ಮೈಸೂರು: ಮಂಗಳವಾರ ಮುಂಜಾನೆಯ ಚುಮುಚುಮು ಚಳಿಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಹಾಗೂ ನಗರಪಾಲಿಕೆ ಸದಸ್ಯರು ಯೋಗ ಶಿಬಿರದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಅವರಿಗೆ ವಿವಿಧ ಯೋಗ ಸಂಸ್ಥೆಗಳು ಸಾಥ್ ನೀಡಿದವು.
ನಾಡಹಬ್ಬ ದಸರಾ ಎಂದರೆ ಹಲವಾರು ವಿಶಿಷ್ಠತೆಗಳನ್ನು ಒಳಗೊಂಡಿದೆ. ಅದರಲ್ಲಿ ಯೋಗ ಕಾರ್ಯಕ್ರಮ ಕೂಡ ಒಂದು. ಪ್ರತೀ ಬಾರಿಯೂ ಕೂಡ ಯೋಗ ದಸರ ಉಪ ಸಮಿತಿ ವತಿಯಿಂದ ನಗರದ ಎಲ್ಲ ಸಂಘ, ಸಂಸ್ಥೆಗಳ ಸದಸ್ಯರಿಗೆ ಯೋಗವನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತದೆ.
ಅದರಂತೆ ಈಬಾರಿ ಕೂಡ ವಿವಿಧ ಸಂಘಟನೆಗಳು ಹಾಗೂ ಸಂಸ್ಥೆಗಳ ಸದಸ್ಯರಿಗೆ ಯೋಗ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದರಂತೆ ಈಬಾರಿ ಎಸ್.ಟಿ.ರವಿಕುಮಾರ್ ನೇತೃತ್ವದ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಉಪ ಮೇಯರ್ ರೂಪ ಅವರ ನೇತೃತ್ವದಲ್ಲಿ ನಗರಪಾಲಿಕೆ ಸದಸ್ಯರಿಗೆ ಯೋಗವನ್ನು ಪರಿಚಯಿಸಲಾಯಿತು.
ಇಂತಹ ಒಂದು ವಿಶಿಷ್ಠವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ನಗರದ ಸರಸ್ವತಿಪುರಂನಲ್ಲಿರುವ ಜವರೇಗೌಡ ಉದ್ಯಾಣವನದಲ್ಲಿ ಯೋಗ ದಸರಾ ಉಪಸಮಿತಿ ಹಮ್ಮಿಕೊಂಡಿದ್ದ ಯೋಗ ಶಿಬಿರ ಕಾರ್ಯಕ್ರಮವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಅನೇಕ ಸಮಸ್ಯಗಳಿಗೆ ಯೋಗ ಉತ್ತಮ ಪರಿಹಾರ. ಜನರು ತಮ್ಮ ಒತ್ತಡದ ಜೀವನದಲ್ಲಿ ನಿಯಮಿತವಾಗಿ ಯೋಗವನ್ನು ಮಾಡುವ ಮೂಲಕ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದರು.
ಮೈಸೂರಿಗೂ ಯೋಗಕ್ಕೂ ನಂಟಿದೆ. ನನ್ನ ಕ್ಷೇತ್ರವ್ಯಾಪ್ತಿಯಲಿರುವ ಗೋಕುಲಂ ಬಡಾವಣೆ ಯೋಗ ಗುರುಗಳ ತವರೆನಿಸಿದೆ. ಅಲ್ಲಿಗೆ ಪ್ರತೀ ವರ್ಷ ದೇಶ, ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸಿ ಯೋಗವನ್ನು ಕಲಿಯುತ್ತಿದ್ದಾರೆ. ಇದು ಮೈಸೂರಿಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ನಮ್ಮ ನೆಚ್ಚಿನ ಪ್ರಧಾನಿ ಮೋದಿ ಅವರು ವಿಶ್ವಕ್ಕೇ ಯೋಗವನ್ನು ಪರಿಚಯಿಸಿದರು. ೨೦೧೫ರಲ್ಲಿ ವಿಶ್ವದ ೧೬೭ ದೇಶಗಳು ಯೋಗವನ್ನು ಆಚರಿಸಿದವು. ಯೋಗ ದಿನಾಚರಣೆಗೆ ಪ್ರಮುಖ ಕಾರಣಕರ್ತರು ನಮ್ಮ ನೆಚ್ಚಿನ ಪ್ರಧಾನಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ಒಂದೆಡೆ ಸೇರಿಸಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಯೋಗ ದಸರಾ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಉಪ ಮೇಯರ್ ರೂಪ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಪ್ರಮೀಳಾ ಭರತ್, ಡಾ.ಲಕ್ಷ್ಮೀನಾರಾಯಣ ಶೆಣೈ, ಶ್ರೀಹರಿ, ಡಾ.ಪುಷ್ಪ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಡಾ.ಕುಸುಮ, ಗಜಾನನ ಹೆಗಡೆ, ಡಾ.ಮಹೇಶ್, ದೇವರಾಜ್ ಮುಂತಾದವರು ಹಾಜರಿದ್ದರು.
ದಸರಾ ವೇಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತೇನೆ. ಯೋಗದಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಯುವ ಪೀಳಿಗೆ ಯೋಗದತ್ತ ಆಸಕ್ತಿ ಹೊಂದುವಂತೆ ಕಾರ್ಯಕ್ರಮ ರೂಪಿಸಬೇಕು.
-ಮಹೇಶ್, ಎಸ್ಎಸ್ವಿಪಿ ಯೋಗ ಸಂಸ್ಥೆ ಸದಸ್ಯರು.