ವಿದ್ಯುತ್‌ ನಿಗಮಗಳ ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ; ಸಚಿವ ಸುನೀಲ್‌

ಮೈಸೂರು: ಸಾರ್ವಜನಿಕ ಸ್ವಾಮ್ಯದ ವಿದ್ಯುತ್‌ ನಿಗಮಗಳನ್ನು ಖಾಸಗೀಕರಣಗೊಳಿಸುವ ಯಾವುದೇ ರೀತಿಯ ಪ್ರಸ್ತಾವನೆ ಖಾಸಗಿ ಕಂಪೆನಿಗಳಿಂದ ಸರ್ಕಾರಕ್ಕೆ ಬಂದಿಲ್ಲ ಎಂದು ರಾಜ್ಯ ಇಂಧನ ಸಚಿವ ಸುನೀಲ್‌ಕುಮಾರ್‌ ತಿಳಿಸಿದರು.

ಮೈಸೂರಿನಲ್ಲಿ ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಸರ್ಕಾರದ ಮಸೂದೆಗಳ ಬಗ್ಗೆ ನನಗಿನ್ನೂ ಮಾಹಿತಿಯಿಲ್ಲ. ಅಲ್ಲದೆ, ವಿದ್ಯುತ್ ದರ ಏರಿಕೆ ಸಹ ಸರ್ಕಾರದ ಕೈಯಲ್ಲಿಲ್ಲ. ಇದು ವಿದ್ಯುತ್ ಸರಬರಾಜು ಮಾಡುವವರ ತೀರ್ಮಾನ. ಈ ಬಗ್ಗೆ ಸರ್ಕಾರ ಏನೂ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಯತ್ನಾಳ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರು ಸಹ ಟೀಕೆ ಮಾಡುವ ವಿಚಾರದಲ್ಲಿ ಎಲ್ಲೆ ಮೀರಬಾರದು. ನಾನು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದೇನೆ. ಈ ವಿಚಾರವನ್ನು ಅವರ ಬಳಿಯೇ (ಯತ್ನಾಳ್) ಕೇಳಬೇಕು ಏಂದು ನುಡಿದರು.

ಆರ್‌.ಧ್ರುವನಾರಾಯಣ ಹೇಳಿಕೆಗೆ ಖಂಡನೆ:
ಆರ್‌ಎಸ್‌ಎಸ್‌ ಅಂದ್ರೆ ತ್ಯಾಗ, ಬಲಿದಾನ, ಸೇವೆ, ಸರಳತೆಯ ಸಂಕೇತ. ಇದನ್ನು ತಿಳಿಯದೆ ಸಂಬಂಧವಿಲ್ಲದ ಹೇಳಿಕೆ ನೀಡುವುದು ಹುಚ್ಚುತನವಾಗುತ್ತದೆ. ಆರ್‌ಎಸ್‌ಎಸ್‌ ಬಗ್ಗೆ ಮಾತಾನಾಡುವ ಮುನ್ನ ಅದರ ಬಗ್ಗೆ ತಿಳಿಯಬೇಕು. ಆರ್‌ಎಸ್‌ಎಸ್‌ ಬಗ್ಗೆ ಆರ್.ಧ್ರುವನಾರಾಯಣ್ ನೀಡಿರುವ ಹೇಳಿಕೆ ಅದು ಅವರ ಬೌದ್ಧಿಕತೆಯ ದಿವಾಳಿತನ ಎಂದು ಭಾವಿಸುವೆ ಎಂದು ತಿರುಗೇಟು ನೀಡಿದರು.