ತೌಕ್ತೆ ಚಂಡಮಾರುತಕ್ಕೂ ಹಲ್ಲಿಗೂ ಏನು ಸಂಬಂಧ? ಹೆಸರಿನ ಹಿಂದಿದೆ ಸ್ವಾರಸ್ಯ

ಹೊಸದಿಲ್ಲಿ: ಕೋವಿಡ್‌ ಎರಡನೇ ಅಲೆ ಅಬ್ಬರದ ನಡುವೆಯೇ ಜನರನ್ನು ಇನ್ನಷ್ಟು ಆತಂಕಕ್ಕೆ ಗುರಿ ಮಾಡಿರುವ ತೌಕ್ತೆ ಈ ವರ್ಷದ ಮೊದಲ ಚಂಡಮಾರುತ.

ಪ್ರತಿವರ್ಷ ಚಂಡಮಾರುತ ಎದುರಾದಗಳು ಒಂದು ಆಸಕ್ತಿಕರ ಹೆಸರು ಇದ್ದೇ ಇರುತ್ತದೆ. ಅದೇ ರೀತಿ ತೌಕ್ತೆ ಚಂಡಮಾರುತದ ಹೆಸರೂ ಕೂಡ ಅಷ್ಟೇ ಸ್ವಾರಸ್ಯಕರ.

ಪ್ರತಿವರ್ಷ ಚಂಡಮಾರುತ ಬೀಸಿದಾಗಲೂ ಹೆಸರಿಡುವ ಜವಾಬ್ದಾರಿ ಒಂದೊಂದು ದೇಶದ ಮೇಲೆ ಇರುತ್ತದೆ. ಈ ಸಾರಿ ತೌಕ್ತೆ ಎನ್ನುವ ಹೆಸರಿಟ್ಟಿರುವುದು ಮ್ಯಾನ್ಮಾರ್‌. ಅಂದಹಾಗೆ ತೌಕ್ತೆ ಎಂದರೆ ಜೋರು ಸದ್ದು ಮಾಡುವ ಹಲ್ಲಿ ಎಂದು ಅರ್ಥ.

ಸೈಕ್ಲೋನ್‌ಗೆ ಹೇಗೆ ಹೆಸರಿಡುತ್ತಾರೆ?
ವಿಶ್ವ ಹವಾಮಾನ ಸಂಸ್ಥೆ, ವಿಶ್ವಸಂಸ್ಥೆಯ ಏಷ್ಯಾ ಫೆಸಿಫಿಕ್‌ ವಿಭಾಗದ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (WMO/ESCAP)ಚಂಡಮಾರುತ ವಿಭಾಗ (PTC) ಚಂಡಮಾರುತದ ಹೆಸರುಗಳನ್ನು ತೀರ್ಮಾನಿಸುತ್ತಿದೆ. ಈ ಸಮಿತಿಯಲ್ಲಿ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್‌, ಪಾಕಿಸ್ತಾನ, ಮಾಲ್ಡೀವ್ಸ್‌, ಒಮನ್‌, ಶ್ರೀಲಂಕಾ, ಥಾಯ್ಲೆಂಡ್‌, ಇರಾನ್‌, ಕಥಾರ್‌, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್‌ ದೇಶಗಳಿವೆ. ಈ ದೇಶಗಳು ಶಿಫಾರಸು ಮಾಡುವ ಹೆಸರುಗಳನ್ನು ಚಂಡಮಾರುತಕ್ಕೆ ಇಡಲಾಗುತ್ತದೆ.

2004ರಲ್ಲಿ ಎಂಟು ದೇಶಗಳು ಶಿಫಾರಸು ಮಾಡಿದ ಒಟ್ಟು 64 ಹೆಸರುಳನ್ನು ಅಂತಿಮಗೊಳಿಸಲಾಗಿತ್ತು. ಕಳೆದ ವರ್ಷ ಮೇನಲ್ಲಿ ಬೀಸಿದ ಆಂಫಾನ್‌ ಚಂಡಮಾರುತದ ಹೆಸರನ್ನು ಭಾರತ ಸೂಚಿಸಿತ್ತು. ಅರಬ್ಬೀ ಸಮುದ್ರದಲ್ಲಿ ಕಳೆದ ವರ್ಷ ಬೀಸಿದ ನಿಸರ್ಗ ಚಂಡಮಾರುತದ ಹೆಸರನ್ನು ಬಾಂಗ್ಲಾದೇಶ ಅಂತಿಮಗೊಳಿಸಿತ್ತು. 2018ರಲ್ಲಿ WMO/ESCAP ಸಮಿತಿಯಲ್ಲಿ ಇನ್ನೂ ಐದು ರಾಷ್ಟ್ರಗಳನ್ನು ಸೇರಿಸಿ ಒಟ್ಟು 169 ಹೆಸರನ್ನು ಅಂತಿಮಗೊಳಿಸಲಾಗಿತ್ತು. ಪ್ರತೀ ರಾಷ್ಟ್ರವೂ 13 ಹೆಸರು ಕಳುಹಿಸುವಂತೆ ಸೂಚಿಸಲಾಗಿತ್ತು.

ಸೈಕ್ಲೋನ್‌ಗೆ ಹೆಸರಿಡುವುದರಿಂದ ಲಾಭವೇನು?
ಸೈಕ್ಲೋನ್‌ಗೆ ಹೆಸರಿಡುವುದರಿಂದ ವಿಪತ್ತು ನಿರ್ವಹಣಾ ಪಡೆಗೆ ನೆರವಾಗಲಿದೆ. ಜನ ಸಾಮಾನ್ಯರು ಚಂಡಮಾರುತವನ್ನು ಸುಲಭವಾಗಿ ಕಂಡುಹಿಡಿಯಬಲ್ಲರು. ಮೂರ್ನಾಲ್ಕು ಚಂಡಮಾರುತಗಳ ನಡುವೆ ಸಂದೇಹವಿದ್ದಾಗ ಹೆಸರುಗಳು ನಮ್ಮ ಸಂದೇಹಗಳನ್ನು ಪರಿಹರಿಸುತ್ತವೆ. ಚಂಡಮಾರುತವು ಎಲ್ಲೆಲ್ಲಿ ಬೀಸುತ್ತದೆ? ಯಾವ ಭಾಗದವರು ಎಚ್ಚರಿಕೆಯಿಂದ ಇರಬೇಕು ಎಂಬುದು ತಿಳಿಯಲಿದೆ. ಅಲ್ಲದೇ ಈ ಹಿಂದೆ ಬೀಸಿದ್ದ ಚಂಡಮಾರುತವನ್ನು ಭವಿಷ್ಯದಲ್ಲಿ ಉಲ್ಲೇಖಿಸುವಾಗ ಹೆಸರುಗಳು ನೆರವಿಗೆ ಬರಲಿವೆ.

ಹೆಸರಿಡಲು ಮಾನದಂಡಗಳಿವೆಯೇ?
ಸೈಕ್ಲೋನ್‌ ಹೆಸರುಗಳು ಚಿಕ್ಕದಾಗಿ, ಸರಳವಾಗಿ ಇರಬೇಕು. ಇದು ಸಾಂಸ್ಕೃತಿಕವಾಗಿ ಸೂಕ್ಷ್ಮವಾಗಿ ಇರಬಾರದು, ಈ ಹೆಸರುಗಳು ಕೆಟ್ಟ ಅರ್ಥಗಳನ್ನು ನೀಡಬಾರದು.

ಪತ್ನಿಯರ ಹೆಸರಿಟ್ಟಿದ್ದರೇ ವಿಜ್ಞಾನಿಗಳು?
ಚಂಡಮಾರುತಕ್ಕೆ ಮಹಿಳೆಯರ ಹೆಸರುಗಳನ್ನೇ ಹೆಚ್ಚು ಇಡುತ್ತಾರೆ. ಈ ಹಿಂದೆ ಕೆಲವು ದೇಶದ ಭೌಗೋಳಿಕ ವಿಜ್ಞಾನಿಗಳು ತಮ್ಮ ಪತ್ನಿಯರ ಹೆಸರನ್ನೇ ಚಂಡಮಾರುತಕ್ಕೆ ಇಟ್ಟಿದ್ದರು ಎನ್ನುವ ಊಹಾಪೋಹಗಳಿವೆ. ಚಂಡಮಾರುತಕ್ಕೆ ಮಹಿಳೆಯರ ಹೆಸರು ಇಡಬೇಡಿ ಎಂದು 20014ರಲ್ಲಿ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಆ ನಂತರ ಕೆಲವು ಚಂಡಮಾರುತಕ್ಕೆ ಪುರುಷರ ಹೆಸರನ್ನು ಇಡಲಾಗಿತ್ತು. ಆ ನಂತರ ಯಥಾಸ್ಥಿತಿ ಮುಂದುವರಿದಿದೆ.

× Chat with us