ವಿದ್ಯಾರ್ಹತೆಗೆ ಸೂಕ್ತ ಉದ್ಯೋಗ ಸಿಗದೆ ಯುವತಿ ಆತ್ಮಹತ್ಯೆ

ಉಡುಪಿ : ಆಕೆ 23 ವರ್ಷದ ಎಂಬಿಎ ಪದವೀಧರೆ, ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆಯೇ ಎಂಬಿಎ ಪದವಿ ಮುಗಿಸಿದ್ದಳು. ತನ್ನ ವಿದ್ಯಾರ್ಹತೆಗೆ ಸೂಕ್ತ ಕೆಲಸ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದಲ್ಲಿ ನಡೆದಿದೆ.

ದ.ಕ ಜಿಲ್ಲೆ ಉಪ್ಪಿನಂಗಡಿ ಮೂಲದ ಸಹನಾ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು ಈಕೆ ಏಪ್ರಿಲ್ 30 ರಂದು ಶಿರ್ವ ಸಮೀಪದ ಕಟ್ಟಿಂಗೇರಿ ಗ್ರಾಮದ ತನ್ನ ಸಹೋದರಿ ಸೌಮ್ಯ ಅವರ ಮನೆಗೆ ಬಂದಿದ್ದು ಅಲ್ಲೇ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಮೇ 1ರ ಬೆಳಗ್ಗೆ ಸಹನಾ ವಿಪರೀತ ವಾಂತಿ ಮಾಡಿಕೊಂಡಿದ್ದರು. ಹೀಗಾಗಿ ಆಕೆಯನ್ನು ಉಡುಪಿಯಲ್ಲಿರುವ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕ ಹಂತಕ್ಕೆ ತಲುಪಿದ್ದರಿಂದ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಹನಾ ಅವರನ್ನು ಸ್ಥಳಾಂತರಿಸಲಾಯಿತು. ಮೇ 9 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ  ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕಾಂಗ್ರೆಸ್ ವತಿಯಿಂದ ಇಂದು ಸಂಜೆ ಉಡುಪಿಯಲ್ಲಿ ಪ್ರತಿಭಟನೆ ನಡೆಸಲಿದೆ. ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ಸೃಷ್ಟಿಸದಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ.