ಬೆಂಗಳೂರು- ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿ ಹೊಸದಾಗಿ ‘ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ’ಯನ್ನು ರಚಿಸಿ ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.
ಕಳೆದ ಮಾಚ್೯ ತಿಂಗಳಿನಲ್ಲಿ ಮಂಡಿಸಿದ್ದ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲು ‘ಸ್ವಾಮಿ ವಿವೇಕಾನಂದ ಯುವಕರ ಸ್ವ-ಸಹಾಯ ಗುಂಪು’ ರಚಿಸಿ ಲಾಗುವುದು’ ಎಂದು ಘೋಷಿಸಲಾಗಿತ್ತು. ಅದರಂತೆ ಸರ್ಕಾರ ರಚನೆ ಮಾಡಿದೆ.
ಯೋಜನೆಯ ಅನುಷ್ಠಾನಕ್ಕಾಗಿ ರೂ. 500.00 ಕೋಟಿ ಪೈಕಿ, ಮೊದಲ ಹಂತವಾಗಿ ರೂ.10.00 ಕೋಟಿ (ರೂಪಾಯಿ ಹತ್ತು ಕೋಟಿ ಮಾತ್ರ) ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 18 ರಿಂದ 29 ವರ್ಷ ವಯಸ್ಸಿನ 10 ರಿಂದ 20 ಸದಸ್ಯರನ್ನು ಹೊಂದಿರುವ ಒಂದು ಸ್ವಸಹಾಯ ಗುಂಪನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸಲಾಗುವುದು.
ಮೊದಲ ಹಂತದಲ್ಲಿ, ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ವತಿಯಿಂದ ಒಗ್ಗೂಡಿಸಿ, ಉದ್ಯಮಶೀಲತ ತರಬೇತಿ ನೀಡಲಾಗುತ್ತದೆ.
ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ’ಯಡಿ .500 ಕೋಟೆ ಅನುದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಹಯೋಗದೊಂದಿಗೆ ರಚಿಸಲಾಗುವ ಗುಂಪು ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ನೀಡಲಾಗುವುದು.ಬ್ಯಾಂಕ್ ಲಿಂಕ್ ಮೂಲಕ ಗುಂಪು ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.
ಸರ್ಕಾರದಿಂದ ಪ್ರತಿ ಗುಂಪಿಗೆ ರೂ. 1.5ಲಕ್ಷವರೆಗೆ ಸಹಾಯಧನವನ್ನು ಒದಗಿಸಿ, ಅರ್ಹತೆಗೆ ಅನುಗುಣವಾಗಿ ರೂ. 10.00 ಲಕ್ಷದವರೆಗೆ ಕಿರು ಉದ್ಯಮ ಸ್ಥಾಪನೆಗಾಗಿಯೋಜನಾ ವರದಿ ಬ್ಯಾಂಕ್ಗೆ ಸಲ್ಲಿಸಿದ ನಂತರ ಒಂದು ತಿಂಗಳೊಳಗಾಗಿ ಬ್ಯಾಂಕ್ ಸಾಲ ವಿತರಿಸಲಾಗುವುದು.ಈ ಸಾಲದ ಮರುಪಾವತಿ ಅವಧಿಯನ್ನು 5 ರಿಂದ 7 ವರ್ಷದವರೆಗೆ ಸೀಮಿತಗೊಳಿಸಲಾಗುವುದು. ಪ್ರಾರಂಭದಲ್ಲಿ, ಆರು ತಿಂಗಳವರೆಗೆ ಸಾಲ ಮರುಪಾವತಿಗೆ ‘ರಜಾ ಅವಧಿ’ ಯಾಗಿರುತ್ತದೆ.
ಆದ್ದರಿಂದ ಪ್ರತಿ ತಿಂಗಳು ಕನಿಷ್ಠ ಸಾಲ ಕಂತು ಮರುಪಾವತಿ ಮೊತ್ತವನ್ನು ಗಳಿಸುವಂತಹ ಆರ್ಥಿಕ ಚಟುವಟಿಕೆ ಯೋಜನೆಗಳನ್ನು ಆಯ್ಕೆ ಮಾಡತಕ್ಕದ್ದು, ಈ ಯೋಜನಗಳು ‘Credit Guarantee fund for Micro Units’ (CGFMU) ವ್ಯಾಪ್ತಿಗೆ ಬರುವಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ವಾಣಿಜ್ಯ ಬ್ಯಾಂಕುಗಳು / ಖಾಸಗಿ / ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲಕ ಸ್ವ-ಸಹಾಯ ಸಂಘಗಳು ಸಾಲಸೌಲಭ್ಯವನ್ನು ಪಡೆಯಲು ಅನುಮತಿ
ನೀಡಲಾಗಿದೆ, ಅದರಂತೆ, ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ “Banking Ease Reforms 4.0 ‘ಮಾರ್ಗಸೂಚಿಯಂತೆ, ಒಂದು ‘Anchor Bank’ನ್ನು ಇಲಾಖೆ ವತಿಯಿಂದ ಆಯ್ಕೆ ಮಾಡಿ, ಒಂದು ‘ಡಿಜಿಟಲ್ ವೇದಿಕೆ’ಯನ್ನು ರಚಿಸಿ, ಪ್ರಾರಂಭದ ಹಂತದಿಂದ ಸಾಲ ಮರುಪಾವತಿ ಅವಧಿಯವರೆಗೆ ಪ್ರತಿ ಗುಂಪಿನ ಪ್ರಗತಿ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆಯನ್ನು ಮಾಡಲಾಗುವುದು,Anchor ಬ್ಯಾಂಕ್ ಮೂಲಕ ಸ್ಮಾರ್ಟ್ ಸಾಲ ವಿತರಣೆ, ವಿಶ್ಲೇಷಣೆ, cloud based ತಂತ್ರಜ್ಞಾನ ಬಳಸಿ 24×7 ಬ್ಯಾಂಕಿಂಗ್ ಸೌಲಭ್ಯ ಒದಗಿಸಲಾಗುವುದು.
ಈ ಯೋಜನೆಯಡಿಯಲ್ಲಿ ರಿಜರ್ವ್ ಬ್ಯಾಂಕು ಆಫ್ ಇಂಡಿಯಾದ ಮಾರ್ಗಸೂಚಿಯಂತೆ ಕನಿಷ್ಠ 06 ತಿಂಗಳವರೆಗೆ ಸ್ವಸಹಾಯ ಗುಂಪುಗಳ ಸ್ಥಾಪನೆ, ಉಳಿತಾಯ ಮತ್ತು ಆಂತರಿಕ ಸಾಲ ನೀಡಿದ ನಂತರ, ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಯೋಜನೆಯನ್ನು ತಯಾರಿಸಿ, ಸುತ್ತು ನಿಧಿಯನ್ನು ಯೋಜನಾ ಉದ್ದೇಶಕ್ಕಾಗಿ ಉಪಯೋಗಿಸುವ ಬಗ್ಗೆ ಪರಾಮರ್ಶಿಸಿ, ಸ್ವಸಹಾಯ ಗುಂಪುಗಳ ಚಟುವಟಿಕೆಗಳ ಬಗ್ಗೆ ಪ್ರತಿ ತಿಂಗಳು ಬ್ಯಾಂಕಿಗೆ ವರದಿ ಸಲ್ಲಿಸಬೇಕು .
ಸೌಲಭ್ಯ ಪಡೆಯಲು ಸ್ವಸಹಾಯ ಗುಂಪುಗಳ ‘ನೋಂದಣಿ’ಗಾಗಿ ನಿಗದಿಪಡಿಸಿರುವ ನಮೂನೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮೇಲುರುಜು ಮಾಡಿ ಬ್ಯಾಂಕಿಗೆ ಸಲ್ಲಿಸತಕ್ಕದ್ದು. ಪುತಿ ಸ್ವಸಹಾಯ ಗುಂಪುಗಳು ಒಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಮತ್ತು ಇನ್ನೊಬ್ಬರನ್ನುಕಾರ್ಯದರ್ಶಿಯಾಗಿ ನೇಮಿಸಬೇಕು.
ಸ್ವಸಹಾಯ ಗುಂಪುಗಳು ಪಂಚ ಸೂತ್ರ ಪಾಲಿಸತಕ್ಕದ್ದು, ಪ್ರತಿ ಸ್ವಸಹಾಯ ಗುಂಪುಗಳ ರಚನೆ ಆಗಿ ಬ್ಯಾಂಕ್ ಖಾತೆ ತೆರೆದ ನಂತರ ರೂ. 10,000 ಸುತ್ತು ನಿಧಿ ಸರ್ಕಾರದಿಂದ ನೀಡಲಾಗುವುದು, ಈ ಸುತ್ತು ನಿಧಿಯನ್ನು ಯೋಜನೆ ತಯಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತು ಬಳಸತಕ್ಕದ್ದು, ಸ್ವಸಹಾಯ ಗುಂಪುಗಳ ಉಳಿತಾಯವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಕಡ್ಡಾಯವಾಗಿ ಆಂತರಿಕ ಸಾಲ ವಿತರಣೆ ಮಾಡಬೇಕು.
ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಅಡಿ ಪತಿ ಸ್ವಾಮಿ ವಿವೇಕಾನಂದ ಯುವಕರ ಸ್ಮ-ಸಹಾಯ ಗುಂಪುಗಳಿಗೆ ಸಹಾಯಧನ ಸೇರಿದಂತೆ ಬ್ಯಾಂಕ್ ಸೌಲಭ್ಯ ನೀಡುವ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ನಡುವೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.