ನಿರಂಜನ ಮಠದಲ್ಲಿ ರಾಮಕೃಷ್ಣಶ್ರಾಮದವರಿಂದ ಪೂಜೆ: ಮಠಕ್ಕೆ ಬೀಗ, ಪೊಲೀಸರೊಂದಿಗೆ ಮಾತಿನ ಚಕಮಕಿ

ಮೈಸೂರು: ನಿರಂಜನ ಮಠದ ಆವರಣದಲ್ಲಿರುವ ಶಿವನ ದೇವಾಲಯದಲ್ಲಿ ಅನ್ಯ ಸಮುದಾಯದವರು ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಕಾರಣವನ್ನು ಮುಂದೊಡ್ಡಿ ಮಠದ ಆವರಣದಲ್ಲಿರುವ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಸಮಿತಿ ಸದಸ್ಯರು ಬೀಗ ಹಾಕಿದ್ದು, ಈ ಸಂಬಂಧ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ನಿರಂಜನ ಮಠ ಉಳಿಸಿ ಹೋರಾಟ ಆರಂಭವಾದಾಗಿನಿಂದಲೂ ಸಮಿತಿಯ ಸದಸ್ಯರು ಸ್ವಾಮೀಜಿ ಒಬ್ಬರಿಂದ ಪ್ರತಿನಿತ್ಯ ದೇವಾಲಯದ ಶಿವ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಈ ನಡುವೆ ಅನ್ಯ ಸಮುದಾಯದವರು ಕೂಡ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಇದು ಸಮಿತಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಶಿವನ ದೇವಾಲಯದಲ್ಲಿ ವೀರಶೈವ ಲಿಂಗಾಯಿತ ಧರ್ಮದ ಪ್ರಕಾರವೇ ಪೂಜೆ ನಡೆಯಬೇಕು. ಅನ್ಯ ಸಮುದಾಯದವರು ಧಾರ್ಮಿಕ ಕ್ರಿಯೆಗಳಂತೆ ಪೂಜೆ ಸಲ್ಲಿಸಬಾರದು ಎಂದು ಹೋರಾಟಗಾರರು ಸೋಮವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ ದೇವಾಲಯಕ್ಕೆ ಬೀಗ ಹಾಕಿದ್ದರು.

ಇದನ್ನು ಗಮನಿಸಿದ ದೇವರಾಜ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ದಿವಾಕರ್ ಅವರಿಗೆ ವಿಚಾರ ಮುಟ್ಟಿಸಿದ್ದರು. ಸಂಜೆ ವೇಳೆಗೆ ಸ್ಥಳಕ್ಕೆ ಬಂದ ಇನ್ಸಪೆಕ್ಟರ್ ಬೀಗ ಹಾಕಿರುವುದು ಸರಿಯಲ್ಲ. ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಇದನ್ನೊಪ್ಪದ ಹೋರಾಟ ಸಮಿತಿ ಸದಸ್ಯರು, ನಮ್ಮ ಸಂಪ್ರದಾಯದಂತೆ ಹಲವಾರು ವರ್ಷಗಳಿಂದ ಪೂಜೆ ನಡೆಸಲಾಗುತ್ತಿದೆ. ನಮ್ಮ ಸಮುದಾಯದ ದೇವಾಲಯದಲ್ಲಿ ಅನ್ಯರು ಪೂಜೆ ಸಲ್ಲಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹೀಗಾಗಿ ಬೀಗ ಹಾಕಿದ್ದೇವೆ ಎಂದು ಸಮರ್ಥಿಸಿಕೊಂಡರು.

ಈ ಸಂಬಂಧ ಪೊಲೀಸರು ಹಾಗೂ ಸಮಿತಿ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸೋಮವಾರ ಬೆಳಿಗ್ಗೆ ವೀರಶೈವ ಲಿಂಗಾಯಿತ ಮುಖಂಡರ ಸಭೆ ನಡೆಯುತ್ತಿದ್ದ ವೇಳೆ ಅಪರಿಚಿತ ಯುವಕ ಮೊಬೈಲ್ ಮೂಲಕ ಚಿತ್ರೀಕರಣ ನಡೆಸುತ್ತಿದ್ದ. ಇದನ್ನು ಗಮನಿಸಿ ಸಮಿತಿ ಸದಸ್ಯರು ಆತನನ್ನು ಪ್ರಶ್ನಿಸಿದರು. ಸಭೆಯ ಚಿತ್ರೀಕರಣ ಮಾಡಲು ರಾಮಕೃಷ್ಣ ಮಠದಿಂದ ಕಳುಹಿಸಿದ್ದಾರೆ ಎಂದು ಉತ್ತರಿಸಿದನು. ಅಲ್ಲಿದ್ದವರು ಆತನನ್ನು ಮಠದ ಆವರಣದಿಂದ ಹೊರಗೆ ಕಳುಹಿಸಿದ ಘಟನೆಯೂ ನಡೆಯಿತು.