ಯಾರೋ ಮಾಡಿದ ಕೊಲೆ, ಯಾರೋ ತೆರದ ಬೆಲೆ!; ಈ ಜೀವ ಈ ಜೀವನ ೧೪

ತಪ್ಪು ಮಾಡದಿದ್ದರೂ ೫ ವರ್ಷ ಜೈಲು ಶಿಕ್ಷೆ ಅನುಭವಿಸಿದ ದಂಪತಿ
೨೦೧೫ ರಲ್ಲಿ ಆಗ್ರಾದ ಬಾಹ್ ಎಂಬಲ್ಲಿ ೪ ವರ್ಷ ಪ್ರಾಯದ ಹುಡುಗನೊಬ್ಬನ ಕೊಲೆಯಾಗಿತ್ತು. ಅಕ್ಕಪಕ್ಕದ ಜನ ರಂಪಾಟ ನಡೆಸಿದ್ದರಿಂದ ಪೊಲೀಸರು ಅವರನ್ನು ಸುಮ್ಮನಿರಿಸುವ ಏಕಮೇವ ಉದ್ದೇಶದಿಂದ ೪೦ ವರ್ಷ ಪ್ರಾಯದ ಶಿಕ್ಷಕ ನರೇಂದ್ರ ಸಿಂಗ್ ಮತ್ತು ೩೦ ವರ್ಷ ಪ್ರಾಯದ ನಜ್ಮಾ ದಂಪತಿಯನ್ನು ಬಂಧಿಸಿದ್ದರು. ಆಗ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಚಿದಾನಂದ ಸಿಂಗ್, ಸೂಕ್ತವಾಗಿ ತನಿಖೆಯನ್ನು ಮಾಡುವುದು ಹಾಗಿರಲಿ, ಯಾರ ಹೆಸರಲ್ಲಿ ಎಫ್‌ಐಆರ್ ದಾಖಲಿಸಲ್ಪಟ್ಟಿದೆ ಎಂದು ತಿಳಿಯುವ ಗೋಜಿಗೂ ಹೋಗದೆ ಇವರ ಮೇಲೆ ಕೇಸು ಜಡಿದಿದ್ದನು. ಕೋರ್ಟಿನಲ್ಲಿ ದಂಪತಿಗಳು ತಾವು ಆ ಕೊಲೆಯನ್ನು ಮಾಡಿಲ್ಲವೆಂದು ಎಷ್ಟೇ ವಾದಿಸಿದರೂ ಪ್ರಯೋಜನವಾಗದೆ ಜೈಲು ಸೇರಬೇಕಾಯಿತು. ಜಿಲ್ಲಾ ನ್ಯಾಯಾಧೀಶರು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ನಂತರ, ಇವರು ಹೈಕೋರ್ಟಿಗೆ ಹೋದರು. ಆದರೆ, ವಕೀಲರ ಫೀಸು ಕೊಡುವ ಆರ್ಥಿಕ ಅನುಕೂಲವಿಲ್ಲದ ಕಾರಣ ಕೇಸನ್ನು ಹೆಚ್ಚು ಕಾಲ ಮುಂದುವರಿಸಲಾಗದೆ, ದಂಪತಿ ಐದು ವರ್ಷಗಳ ಕಾಲ ಜೈಲಲ್ಲಿ ಕೊಳೆಯಬೇಕಾಯಿತು.
ಎರಡು ವಾರಗಳ ಹಿಂದೆ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟಿನ ನ್ಯಾಯಾಧೀಶರು ಪೊಲೀಸರ ಬೇಜವಾಬ್ದಾರಿ ವರ್ತನೆಗೆ ಛೀಮಾರಿ ಹಾಕಿ, ಚಿದಾನಂದ ಸಿಂಗ್ ಮೇಲೆ ಕ್ರಮ ಕೈಗೊಳ್ಳುವಂತೆ ಎಸ್‌ಎಸ್‌ಪಿ ಬಬ್ಲೂ ಕುಮಾರ್‌ಗೆ ಆದೇಶ ನೀಡಿದರು. ಮತ್ತು ಪುನಃ ಪ್ರಕರಣದ ವಿಚಾರಣೆ ನಡೆಸಿ, ನಿಜವಾದ ಅಪರಾಧಿಯನ್ನು ಪತ್ತೆ ಹಚ್ಚಲು ಹೇಳಿ, ನರೇಂದ್ರ ಸಿಂಗ್ ಮತ್ತು ನಜ್ಮಾರನ್ನು ಬಿಡುಗಡೆಗೊಳಿಸಿದರು.
ನರೇಂದ್ರ ಸಿಂಗ್ ಮತ್ತು ನಜ್ಮಾರಿಗೆ ಇಬ್ಬರು ಮಕ್ಕಳು-ಗಂಡು ಮಗ ಅಜಿತ್ ಮತ್ತು ಹೆಣ್ಣು ಮಗಳು ಅಂಜು. ಇವರು ಬಂಧಿತರಾದಾಗ ಅಜೀತ್ ಗೆ ೫ ವರ್ಷ ಆಗಿದ್ದರೆ, ಅಂಜು ೩ ವರ್ಷದ ಚಿಕ್ಕ ಮಗುವಾಗಿದ್ದಳು. ಪೊಲೀಸರಿಂದ ಬಂಧಿತರಾದ ದಿನದಿಂದ ಹಿಡಿದು ಕಳೆದ ವಾರ ಬಿಡುಗಡೆಯಾದ ದಿನದವರೆಗೆ ೫ ವರ್ಷಗಳ ಈ ದೀರ್ಘ ಸಮಯದಲ್ಲಿ ಅವರು ಒಮ್ಮೆಯೂ ತಮ್ಮ ಮಕ್ಕಳ ಮುಖವನ್ನು ನೋಡಿರಲಿಲ್ಲ! ತಾವು ಮಾಡದ ತಪ್ಪಿಗೆ ೫ ವರ್ಷಗಳ ಕಾಲ ಜೈಲಿನಲ್ಲಿದ್ದು, ಈಗ ಬಿಡುಗಡೆಯಾಗಿ ಹೊರಬಂದು ನೋಡಿದರೆ, ಮಕ್ಕಳು ಎಲ್ಲಿದ್ದಾರೆ, ಏನಾಗಿದ್ದಾರೆ ಎಂಬ ಯಾವ ವಿಚಾರವೂ ತಿಳಿಯದು! ಅಲ್ಲಿ ಇಲ್ಲಿ ಹುಡುಕಿ, ಅವರಿವರನ್ನು ವಿಚಾರಿಸಿದ ನಂತರ ಏನೂ ಪ್ರಯೋಜನವಾಗದೆ ನಜ್ಮಾ ತಮ್ಮ ಮಕ್ಕಳನ್ನು ಹುಡುಕಲು ಸಹಾಯ ಮಾಡಿ ಎಂದು ಎಸ್‌ಎಸ್‌ಪಿ ಬಬ್ಲೂ ಕುಮಾರ್‌ಗೆ ಪತ್ರ ಬರೆದರು.
ಇದಿಷ್ಟು ವಿಚಾರ ಜನವರಿ ೨೩ ರ ದಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ವರದಿಯಾದ ನಂತರ ನಜ್ಮಾ ದಂಪತಿಗಳಿಗೆ ಸಮಾಧಾನ ತರುವಂತಹ ವಿಚಾರಗಳು ಸಿಕ್ಕವು. ಸಿಂಗ್ ಮತ್ತು ನಜ್ಮಾರನ್ನು ಪೊಲೀಸರು ಬಂಧಿಸಿದ ನಂತರ ಅಜಿತ್ ಮತ್ತು ಅಂಜುರನ್ನು ಅವರ ಅಜ್ಜ ಭಗವಾನ್ ದಾಸ್ ರ ವಶಕ್ಕೆ ಒಪ್ಪಿಸಲಾಯಿತು. ಭಗವಾನ್ ದಾಸ್ ನಾಲ್ಕು ವರ್ಷಗಳ ಕಾಲ ಮಕ್ಕಳನ್ನು ಸಾಕಿದರು. ಆದರೆ, ಆರ್ಥಿಕ ಅನಾನುಕೂಲತೆಯ ಕಾರಣ ಅವರನ್ನು ಸಾಕಲು ಇನ್ನು ತನಗೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ೨೦೧೯ರ ಅಕ್ಟೋಬರ್ ೨೪ ರಂದು ‘ಆಗ್ರಾ ಮಕ್ಕಳ ಸುರಕ್ಷಾ ಗೃಹ’ ಅವರನ್ನು ತನ್ನ ವಶಕ್ಕೆ ಪಡೆಯಿತು. ಅದು ಅಜಿತ್‌ನನ್ನು ಫಿರೋಝಾಬಾದ್‌ನ ಹುಡುಗರ ಬಾಲಾಶ್ರಮಕ್ಕೂ, ಅಂಜುವನ್ನು ಕಾನ್ಪುರದ ಹುಡುಗಿಯರ ಬಾಲಾಶ್ರಮಕ್ಕೂ ಕಳಿಸಿತು.
ನರೇಂದ್ರ ಸಿಂಗ್ ಮತ್ತು ನಜ್ಮಾ ದಂಪತಿಗಳು ಕೊನೆಗೂ ತಮ್ಮ ಮಕ್ಕಳು ಸಿಕ್ಕ ಸಮಾಧಾನದ ನಿಟ್ಟುಸಿರು ಬಿಟ್ಟು, ಅವರನ್ನು ತಮ್ಮ ವಶಕ್ಕೆ ಪಡೆಯಲು ಅಗತ್ಯ ಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೆ, ಪೊಲೀಸರ ಬೇಜವಾಬ್ದಾರಿಯಿಂದಾಗಿ ಮೂರಾಬಟ್ಟೆಯಾದ ತಮ್ಮ ಬದುಕನ್ನು ಪುನಃ ಕಟ್ಟಿಕೊಳ್ಳುವುದು ಹೇಗೆಂದು ತಿಳಿಯದೆ ಸದ್ಯ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ.

× Chat with us