ತಾಲಿಬಾನ್ ಸರ್ಕಾರದ ಅಧಿಕಾರ ಸ್ವೀಕಾರ ಮುಂದೂಡಿಕೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಹವಣಿಸುತ್ತಿರುವ ತಾಲಿಬಾನ್ ಸೆ.11ರ ಶನಿವಾರ ನಡೆಸಬೇಕಿದ್ದ ಅಧಿಕಾರ ಸ್ವೀಕಾರ ಸಮಾರಂಭವನ್ನು ಮುಂದೂಡಿದೆ. ಇದೇ ವೇಳೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಹೆಸರು ಬದಲಿಸಿದ ತಾಲಿಬಾನ್ ಆಡಳಿತ ಅದನ್ನು ಕಾಬೂಲ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಎಂದು ಘೋಷಿಸಿದೆ.

ಸೆ.೧೧ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ಘೋಷಿಸಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ದಿನದಂದು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದು ತಾಲಿಬಾನ್ ಉದ್ದೇಶವಾಗಿತ್ತು.

ಸೆ.೧೧ರಂದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉದ್ಘಾಟನೆ ಮಾಡುವುದು ಅಮಾನವೀಯ ಎಂದು ತಾಲಿಬಾನ್ ಪರ ಸಹಾನುಭೂತಿ ಹೊಂದಿರುವ ಮೈತ್ರಿಕೂಟಗಳು ತಿಳಿಸಿದ ಕಾರಣ ತನ್ನ ಪೂರ್ವ ನಿರ್ಧಾರದಿಂದ ತಾಲಿಬಾನ್‌ಗಳು ಹಿಂದೆ ಸರಿದಿದ್ದಾರೆ.

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ರಷ್ಯಾ, ಚೀನಾ, ಟರ್ಕಿ, ಇರಾನ್, ಪಾಕಿಸ್ತಾನ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಆಹ್ವಾನ ಕಳುಹಿಸಿತ್ತು.

ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಕ್ಕೆ ಮುನ್ನವೇ ಆಫ್ಘನ್ ರಾಜಧಾನಿ ಕಾಬೂಲ್ ವಿಮಾನನಿಲ್ದಾಣದ ಹೆಸರನ್ನು ಬದಲಾವಣೆ ಮಾಡಲಾಗಿದೆ. ಹಮೀದ್ ಕರ್ಜಾಯ್ ಏರ್‌ಪೋರ್ಟ್ ಹೆಸರು ಬದಲಿಸಿದ ತಾಲಿಬಾನ್ ಸರ್ಕಾರ ಅದನ್ನು ಕಾಬೂಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ಪರಿವರ್ತಿಸಿದೆ.

× Chat with us