ವೈಚಾರಿಕತೆ, ಲಿಂಗ ಸಮಾನತೆಯ ಸಂಗಮ; ಈ ಜೀವ ಈ ಜೀವನ ೧೬

 

ಆನಂದಮಯ ಆನಂದವಾಡಿ!
ಆನಂದವಾಡಿ ಮಹಾರಾಷ್ಟ್ರದ ಲಾತೂರಿನಿಂದ ೨೫ ಕಿಮಿ ದೂರದಲ್ಲಿರುವ ಒಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ೧೧೨ ಮನೆಗಳಿದ್ದು, ೬೩೫ ನಿವಾಸಿಗಳಿದ್ದಾರೆ. ಹೆಚ್ಚಿನವು ಕೃಷಿಕ ಕುಟುಂಬಗಳು. ಇದೊಂದು ಚಿಕ್ಕ ಹಳ್ಳಿಯಾದರೂ ಇಡೀ ದೇಶಕ್ಕೆ ಮಾದರಿಯಾಗುವಂತಹ ವಿಶೇಷ ಹಳ್ಳಿ.
ಇಲ್ಲಿನ ಎಲ್ಲಾ ೧೧೨ ಮನೆಯ ನಾಮಫಲಕಗಳು ಆಯಾ ಮನೆಯ ಹೆಣ್ಣುಮಕ್ಕಳ ಹೆಸರಲ್ಲಿರುವುದಲ್ಲದೆ, ಮನೆಯ ಆಸ್ತಿಯ ಹಕ್ಕುಪತ್ರಗಳು ಹೆಣ್ಣುಮಕ್ಕಳ ಹೆಸರುಗಳಲ್ಲಿ ದಾಖಲಾಗುತ್ತವೆ. ಈ ಹಳ್ಳಿಯ ಸ್ತ್ರೀಯರು ಮುಟ್ಟಿನ ಬಗ್ಗೆ ಯಾವ ಅಳುಕು, ಮುಜುಗರವಿಲ್ಲದೆ ಸಾರ್ವಜನಿಕವಾಗಿ ಮಾತಾಡುತ್ತಾರೆ.

ಇಲ್ಲಿನ ಅಂಗನವಾಡಿ ಕೇಂದ್ರವೊಂದರಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ಒಂದು ಯಂತ್ರವನ್ನು ನಿಲ್ಲಿಸಲಾಗಿದ್ದು, ಅದರಿಂದ ೫ ರೂ.ಗಳಿಗೆ ಮೂರು ಪ್ಯಾಡ್‌ಗಳನ್ನು ಪಡೆಯಬಹುದು. ಅಷ್ಟೇ ಅಲ್ಲ, ರಕ್ಷಾಬಂಧನ್ ದಿನ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಸ್ಯಾನಿಟರಿ ಪ್ಯಾಡ್‌ಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಬದಲಾವಣೆಗೆ ಕಾರಣರಾದವರು ಇಲ್ಲಿನ ಆಶಾ ಕಾರ್ಯಕರ್ತೆ ಮನೀಷಾ ತಂಗಡಪಳ್ಳೆ ಅನ್ನುವವರು.

ಇಲ್ಲಿನ ಜನ ಅಂಧಶ್ರದ್ಧೆಯ ವಿರುದ್ಧ ಜನಜಾಗೃತಿ ಹರಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಳೆಯರಲ್ಲಿ ಭೂತ, ಪ್ರೇತಗಳ ಬಗ್ಗೆ ಇರುವ ಮೌಢ್ಯಗಳನ್ನು ತೊಡೆದು ಹಾಕಲು ಗ್ರಾಮದ ಸ್ಮಶಾನವನ್ನು ಮಕ್ಕಳ ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ. ಈ ಉದ್ಯಾನವನದಲ್ಲಿ ಆಟವಾಡುವ ಮಕ್ಕಳು ಸಹಜವಾಗೇ ಭೂತಪ್ರೇತ ಮೊದಲಾದವುಗಳ ಬಗ್ಗೆ ಅನಗತ್ಯವಾದ ನಂಬಿಕೆ, ಭಯವಿಲ್ಲದೆ ವೈಜ್ಞಾನಿಕ ಮನೋಭಾವದೊಂದಿಗೆ ಬೆಳೆಯುತ್ತವೆ. ಈ ಗ್ರಾಮದಲ್ಲಿ ಯಾವುದೇ ಶುಭಕಾರ್ಯ ನಡೆದರೂ ಅವುಗಳಲ್ಲಿ ವಿಧವೆಯರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ.

ಆನಂದವಾಡಿಯ ಜನರು ಅಂಗದಾನಕ್ಕೆ ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ೬೩೫ ಜನರಲ್ಲಿ ೪೪೭ ಜನರು ಈಗಾಗಲೇ ಅಂಗದಾನಕ್ಕೆ ಅನುಮೋದನೆ ನೀಡಿದ್ದಾರೆ. ೨೦೧೭ರಲ್ಲಿ ತೀರಿಕೊಂಡ, ಆಶಾ ಕಾರ್ಯಕರ್ತೆ ತಂಗಡಪಳ್ಳೆಯವರ ಅಜ್ಜ ಆನಂದವಾಡಿಯ ಪ್ರಪ್ರಥಮ ಅಂಗದಾನಿ. ಈ ಹಳ್ಳಿಯಲ್ಲಿ ಒಂದು ಹಿಟ್ಟಿನ ಗಿರಣಿಯಿದ್ದು ಗ್ರಾಮದವರು ಬೇಳೆಕಾಳು ತಂದು ಇದರಿಂದ ಉಚಿತವಾಗಿ ಹಿಟ್ಟು ಮಾಡಿಕೊಂಡು ಹೋಗಬಹುದು. ಹೊಲಗಳಲ್ಲಿ ಗಂಡಸರು ಮತ್ತು ಹೆಂಗಸರು ಸಮನಾಗಿ ದುಡಿಯುತ್ತಾರೆ. ಹಿಂದೆಲ್ಲ ಅಪ್ಪಂದಿರಷ್ಟೇ ಶಾಲೆಗಳಿಗೆ ಹೋಗಿ ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ವಿಚಾರಿಸುತ್ತಿದ್ದರು. ಈಗ ಅಮ್ಮಂದಿರೂ ಅಪ್ಪಂದಿರಿಗೆ ಜೊತೆಯಾಗಿ ಶಾಲೆಗೆ ಹೋಗಿ ತಮ್ಮ ಮಕ್ಕಳ ಶಾಲಾಭಿವೃದ್ಧಿ ಬಗ್ಗೆಯ ಮತುವರ್ಜಿ ವಹಿಸುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿರಲು ಪ್ರಮುಖ ಕಾರಣವೆಂದರೆ ಇಲ್ಲಿನ ಪಂಚಾಯಿತಿ ಸದಸ್ಯರೆಲ್ಲ ಸ್ತ್ರೀಯರೇ ಆಗಿರುವುದು. ಮತ್ತು, ಈ ಮಹಿಳಾ ಸದಸ್ಯರು ಯಾವುದೇ ಪುರುಷರ ಡಮ್ಮಿ ಅಭ್ಯರ್ಥಿಗಳಲ್ಲ. ಇವರೆಲ್ಲರೂ ಸ್ವತಂತ್ರವಾಗಿ ಆಯ್ಕೆಯಾದ ಸ್ವತಂತ್ರ ಮನೋಭಾವದ ಗಟ್ಟಿ ಅಭ್ಯರ್ಥಿಗಳು. ಮತ್ತು, ಇವರ ಇನ್ನೂ ಒಂದು ಹೆಗ್ಗಳಿಕೆಯೆಂದರೆ, ಈ ಸದಸ್ಯೆಯರೆಲ್ಲ ಈ ಗ್ರಾಮಕ್ಕೆ ಸೊಸೆಯಂದಿರಾಗಿ ಬಂದವರು!
೯ ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಗ್ರಾಮ ಪಂಚಾಯತಿಗಳಲ್ಲಿ ಶೇ.೫೦ರಷ್ಟು ಸೀಟುಗಳನ್ನು ಸ್ತ್ರೀಯರಿಗೆ ಮೀಸಲಾಗಿಡುವ ನಿಯಮವನ್ನು ಜಾರಿಗೆ ತಂದಿತ್ತು. ಇದರ ಮುಂದುವರಿದ ಹಂತವೋ ಎಂಬಂತೆ ಆನಂದವಾಡಿ ಎಲ್ಲಾ ಮಹಿಳಾ ಅಭ್ಯರ್ಥಿಗಳನ್ನು ಆರಿಸುವ ಮೂಲಕ ತನ್ನ ಗ್ರಾಮ ಪಂಚಾಯಿತಿಯನ್ನು ೧೦೦% ಮಹಿಳಾ ಪಂಚಾಯಿತಿಯನ್ನಾಗಿಸುವಲ್ಲಿ ಆರು ಜನ ಮಹಿಳೆಯರಂತೂ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮರಾಠರು, ಧಂಗಾರರು, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ವರ್ಗಗಳ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಆನಂದವಾಡಿಯಲ್ಲಿ ನಡೆಯುವ ಯಾವುದೇ ಮದುವೆ ಅಥವಾ ಶವಸಂಸ್ಕಾರಗಳಲ್ಲಿ ಜನ ಜಾತಿಭೇದವಿಲ್ಲದೆ ಪಾಲ್ಗೊಂಡು, ಸುಖ, ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಪಂಚಾಯಿತಿ ಕಟ್ಟಡದ ಎದುರು ‘ಈ ಗ್ರಾಮದಲ್ಲಿ ಯಾರೂ ವರದಕ್ಷಿಣೆ ಕೊಡುವುದಿಲ್ಲ ಮತ್ತು ತೆಗೆದುಕೊಳ್ಳುವುದಿಲ್ಲ’ ಎಂಬ ಫಲಕವನ್ನು ನೆಡಲಾಗಿದೆ. ಊರಲ್ಲಿ ಯಾರಿಗಾದರೂ ತಮ್ಮ ಮಕ್ಕಳ ಮದುವೆ ಮಾಡಲು ಹಣಕಾಸಿನ ತೊಂದರೆ ಎದುರಾದರೆ ಊರವರೆಲ್ಲ ವಂತಿಗೆ ಎತ್ತಿ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾರೆ. ಆನಂದವಾಡಿ ಬರೀ ಹೆಸರಿಗಷ್ಟೇ ಅಲ್ಲ, ಇದು ನಿತ್ಯ ವಾಸ್ತವದಲ್ಲೂ ಆನಂದವಾಡಿಯೇ.