ರಾಜಕೀಯ ಲಾಭಕ್ಕಾಗಿ ಹೆಣ್ಣನ್ನು ಬಳಸದ ನಾಯಕರೂ ಇದ್ದಾರೆ…; ವಾರದ ಅಂಕಣ

ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್ ಇತ್ಯಾದಿ
ರಾಜಕಾರಣದಲ್ಲಿ ಹೆಣ್ಣನ್ನು ಮುಂದಿಟ್ಟುಕೊಂಡು ಎದುರಾಳಿಗಳನ್ನು ಹಣಿಯುವ ತಂತ್ರ ಹೊಸತೇನಲ್ಲವಾದರೂ ರಾಜಕೀಯ ಲಾಭಕ್ಕಾಗಿ ಯಾವ ಕಾರಣಕ್ಕೂ ಹೆಣ್ಣನ್ನು ಮುಂದಿಟ್ಟುಕೊಳ್ಳುವ ನೀಚತನ ಮಾಡುವುದಿಲ್ಲ ಎಂದು ಶಪಥ ಮಾಡಿ ನಡೆದುಕೊಂಡವರಿದ್ದಾರೆ.
ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಹಿಡಿದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತನಕ ಹಲವು ನಾಯಕರ ಉದಾಹರಣೆಗಳನ್ನು ಕೊಡಬಹುದು. ಇವರೆಲ್ಲ ತಮ್ಮ ರಾಜಕೀಯ ಬದುಕಿನ ಯಾವ ಕಾಲಘಟ್ಟದಲ್ಲೂ ಹೆಣ್ಣನ್ನು ಮುಂದಿಟ್ಟುಕೊಂಡು ಆಟ ಆಡಿಲ್ಲ. ಉದಾಹರಣೆಗೆ ದೇವೇಗೌಡರನ್ನೇ ತೆಗೆದುಕೊಳ್ಳಿ. ಕರ್ನಾಟಕದ ರಾಜಕಾರಣದಲ್ಲಿ ಅವರಂತೆ ಎದುರಾಳಿಗಳಿಂದ ಹಿಂಸೆ ಅನುಭವಿಸಿದ ನಾಯಕರು ಅಪರೂಪ. ಆದರೆ ಇಂತಹ ಹಿಂಸೆಯನ್ನು ಅವರು ನೇರಾನೇರವಾಗಿ ಎದುರಿಸಿದರು.
ದೇವರಾಜ ಅರಸರು ಮುಖ್ಯಮಂತ್ರಿಯಾದ ಕಾಲದಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನವನ್ನು ಅಲಂಕರಿಸಿದ್ದ ದೇವೇಗೌಡರು ೧೯೮೩ರಲ್ಲಿ ಅಸ್ತಿತ್ವಕ್ಕೆ ಬಂದ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗೇರಬೇಕಿತ್ತು. ಆದರೆ ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರ ಮಾತಿಗೆ ಗೌರವ ಕೊಟ್ಟ ದೇವೇಗೌಡರು ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರು ಆ ಜಾಗದಲ್ಲಿ ಕೂರಲು ಸಹಕರಿಸಿದರು. ಅಷ್ಟೇ ಅಲ್ಲ. ಕನಕಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮನೆ, ಮನೆಗೆ ಹೋಗಿ ಪ್ರಚಾರ ಮಾಡಿ ಹೆಗಡೆ ಅವರನ್ನು ಗೆಲ್ಲಿಸಿದರು.
ಆದರೆ ಗೆದ್ದ ಸ್ವಲ್ಪ ಕಾಲದಲ್ಲಿ ಹೆಗಡೆ ಅವರಿಗೆ ಅತ್ಯಾಪ್ತರು ಕಿವಿ ಕಚ್ಚಿದರು. ನಿಮ್ಮ ರಾಜಕೀಯ ಭವಿಷ್ಯಕ್ಕೆ ಅಡ್ಡಗಾಲು ಹಾಕಬಲ್ಲವರು ದೇವೇಗೌಡರು ಮಾತ್ರ. ಒಕ್ಕಲಿಗ ಸಮುದಾಯದ ನಂಬರ್ ಒನ್ ನಾಯಕರಾಗಿ ಬೆಳೆದಿರುವ ಅವರನ್ನು ನಿಮ್ಮ ಹಾದಿಯಿಂದ ಪಕ್ಕ ಸರಿಸಿದರೆ ನಿಮಗೆ ಸಮಸ್ಯೆಯೇ ಇಲ್ಲ ಎಂದರು. ಪರಿಣಾಮ ಹೆಗಡೆ ಅವರು ದೇವೇಗೌಡರ ವಿರುದ್ಧ ಹಗೆ ಕಾರತೊಡಗಿದರು. ಮುಂದೆ ಲೋಕಾಯುಕ್ತ ತನಿಖೆಯಿಂದ ಹಿಡಿದು ಹಲವು ಬಗೆಯಲ್ಲಿ ಗೌಡರು ಕಿರುಕುಳ ಅನುಭವಿಸುವ ಸ್ಥಿತಿ ಸೃಷ್ಟಿಯಾಯಿತು. ಇದಕ್ಕೆ ಪ್ರತಿಯಾಗಿ ದೇವೇಗೌಡರೂ ಕಾಳಗಕ್ಕಿಳಿದರು.
ಹೀಗೆ ಹೆಗಡೆ ಹಾಗೂ ದೇವೇಗೌಡರ ನಡುವೆ ಶುರುವಾದ ಸಂಘರ್ಷ ಸುಧೀರ್ಘ ಕಾಲ ನಡೆಯಿತು. ಈ ಮಧ್ಯೆ ಕೆಲವರು ದೇವೇಗೌಡರ ಬಳಿ ಬಂದು: ಹೆಗಡೆ ಅವರಿಗೆ ಇಂತಹ ಹೆಣ್ಣಿನ ಜತೆ ಆತ್ಮೀಯ ಸಂಬಂಧವಿದೆ. ಹೀಗಾಗಿ ಅದರ ವಿವರಗಳನ್ನು ಬಳಸಿ ನೈತಿಕತೆ ನೆಪದಲ್ಲಿ ಹೆಗಡೆ ಅವರನ್ನು ಹಳ್ಳಕ್ಕೆ ತಳ್ಳಿ ಎಂದು ಸಲಹೆ ನೀಡಿದರು.
ಇಂತಹ ಸಲಹೆಗಳು ಹೆಗಡೆ ಅವರ ರಾಜಕೀಯ ಬದುಕಿನ ಮುಸ್ಸಂಜೆಯಲ್ಲೂ ಗೌಡರ ಕಿವಿಗೆ ಅಪ್ಪಳಿಸಿದವು. ಹೆಗಡೆ ಅವರಿಗೆ ಸಾಂಸ್ಕೃತಿಕ ಲೋಕದ ಇಂತಹ ಗ್ಲಾಮರಸ್ ಹೆಣ್ಣು ಮಗಳ ಜತೆ ಆತ್ಮೀಯತೆ ಇದೆ. ಇದೇ ಕಾರಣಕ್ಕಾಗಿ ಅವರು ಆ ಹೆಣ್ಣು ಮಗಳಿಗೆ ಬೆಂಗಳೂರಿನ ಇಂತಹ ಕಡೆ ಐಷಾರಾಮಿ ಫ್ಲ್ಯಾಟ್ ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಇದನ್ನು ಬಹಿರಂಗಪಡಿಸಿದರೆ ಹೆಗಡೆ ಅವರ ರಾಜಕೀಯ ಬದುಕನ್ನು ಮುಗಿಸಬಹುದು ಎಂಬುದು ಇಂತಹ ಸಲಹೆಗಳಲ್ಲೊಂದು.
ಆದರೆ ದೇವೇಗೌಡರು ತಪ್ಪಿಯೂ ಇಂತಹ ಸಲಹೆಗಳನ್ನು ಒಪ್ಪಲಿಲ್ಲ. ಹೆಗಡೆ ಅವರಿಂದ ನನಗೆ ಕಿರುಕುಳವಾಗಿದೆ, ಆಗುತ್ತಿದೆ ಎಂಬುದು ನಿಜ. ಆದರೆ ಅವರು ನೀಡುವ ಕಿರುಕುಳದ ವಿರುದ್ದ ಹೋರಾಡುವ ಶಕ್ತಿ ನನಗಿದೆ .ಯಾವ ಹೆಣ್ಣು ಮಕ್ಕಳೇ ಇರಲಿ, ಅವರು ತಾಯಿ ಸ್ವರೂಪರೇ ಆಗಿರುತ್ತಾರೆ. ಅಂತಹ ತಾಯಿಯರನ್ನು ಮುಂದಿಟ್ಟುಕೊಂಡು ಎದುರಾಳಿಗಳ ವಿರುದ್ಧ ಹೋರಾಡುವುದು ಹೇಡಿಯ ಲಕ್ಷಣವೇ ಹೊರತು, ಧೀರನ ಲಕ್ಷಣವಲ್ಲ ಎಂಬುದು ದೇವೇಗೌಡರ ವಾದವಾಗಿತ್ತು.
ತಮ್ಮ ಮಾತಿಗೆ ಬದ್ದರಾಗಿಯೇ ಅವರು ಹೆಗಡೆ ಅವರ ವಿರುದ್ದ ಹೋರಾಡಿದರು. ಒಂದು ಸಂದರ್ಭದಲ್ಲಿ ತಾವು ರಾಷ್ಟ್ರ ನಾಯಕ ಚಂದ್ರಶೇಖರ್ ಅವರ ಜತೆ ನಡೆಸಿದ ದೂರವಾಣಿ ಸಂಭಾಷಣೆಯ ವಿವರವನ್ನು ಹೆಗಡೆ ಅವರ ಆಪ್ತರು ಲಿಖಿತ ರೂಪದಲ್ಲಿ ಬಹಿರಂಗಪಡಿಸಿದಾಗ ಅದರ ವಿರುದ್ದ ತಿರುಗಿ ಬಿದ್ದರು. ಚಂದ್ರಶೇಖರ್ ಅವರ ಜತೆ ತಾವು ನಡೆಸಿದ ಟೆಲಿಫೋನ್ ಸಂಭಾಷಣೆಯ ವಿವರ ಹೀಗೆ ಹೊರಬಂದಿದೆ ಎಂದರೆ ತಮ್ಮ ಟೆಲಿಫೋನ್ ಕರೆಯನ್ನು ಕದ್ದಾಲಿಸಲಾಗಿದೆ. ಕಾನೂನಿನ ಪ್ರಕಾರ ಸಮಾಜಘಾತಕ ಶಕ್ತಿಗಳ, ದೇಶದ್ರೋಹಿ ಶಕ್ತಿಗಳ ದೂರವಾಣಿಯನ್ನು ಕದ್ದಾಲಿಸಬಹುದು. ಅದೇ ರೀತಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಲಿಖಿತ ಕೋರಿಕೆಯಂತೆ ದೂರವಾಣಿ ಕರೆಯನ್ನು ಕದ್ದಾಲಿಸಬಹುದು.
ಆದರೆ ನಾನು ದೇಶದ್ರೋಹಿಯೂ ಅಲ್ಲ, ಸಮಾಜಘಾತಕ ಶಕ್ತಿಯೂ ಅಲ್ಲ, ಅದೇ ರೀತಿ ನನ್ನ ದೂರವಾಣಿ ಕರೆಯನ್ನು ಕದ್ದಾಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಪತ್ರ ಬರೆದಿಲ್ಲ. ಅಂದಮೇಲೆ ಈ ಕದ್ದಾಲಿಕೆ ಅಪರಾಧ ಎಂದು ಪಟ್ಟು ಹಿಡಿದು ಅವರು ಹೋರಾಟ ಮಾಡಿದರು. ಇದರ ಪರಿಣಾಮವಾಗಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ವಿಪರ್ಯಾಸವೆಂದರೆ ಹೆಣ್ಣು ಮಕ್ಕಳ ಬದುಕನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವುದು ಹೇಯ ಎಂದ ದೇವೇಗೌಡರನ್ನೇ ಒಂದು ಸಂದರ್ಭದಲ್ಲಿ ಖೆಡ್ಡಾಗೆ ತಳ್ಳುವ ಪ್ರಯತ್ನ ನಡೆದಿತ್ತು. ಹೆಣ್ಣು ಮಗಳೊಬ್ಬಳನ್ನು ಬಳಸಿ ತಮ್ಮನ್ನು ಮುಗಿಸಲು ನಡೆದ ಆ ಪ್ರಯತ್ನದ ಸುಳಿವೂ ಗೌಡರಿಗೆ ಇರಲಿಲ್ಲ. ಮನೋ ನಿಯಂತ್ರಣದ ವಿಷಯದಲ್ಲಿ ಟಫ್ ಆಗಿದ್ದುದರಿಂದ ಆ ಜಾಲಕ್ಕೂ ಅವರು ಬೀಳಲಿಲ್ಲ.
ಹೀಗಾಗಿ ಎದುರಾಳಿಗಳು ರೂಪಿಸಿದ ಹನಿಟ್ರ್ಯಾಪ್ ಬಲೆಗೆ (ಆಗ ಈ ಪದ ಇರಲಿಲ್ಲ) ಅವರು ಬೀಳುವ ಸಂದರ್ಭವೇ ಬರಲಿಲ್ಲ. ಆದರೆ ಹೀಗೆ ಹೆಣ್ಣನ್ನು ಬಳಸಿ ತಮ್ಮನ್ನು ನಾಶ ಮಾಡುವ ವಿರೋಧಿಗಳ ಸಂಚಿನ ವಿವರ ಲಭ್ಯವಾದಾಗ ದೇವೇಗೌಡರು ನೊಂದರು. ಅಷ್ಟೇ ಅಲ್ಲ, ಈ ಕುರಿತು ಆಪ್ತರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದರು.
ಇದೇ ರೀತಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಇದೇ ದೇವೇಗೌಡರ ನಾಯಕತ್ವದ ವಿರುದ್ಧ ಒಕ್ಕಲಿಗ ನಾಯಕರೊಬ್ಬರು ಬಂಡೆದ್ದರು. ಅಷ್ಟೇ ಅಲ್ಲ, ಎಲ್ಲ ವಿಷಯಗಳಲ್ಲೂ ದೇವೇಗೌಡ ಮತ್ತವರ ಕುಟುಂಬದವರ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಆ ನಾಯಕರ ವೈಯಕ್ತಿಕ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಮುಂದಿಟ್ಟುಕೊಂಡು ದೇವೇಗೌಡರ ಬಳಿ ಹೋದರು. ಇಂತಹ ಹೆಣ್ಣುಮಗಳ ಹೆಸರು ಸದರಿ ರಾಜಕಾರಣಿಯ ಹೆಸರಿಗೆ ತಳುಕು ಹಾಕಿಕೊಂಡಿದೆ. ಈ ರಾಜಕಾರಣಿ ನನಗೆ ಅನ್ಯಾಯ ಮಾಡಿದ್ದಾರೆ ಅಂತ ಸಾರ್ವಜನಿಕವಾಗಿ ಹೇಳಲು ಆ ಹೆಣ್ಣುಮಗಳು ತಯಾರಿದ್ದಾಳೆ. ಇದೊಂದೇ ಅಂಶ ಸಾಕು, ನಿಮ್ಮ ವಿರುದ್ಧ ತಿರುಗಿ ಬಿದ್ದಿರುವ ಆ ರಾಜಕಾರಣಿಯನ್ನು ಫಿನಿಷ್ ಮಾಡಬಹುದು ಎಂದರು.
ಅವತ್ತು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಯ ಮೊದಲ ಮಹಡಿಯಲ್ಲಿ ಕುಳಿತ ದೇವೇಗೌಡರು ಈ ಸಲಹೆ ನೀಡಿದವರನ್ನು ಆಪಾದಮಸ್ತಕ ನೋಡಿ ಹೇಳಿದರು: ಮಹಾಭಾರತದಲ್ಲಿ ಭೀಷ್ಮನನ್ನು ಹಣಿಯಲು ಶಿಖಂಡಿಯನ್ನು ಮುಂದೆ ನಿಲ್ಲಿಸಲಾಗುತ್ತದೆ. ಹೆಣ್ಣನ್ನು ಮುಂದಿಟ್ಟುಕೊಂಡು ಎದುರಾಳಿಗಳ ವಿರುದ್ಧ ಹೋರಾಡುವುದು ಅದಕ್ಕಿಂತ ಹೇಯವಾದುದು. ದಯವಿಟ್ಟು ನನಗೆ ಇಂತಹ ಸಲಹೆಗಳನ್ನು ಕೊಡಬೇಡಿ ಎಂದರು.
ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಬದುಕಿನಲ್ಲೂ ಇಂತಹ ಸಲಹೆಗಳು ದಂಡಿಯಾಗಿ ಬಂದವು. ಅವರು ಮೊದಲ ಬಾರಿ ಮುಖ್ಯಮಂತ್ರಿಯಾದರಲ್ಲ, ಆ ಸಂದರ್ಭದಲ್ಲಿ ನೂರೈವತ್ತು ಕೋಟಿ ರೂ.ಗಳ ಗಣಿ ಲಂಚ ಹಗರಣದ ಆರೋಪ ಅವರ ಕುತ್ತಿಗೆಗೆ ಸುತ್ತಿಕೊಂಡಿತು.
ಕುಮಾರಸ್ವಾಮಿ ಅವರ ರಾಜಕೀಯ ಬದುಕಿನ ಅತ್ಯಂತ ವಿಷಮ ಕಾಲ ಅದು. ಇಂತಹ ಕಾಲದಲ್ಲಿ ಅವರ ವಿರೋಧಿಗಳೆಲ್ಲ ಒಗ್ಗೂಡಿ ಹೋರಾಟ ನಡೆಸಿದ್ದರೆ ಕುಮಾರಸ್ವಾಮಿ ದಿನದಿಂದ ದಿನಕ್ಕೆ ಜರ್ಜರಿತರಾಗುತ್ತಾ ನಡೆದಿದ್ದರು. ಇಂತಹ ಕಾಲದಲ್ಲೇ ಒಂದು ಬೆಳವಣಿಗೆ ನಡೆಯಿತು.
ಅವತ್ತು ಅವರಿಗೆ ಪರಿಚಿತರಾದವರೊಬ್ಬರು ಇದ್ದಕ್ಕಿದ್ದಂತೆ ಒಂದು ಆಡಿಯೋ ಕ್ಯಾಸೆಟ್ ತಂದುಕೊಟ್ಟು: ಇದನ್ನು ಬಳಸಿಕೊಂಡರೆ ನಿಮ್ಮ ವಿರುದ್ಧದ ಹೋರಾಟಕ್ಕೆ ಹೊಡೆತ ಕೊಡಬಹುದು. ವಿರೋಧಿಗಳ ಬಾಯಿ ಮುಚ್ಚಿಸಬಹುದು ಎಂದರು.
ಸರಿ, ಸ್ವಲ್ಪ ಹೊತ್ತಾದ ನಂತರ ಅದನ್ನು ಕೇಳಿದರೆ ಅವರ ಪ್ರಮುಖ ವಿರೋಧಿಯೊಬ್ಬರು ಹೆಣ್ಣೊಬ್ಬಳ ಜತೆ ಬೆಡ್ ರೂಮಿನಲ್ಲಿ ನಡೆಸಿದ ಆಪ್ತ ಮಾತುಕತೆಯ ವಿವರ ಅದರಲ್ಲಿತ್ತು. ಆದರೆ ಅದನ್ನು ಕೇಳುತ್ತಿದ್ದಂತೆಯೇ ಕುಮಾರಸ್ವಾಮಿಯವರು ಅಲ್ಲಿದ್ದ ಅಧಿಕಾರಿಗಳ ಬಳಿ: ಛೇ, ಛೇ ಹೆಣ್ಣುಮಗಳೊಬ್ಬರ ಜತೆಗಿನ ಏಕಾಂತದ ವಿವರ ಇರುವ ಈ ಕ್ಯಾಸೆಟ್ ಅನ್ನು ನಾಶಪಡಿಸಿ ಬಿಡಿ. ನನ್ನ ವಿರುದ್ದ ಬಂದಿರುವ ಆರೋಪಗಳನ್ನು ಎದುರಿಸಲು ನನಗೆ ನೇರ ಮಾರ್ಗಗಳಿವೆ. ಇದನ್ನು ಬಳಸಿ ಎದುರಾಳಿಯನ್ನು ಹಣಿಯುವ ಕೆಲಸ ಬೇಡ ಎಂದುಬಿಟ್ಟರು.
ಹೇಳುತ್ತಾ ಹೋದರೆ ಇಂತಹ ಅಸಂಖ್ಯಾತ ಘಟನೆಗಳನ್ನು ಹೇಳಬಹುದು. ಅದೇ ರೀತಿ ಹೆಣ್ಣನ್ನು ಮುಂದಿಟ್ಟುಕೊಂಡು ಮಾಡುವ ರಾಜಕೀಯ ಹೇಯವಾದದ್ದು ಎಂದು ಭಾವಿಸಿದ ನೂರಾರು ಮಂದಿ ನಾಯಕರು ಇವತ್ತಿಗೂ ಕಣ್ಣ ಮುಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ್, ರಮೇಶ್ ಕುಮಾರ್, ಜಗದೀಶ್ ಶೆಟ್ಟರ್, ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಮುಂದಿನ ವರ್ಷಗಳಲ್ಲಿ ಇಂತವರ ಸಂತತಿ ಕ್ಷೀಣವಾಗುತ್ತಾ ಹೋಗುವುದು ನಿಶ್ಚಿತ.
ಹೆಣ್ಣನ್ನು ಬಳಸಿ ರಾಜಕೀಯ ಲಾಭ ಪಡೆಯಬೇಕು ಎಂಬ ಮನ:ಸ್ಥಿತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಗಮನಿಸಬೇಕಾದ ಸಂಗತಿ ಎಂದರೆ ಇವತ್ತು ರಾಜಕೀಯ ಕ್ಷೇತ್ರದಲ್ಲಿ ಹಲವು ಪ್ರೈವೇಟ್ ಸಿಡಿ ಡೆವಲಪ್‌ಮೆಂಟ್ ಕಾರ್ಪೊರೇಷನ್‌ಗಳು ಹುಟ್ಟಿಕೊಂಡಿವೆ. ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯಲು ಈ ಪ್ರೈವೇಟ್ ಸಿಡಿ ಡೆವಲಪ್‌ಮೆಂಟ್ ಕಾರ್ಪೊರೇಷನ್‌ಗಳು ಸತತವಾಗಿ ಶ್ರಮಿಸುತ್ತಿವೆ. ಇವತ್ತು ಒಬ್ಬಿಬ್ಬರದಲ್ಲ, ನೂರಕ್ಕೂ ಹೆಚ್ಚು ರಾಜಕೀಯ ನಾಯಕರ ಲೈಂಗಿಕ ಸಂಬಂಧಗಳ ವಿವರಗಳನ್ನು ಒಳಗೊಂಡ ಸಿಡಿಗಳು ಕೆಲವು ನಾಯಕರ ಕೈಲಿವೆ.
ಹಿಂದೆಲ್ಲ ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯಲು ಅವರ ಸಾಧನೆಗಳ ವೈಫಲ್ಯವನ್ನು ಪರಿಗಣಿಸಲಾಗುತ್ತಿತ್ತು. ಭ್ರಷ್ಟಾಚಾರದ ಪ್ರಕರಣಗಳನ್ನು ಎತ್ತಿ ತೋರಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ಈಗ ಭ್ರಷ್ಟಾಚಾರವೆಂಬುದು ದೊಡ್ಡ ವಿಷಯವೇ ಅಲ್ಲ ಎಂಬಂತಾಗಿದೆ. ಹಲವರ ಮೇಲೆ ಭ್ರಷ್ಟಾಚಾರದ ಕಳಂಕ ಕುಳಿತಿದ್ದರೂ ಅದೀಗ ಲೆಕ್ಕಕ್ಕೆ ಬರುತ್ತಿಲ್ಲ. ಬದಲಿಗೆ ಲೈಂಗಿಕ ಹಗರಣಗಳನ್ನು ಎತ್ತಿ ತೋರಿಸಿ ವಿರೋಧಿಗಳನ್ನು ಹಣಿಯುವ ಕೆಲಸವಾಗುತ್ತಿದೆ. ಅಂದ ಹಾಗೆ ಲೈಂಗಿಕ ಹಗರಣಗಳಲ್ಲಿ ಭಾಗಿಯಾದವರದು ತಪ್ಪಲ್ಲ ಎಂದಲ್ಲ, ನಿಶ್ಚಿತವಾಗಿ ಅದು ತಪ್ಪು ಮತ್ತವರು ಸೂಕ್ತ ದಂಡನೆಗೂ ಅರ್ಹರು. ಪ್ರಲೋಭನೆಗೆ ಒಳಗಾಗಿ ನೀಚ ಕೆಲಸಕ್ಕಿಳಿಯುವ ಇವರು ಕ್ಷಮಾರ್ಹರೂ ಅಲ್ಲ.
ಅದಕ್ಕಾಗಿ ಇಂತಹವರು ದಂಡ ತೆರಬೇಕು. ಆದರೆ ಅದೇ ಕಾಲಕ್ಕೆ ಒಬ್ಬ ವ್ಯಕ್ತಿಯಿಂದ ತಪ್ಪು ಮಾಡಿಸಿ, ಅವರನ್ನು ನಾಶ ಮಾಡುವ ಗುಣದವರಿರುತ್ತಾರಲ್ಲ, ಅವರೂ ತಪ್ಪಿತಸ್ಥರೇ. ಏಕೆಂದರೆ ಇಂತಹವರು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಸದಾ ಕಾಲ ಇಂತಹ ತಂತ್ರಗಳನ್ನು ಹೆಣೆಯುವುದರಲ್ಲೇ ಮಗ್ನರಾಗಿರುತ್ತಾರೆ.
ಯಾವಾಗ ಇಂತಹವರು ಮಾಡುವುದೇ ಸರಿ ಎಂದಾಗುತ್ತದೋ? ಆಗ ಇದನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಪರಿಣಾಮ ಮುಂದಿನ ಕೆಲ ವರ್ಷಗಳ ನಂತರ ಜನಪ್ರತಿನಿಧಿಗಳಾಗಲು ಬಯಸುವವರಿಗೆ ರಾಜಕೀಯ ಪಕ್ಷಗಳ ಟಿಕೆಟ್ ಕೊಡಲು ಪ್ರತ್ಯೇಕ ಮಾನದಂಡಗಳನ್ನು ನಿಗದಿ ಮಾಡಬೇಕಾಗಬಹುದು. ಟಿಕೆಟ್ ನೀಡಲು ಇದುವರೆಗೆ ಯಾವ್ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತೋ, ಆ ಮಾನದಂಡಗಳು ಬದಲಾಗುತ್ತಾ: ನಿಮ್ಮ ವಿರೋಧಿಗಳನ್ನು ನೈತಿಕವಾಗಿ ಹಣಿಯಲು ಅಗತ್ಯವಾದ ಸಿಡಿ ಮತ್ತಿತರ ದಾಖಲೆಗಳು ನಿಮ್ಮ ಬಳಿ ಇವೆಯೇ, ಇದ್ದರೆ ನೀವು ಟಿಕೆಟ್ ಪಡೆಯಲು ಅರ್ಹರು ಎಂದು ಕೇಳುವ ಪರಿಸ್ಥಿತಿ ಬರಬಹುದು.
ಇವತ್ತಿನ ಮಟ್ಟಿಗೆ ಇದು ಸಾಧ್ಯವೇ ಎಂಬ ಪ್ರಶ್ನೆ ಕೇಳಿಬರಬಹುದು. ಆದರೆ ಕೆಲ ಕಾಲದ ಹಿಂದೆ ವ್ಯಕ್ತಿಯ ಚಾರಿತ್ರ್ಯ, ಜನಪ್ರಿಯತೆ, ಜನಸೇವೆಯ ಗುಣಗಳನ್ನು ನೋಡಿ ಟಿಕೆಟ್ ನೀಡುವ ಕೆಲಸವಾಗುತ್ತಿತ್ತು. ಆದರೆ ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗುವವರು ತಮ್ಮ ಬಳಿ ಜಾತಿ ಮತ್ತು ಕೋಟಿಗಟ್ಟಲೆ ಹಣ ಇದೆ ಎಂಬುದನ್ನು ಸಾಬೀತು ಮಾಡುವ ಸ್ಥಿತಿ ಇದೆ. ನಾವು ಜನಸೇವೆ ಮಾಡಲು ಬದ್ಧರಾಗಿದ್ದೇವೆ, ಜನಪ್ರಿಯತೆ ಇದೆ ಎಂದು ಹೇಳಿಕೊಂಡು ಟಿಕೆಟ್ ಪಡೆಯಲು ಯಾರಾದರೂ ಬಯಸಿದರೆ ರಾಜಕೀಯ ಪಕ್ಷಗಳು ಅದನ್ನು ಮುಖ್ಯವಾಗಿ ಪರಿಗಣಿಸುತ್ತಿಲ್ಲ. ಬದಲಿಗೆ ಟಿಕೆಟ್ ಆಕಾಂಕ್ಷಿಗಳಿಗಿರುವ ಹಣದ ಶಕ್ತಿಯನ್ನು ಮಾನದಂಡವಾಗಿಟ್ಟುಕೊಳ್ಳುತ್ತವೆ ಹಣದ ವಿಷಯದಲ್ಲಿ ಈ ಪರಿಸ್ಥಿತಿ ಬಂದಿರುವಾಗ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಬಾರದೆ ಇರುತ್ತದೆಯೇ?
ಆರ್.ಟಿ.ವಿಠ್ಠಲಮೂರ್ತಿ
× Chat with us