ಈ ರೀತಿಯ ಮದುವೆಗಳು ಹೆಚ್ಚಾಗಲಿ ಎಂದು ಹರಸಿದ ಹಿರಿಯರು!

ಮಳವಳ್ಳಿ: ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಮಾತಿದೆ. ಗಂಡು ಹೆಣ್ಣಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಹಿರಿಯರ ಮಾತು. ಈ ಮಾತಿನ ತಾತ್ಪರ್ಯದಂತೆ ಮಳವಳ್ಳಿಯಲ್ಲಿ ವಿಶೇಷ ಜೋಡಿಗಳ ವಿವಾಹ ನಡೆದಿದೆ.
ತಾಲ್ಲೂಕಿನ ನಂಜೇಗೌಡರದೊಡ್ಡಿ ಗ್ರಾಮದ ಶಾಂತಿ (35) ಪತಿ ಹಾಗೂ ತಿ.ನರಸೀಪುರ ತಾಲ್ಲೂಕಿನ ಚಿಮಿಲಿ ಗ್ರಾಮದ ಶಿವಕುಮಾರ್ (32) ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಶಿವಕುಮಾರ್ ಅನಾಥೆ ವಿಧವೆ ಶಾಂತಿಗೆ ಹಿರಿಯರ ಆಶೀರ್ವಾದ ಪಡೆದು ಮರು ಮದುವೆಯಾಗುವ ಮೂಲಕ ಅನಾಥೆಗೆ ಬಾಳು ನೀಡಿದ್ದಾರೆ.
ತಾಲ್ಲೂಕಿನ ನಂಜೇಗೌಡರದೊಡ್ಡಿ ಗ್ರಾಮದ ಶಾಂತಿಯ ಪತಿ ಮೃತಪಟ್ಟ ನಂತರ ಅತ್ತೆಯು ಸಹ ತೀರಿಕೊಂಡು ಅನಾಥೆಯಾಗಿದ್ದರು. ಇದನ್ನು ಮನಗಂಡ ಸಹೋದರಿ ಪ್ರೇಮಾ ಹಾಗೂ ಭಾವ ಶಿವಸ್ವಾಮಿ, ಚಿಮಿಲಿ ಗ್ರಾಮದ ವಿಧುರ ಶಿವಕುಮಾರನೊಂದಿಗೆ ಮಾತುಕತೆ ನಡೆಸಿ, ಹಾಡ್ಲಿ ಬಸವನಪುರ ಬಳಿಯಿರುವ ನಡು ಮಾರ್ಗದ ಬಸವೇಶ್ವರ ದೇವರ ಸಮ್ಮುಖದಲ್ಲಿ ಶುಕ್ರವಾರ ಸರಳವಾಗಿ ವಿವಾಹ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ನನ್ನ ಪತ್ನಿಯೂ ಅನಾರೋಗ್ಯದಿಂದ ನಿಧನರಾಗಿದ್ದರು. ಇತ್ತ ಪತಿಯನ್ನು ಕಳೆದುಕೊಂಡ ಶಾಂತಿ ಅನಾಥೆಯಾಗಿದ್ದಳು. ಶಾಂತಿಯ ಅಕ್ಕ ಮತ್ತು ಭಾವ ಹಾಗೂ ನಮ್ಮ ತಾಯಿ-ತಂದೆಯರ ಆಶಯದಂತೆ ಹಿರಿಯರ ಆಶೀರ್ವಾದ ಪಡೆದು ದೇವರ ಸನ್ನಿಧಿಯಲ್ಲಿ ವಿವಾಹವಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಂತಿಯ ಭಾವ ಶಿವಸ್ವಾಮಿ, ಸಹೋದರಿ ಪ್ರೇಮಾ, ಶಿವಕುಮಾರನ ತಂದೆ ಮರಿಸ್ವಾಮಿ, ತಾಯಿ ಮಹದೇವಮ್ಮ, ಪತ್ರಕರ್ತರಾದ ಮಾ.ಎಂ ಶಿವಕುಮಾರ್, ಉದ್ಯಮಿ ಶೀಲಾ, ಯುವ ಮುಖಂಡ ಮಲ್ಲೇಶ್ ಹಾಗೂ ಸ್ಥಳೀಯರು ಹಾಜರಿದ್ದರು.