಮೆಣಸಿನಕಾಯಿ, ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಬೇಕು. ಅದನ್ನು ಪಾತ್ರೆಯೊಂದಕ್ಕೆ ಹಾಕಿ ಅದಕ್ಕೆ ಉಪ್ಪು, ಕರಿಬೇವು, ಸಾಸಿವೆ ಹಾಗೂ ಒಣಮೆಣಸಿನಕಾಯಿಯ ಒಗ್ಗರಣೆ ಹಾಕಿ ಒಲೆ ಆರಿಸಿದ ನಂತರ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಹಸಿ ಮಜ್ಜಿಗೆ ಹುಳಿ ಸಿದ್ಧವಾಗುತ್ತದೆ.
ಹುಳಿ ಅನ್ನದೊಂದಿಗೆ ಹಸಿ ಮಜ್ಜಿಗೆ ಹುಳಿ ಒಳ್ಳೆಯ ಕಾಂಬಿನೇಶನ್‌.
————
ಮಾವಿನಕಾಯಿ ತೊಕ್ಕು:

ಮೊದಲು ಮಾವಿನಕಾಯಿಯನ್ನು ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಬೇಕು. ನಂತರ ಬಾಣಲೆಗೆ ಸ್ವಲ್ಪ ಹೆಚ್ಚು ಎಣ್ಣೆ, ಸಾಸಿವೆ, ಒಂದೆರಡು ಒಣಮೆಣಸಿನಕಾಯಿ, ಉದ್ದಿನಬೇಳೆ, ಇಂಗು ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಅದಕ್ಕೆ ಮಾವಿನಕಾಯಿ ತುರಿ ಹಾಕಿ ಚೆನ್ನಾಗಿ ಹುರಿಯಬೇಕು. ತಳ ಹಿಡಿಯದಂತೆ ನೀರು ಹಾಕಿ ಮಾವಿನಕಾಯಿ ತುರಿಯನ್ನು ಬೇಯಿಸಬೇಕು. ನಂತರ ೩-೪ ಚಮಚ ಅಚ್ಚಖಾರದ ಪುಡಿ, ಸ್ವಲ್ಪ ಧನಿಯಾ ಪುಡಿ, ರಚಿಗೆ ಅನುಗುಣವಾಗಿ ಉಪ್ಪು, ತುರಿದ ಬೆಲ್ಲ (ಒಂದು ಸಣ್ಣ ಅಚ್ಚು) ಹಾಕಿ ಕುದಿಸಿದರೆ ಮಾವಿನಕಾಯಿ ತೊಕ್ಕು ಸಿದ್ಧ.
ಸಾಮಾನ್ಯವಾಗಿ ತೊಕ್ಕನ್ನು ೧ ಅಥವಾ ೨ ವಾರಗಳ ಕಾಲ ಇಟ್ಟರೂ ಚೆನ್ನಾಗಿರುತ್ತದೆ. ಫ್ರಡ್ಜ್‌ ಬಳಸಿದರಂತೂ ಇನ್ನೂ ಹೆಚ್ಚು ದಿನ ಇಟ್ಟುಕೊಂಡು ಸೇವಿಸಬಹುದು.
————

ತೊಂಡೆಕಾಯಿ-ಹಸಿ ಗೋಡಂಬಿ ಪಲ್ಯ:

ಹಸಿ ಗೋಡಂಬಿಯನ್ನು ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು (ಅರ್ಧ ಕೆ.ಜಿ. ತೊಂಡೆಕಾಯಿಗೆ ಕಾಲು ಕೆ.ಜಿ. ಗೋಡಂಬಿ). ತೊಂಡೆಕಾಯಿಯನ್ನು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಅದಕ್ಕೆ ಎರಡನ್ನೂ ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು, ಕಾದ ನಂತರ ಸಾಸಿವೆ, ಒಣ ಮೆಣಸಿನಕಾಯಿ, ಕರಿಬೇವಿನ ಒಗ್ಗರಣೆ ಹಾಕಿ, ಅದಕ್ಕೆ ಬೆಂದ ತೊಂಡೆಕಾಯಿ ಹಾಗೂ ಗೋಡಂಬಿ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಕಾಯಿತುರಿ ಹಾಕಿ ಕಲಸಿದರೆ ಪಲ್ಯ ಸವಿಯಲು ಸಿದ್ಧ.
ಇದು ಮಂಗಳೂರು ಭಾಗದ ವಿಶೇಷ ಖಾದ್ಯ.

————

ಕಡಲೆಬೇಳೆ-ಹಲಸಿನಹಣ್ಣು ಪಾಯಸ (ಮಡ್ಗಣೆ):

ಅರ್ಧ ಪಾವು ಕಡಲೆಬೇಳೆಯನ್ನು ಸ್ವಲ್ಪ ಹುರಿದು ಬೇಯಿಸಿಕೊಳ್ಳಿ. ಒಂದು ತೆಂಗಿನಕಾಯಿಯ ತುರಿಯನ್ನು ಚೆನ್ನಾಗಿ ರುಬ್ಬಿಕೊಂಡು ಅದರ ಹಾಲು ತೆಗೆಯಿರಿ. ಆ ಹಾಲಿಗೆ ಹಲಸಿನಹಣ್ಣಿನ ಚೂರುಗಳನ್ನು (೩ ಕಪ್) ಹಾಕಿ ಹದವಾಗಿ ಬೇಯಿಸಿ (ಹೆಚ್ಚು ಬೇಯಬಾರದು). ನಂತರ ಬೆಂದ ಕಡಲೆಬೇಳೆಗೆ ‌೧ ಬೆಲ್ಲದ ಉಂಡೆಯ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಅರ್ಧ ಹಿಡಿ ಅಕ್ಕಿಯನ್ನು ಪುಡಿ ಮಾಡಿಕೊಂಡು ಈ ಮಿಶ್ರಣಕ್ಕೆ ಬೆರೆಸಿ ತಳ ಹತ್ತದಂತೆ ಚೆನ್ನಾಗಿ ಕಲೆಸಿರಿ. ಮಿಶ್ರಣ ಹದವಾಗಿ ಕುದ್ದ ನಂತರ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿ ಸೇರಿಸಿದರೆ ಮಡ್ಗಣೆ ತಯಾರಾಗುತ್ತದೆ. ಇದನ್ನು ಯುಗಾದಿ ಸಂದರ್ಭದಲ್ಲಿ ಹೆಚ್ಚಾಗಿ ದಕ್ಷಿಣ ಕನ್ನಡ ಭಾಗದ ಜನರು ತಯಾರಿಸುತ್ತಾರೆ.

× Chat with us