ಭಯೋತ್ಪಾದಕ ಶಕ್ತಿಗಳು ಶಾಶ್ವತವಲ್ಲ: ಪ್ರಧಾನಿ ಮೋದಿ

ಹೊಸದಿಲ್ಲಿ: ಉಗ್ರವಾದದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆ ಶಾಶ್ವತವಲ್ಲ. ಮಾನವೀಯತೆಯನ್ನು ದಮನ ಮಾಡಲು ಉಗ್ರರಿಗೆ ಎಂದಿಗೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ಧಾರೆ.

ವಿನಾಶಕಾರಿ ಪಡೆಗಳು ಮತ್ತು ಭಯೋತ್ಪಾದನೆಯಿಂದ ಸಾಮಾಜ್ರ್ಯ ಸೃಷ್ಟಿಸಬಹುದು ಎಂಬ ಸಿದ್ಧಾಂತವನ್ನು ಅನುಸರಿಸುವವರು ಕೆಲಕಾಲ ಪ್ರಾಬಲ್ಯ ಸಾಧಿಸುತ್ತಾರೆ. ಆದರೆ, ಅದು ಶಾಶ್ವತವಾಗಿ ಅಸ್ತಿತ್ವದಲ್ಲಿ ಉಳಿಯುವುದಿಲ್ಲ. ಏಕೆಂದರೆ ಉಗ್ರರಿಗೆ ಮಾನವೀಯತೆಯನ್ನು ದಮನ ಮಾಡಲು ಎಂದಿಗೂ ಸಾಧ್ಯವಾಗದು ಎಂದು ಅವರು ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಗುಜರಾತ್‌ನಲ್ಲಿ ಶುಕ್ರವಾರ ಸೋಮನಾಥ ದೇವಸ್ಥಾನದ ವಿವಿಧ ಅಭಿವೃದ್ದಿ ಯೋಜನೆಗಳನ್ನು ವಿಡಿಯೋ ಕಾನ್ಸರೆನ್ಸಿಂಗ್ ಮೂಲಕ ಉದ್ಘಾಟನೆ ನೆರವೇರಿಸಿ ಪ್ರಧಾನಿ ಮಾತನಾಡಿದರು.

ದುಷ್ಟರಿಂದ ಸೋಮನಾಥ ದೇವಸ್ಥಾನವನ್ನು ಅನೇಕ ಬಾರಿ ನಾಶಗೊಳಿಸಲಾಯಿತು. ದೇವರ ಮೂರ್ತಿಗಳನ್ನು ಹಲವು ಸಲ ಅಪವಿತ್ರಗೊಳಿಸಲಾಯಿತು. ದೇಗುಲದ ಅಸ್ತಿತ್ವವನ್ನೇ ನಿರ್ಮೂಲನೆ ಮಾಡಲು ಯತ್ನಗಳು ನಡೆದವು. ಆದರೆ ಪ್ರತಿ ಬಾರಿ ವಿನಾಶಕಾರಿ ಆಕ್ರಮಣದ ನಂತರ ಈ ದೇವಾಲಯ ಪರಿಪೂರ್ಣ ವೈಭವದೊಂದಿಗೆ ಪುನರ್‌ಸೃಷ್ಟಿಯಾಗುತ್ತಿದೆ ಎಂದು ಅವರು ಉದಾಹರಣೆ ಸಹಿತ ಸಮೀಕರಿಸಿದರು.