ಮೈಸೂರು: ಧಾರ್ಮಿಕ ಕಟ್ಟಡ ತೆರವಿಗೆ ತಾತ್ಕಾಲಿಕ ಬ್ರೇಕ್

ಮೈಸೂರು: ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳು ಬಲವಾಗಿ ವಿರೋಧಿಸಿದ್ದರಿಂದ ತೆರವು ಕಾರ್ಯಾಚರಣೆಗೆ ಸರ್ಕಾರ ಮೌಖಿಕವಾಗಿ ಆದೇಶ ನೀಡಿದ್ದು, ದಸರೆ ನಂತರ ಪುನಃ ಆರಂಭವಾಗುವ ಸಾಧ್ಯತೆಯಿದೆ.

`ಕಟ್ಟಡಗಳ ತೆರವು ಸದ್ಯಕ್ಕೆ ನಿಲ್ಲಿಸಿ ದಸರಾ ಚಟುವಟಿಕೆ ಹಾಗೂ ಕೋವಿಡ್ ನಿಯಂತ್ರಣದ ಕಡೆ ಗಮನಹರಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಸದ್ಯಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಆಂದೋಲನಕ್ಕೆ ಖಚಿತಪಡಿಸಿದರು.

ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ 2010ರಲ್ಲಿ ರಾಜ್ಯಸರ್ಕಾರ ಪಟ್ಟಿ ಮಾಡಿದ್ದ ದೇವಸ್ಥಾನಗಳನ್ನು 2021ರ ಡಿಸೆಂಬರ್ ಒಳಗೆ ತೆರವುಗೊಳಿಸಿ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕಾಗಿತ್ತು. ಹೀಗಾಗಿ, ಮೈಸೂರು ನಗರದ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ 14 ದೇವಸ್ಥಾನಗಳನ್ನು ತೆರವುಗೊಳಿಸಿ ಉಳಿದ ದೇವಸ್ಥಾನಗಳ ತೆರವಿಗೆ ನೋಟಿಸ್ ಜಾರಿಗೊಳಿಸಿತ್ತು.

ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ನೋಟಿಸ್ ಕೂಡ ನೀಡದೆ ಏಕಾಏಕೀ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೇ ರೀತಿ ನಗರದ ನೂರೊಂದು ಗಣಪತಿ ದೇವಸ್ಥಾನ, ಪಂಚಮುಖಿ ಗಣಪತಿ ದೇವಸ್ಥಾನ,ರಾಮಲಿಂಗೇಶ್ವರ ದೇವಸ್ಥಾನದ ಒಂದು ಭಾಗದ ಪ್ರದೇಶ ಸೇರಿದಂತೆ 40-50ವರ್ಷದ ಹಿಂದೆ ನಿರ್ಮಾಣವಾಗಿದ್ದ ದೇವಸ್ಥಾನಗಳನ್ನು ಪಟ್ಟಿ ಮಾಡಿ ನೆಲಸಮಕ್ಕೆ ನೋಟಿಸ್ ನೀಡಿ ದಿನಾಂಕವನ್ನು ನಿಗದಿಪಡಿಸಿತ್ತು. ಈ ವಿಚಾರ ಹೊರ ಬರುತ್ತಿದ್ದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಅವರು ತೆರವಿಗೆ ವಿರೋಧ ವ್ಯಕ್ತಪಡಿಸಿದಲ್ಲದೆ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೋರಾಟ ಶುರು ಮಾಡುತ್ತಿದ್ದಂತೆ ಭಾರೀ ಜನಬೆಂಬಲ ವ್ಯಕ್ತವಾಗಿತ್ತು. ಸ್ಥಳೀಯವಾಗಿರುವ ದೇವಸ್ಥಾನಗಳ ತೆರವಿಗೆ ವಿರೋಧ ಬರುತ್ತಿದ್ದಂತೆ ಎಚ್ಚೆತ್ತ ರಾಜ್ಯಸರ್ಕಾರ ಮೌಖಿಕವಾಗಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸೂಚಿಸಿದೆ.

ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡಳಿತಕ್ಕೆ ಕೈಬಿಡುವಂತೆ ಸೂಚನೆ ನೀಡಿದರೆ, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ಕೊಟ್ಟ ಫಲವಾಗಿ ಬ್ರೇಕ್ ಬಿದ್ದಿದೆ.

ತಡೆಗೆ ಕಾರಣಗಳೇನು?

– ಬಿಜೆಪಿ ಸರ್ಕಾರದಿಂದಲೇ ಹಿಂದೂ ದೇಗುಲಗಳ ತೆರವು ಎನ್ನುವ ಜನಾಕ್ರೋಶ

– ಪ್ರತಿಪಕ್ಷಗಳಿಗೆ ಅಸ್ತ್ರ ಕೊಡುವುದನ್ನು ತಾತ್ಕಾಲಿಕವಾಗಿ ಮುಂದೂಡುವುದು

– ಜಿಪಂ, ತಾಪಂ ಚುನಾವಣೆ ಹೊಸ್ತಿಲಲ್ಲಿ ಆಗುತ್ತಿರುವ ಹೊಡೆತ ತಪ್ಪಿಸುವುದು

– ದಸರೆ ಆರಂಭವಾಗುತ್ತಿರುವಾಗ ಅಡಚಣೆ ಆಗಬಾರದು ಎನ್ನುವ ಆತಂಕ

– ಕೋವಿಡ್ ೩ನೇ ಅಲೆ ಇರುವಾಗ ಇದೂ ಕೂಡ ಅಡ್ಡಿಯಾಗಬಾರದೆಂಬ ಎಚ್ಚರಿಕೆ

ಮುಂದೇನು?

ಈಗಾಗಲೇ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ‌್ಯ ನಡೆಯುತ್ತಿದೆ. ಅದರಲ್ಲೂ ಕಾಲಮಿತಿಯೊಳಗೆ ತೆರವು ಮಾಡುವ ಅಫಿಡವಿಟ್ ಕೂಡ ಜಿಲ್ಲಾಡಳಿತ ಸಲ್ಲಿಸುತ್ತಿದೆ. ಈಗ ಸರ್ಕಾರದ ಮೂಲಕವೇ ನ್ಯಾಯಲಯಕ್ಕೆ ಅಫಿಡವಿಟ್ ಸಲ್ಲಿಸಿ ಮತ್ತೊಮ್ಮೆ ಸಮಯ ಕೇಳಿ ನವೆಂಬರ್ ನಂತರ ತೆರವು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗುತ್ತಿದೆ.

ಬೇರೆ ಜಿಲ್ಲೆಗಳಲ್ಲಿ ಇಲ್ಲದ್ದು ಇಲ್ಲೇಕೆ?

ಮೈಸೂರು ಭಾಗದಲ್ಲಿಯೇ ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿ ಈ ಸಮಸ್ಯೆಯಿಲ್ಲ. ಅಲ್ಲಿ ಇದ್ದ ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಲಾಗಿದೆ. ಆದರೆ ಮೈಸೂರಿನಲ್ಲಿ ಹತ್ತು ವರ್ಷದ ಹಿಂದೆಯೇ ಮಾಡಿದ್ದ ಪಟ್ಟಿ ಆಧರಿಸಿ ಕಾರ್ಯಾಚರಣೆ ನಡೆಸದೇ ಇರುವುದು ಹಾಗೂ ಅನಧಿಕೃತ ಕಟ್ಟಡ ನಿರ್ಮಾಣದ ವೇಳೆ ಆಡಳಿತ ವರ್ಗ ಸುಮ್ಮನೇ ಕುಳಿತು ಈಗ ಧಾರ್ಮಿಕ ಭಾವನೆ ಕೆರಳುವಂತೆ ಮಾಡಿದ್ದು ವಿವಾದಕ್ಕೆ ಕಾರಣವಾಯಿತು.

ಹಿಂದಿನ ಡಿಸಿಗೂ ಬೆದರಿಕೆ !

10 ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರ ಕಾಲದಲ್ಲೂ ಇದೇ ರೀತಿ ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಲಾಯಿತು. ಇಲವಾಲದಲ್ಲಿ ಗಣಪತಿ ದೇಗುಲ ತೆರವು ಮುಂದಾದಾಗ ಭಾವನಾತ್ಮಕವಾಗಿಯೇ ಹೆದರಿಸುವ ಪ್ರಯತ್ನ ಮಾಡಲಾಗಿತ್ತು. ಆದರೂ ಅವರು ತೆರವು ಕಾರ್ಯಾಚರಣೆ ನಡೆಸಿದ್ದರು. ಆನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕೆಲ ಕಟ್ಟಡಗಳ ಮೇಲೆ ಗಮನ ಹರಿಸಿದಾಗ ಒತ್ತಡದಿಂದ ಆಗಿನ ಬಿಜೆಪಿ ಸರ್ಕಾರ ಹರ್ಷಗುಪ್ತರನ್ನು ವರ್ಗ ಮಾಡಿತ್ತು. ಆನಂತರ ಕಟ್ಟಡ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

× Chat with us