ಬೆಂಗಳೂರು : ಬಿಜೆಪಿಯವರು ಕಾವೇರಿ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರಾಜ್ಯದ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಅವರು ಸಕಾರಾತ್ಮಕವಾಗಿ ಏನು ಮಾಡಿದ್ದಾರೆ ಎಂದು ಜನರಿಗೆ ಹೇಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಹೋರಾಟ ನಡೆಸುತ್ತಿದೆ. ಜೆಡಿಎಸ್ ಜೊತೆ ಕೂಡ ಮೈತ್ರಿ ಮಾಡಿಕೊಳ್ಳುತ್ತಿದೆ. ಇದಕ್ಕೆ ನಾವು ಏನು ಹೇಳಲೂ ಸಾಧ್ಯವಿಲ್ಲ ಎಂದರು.
ಕಾವೇರಿ ನದಿ ವಿವಾದ ಮಳೆ ಕೊರತೆಯಿಂದಾಗಿ ತೀವ್ರವಾಗಿದೆ. ನ್ಯಾಯಾಲಯದ ಆದೇಶವಿದೆ. ಆದರೂ ನಾವು ನೀರು ಬಿಡುತ್ತೇವೆ ಎಂದು ಹೇಳುತ್ತಿಲ್ಲ. ನಾಡಿನ ರೈತರ ಹಿತಾಸಕ್ತಿಗಾಗಿ ನಮ್ಮ ನಿಲುವಿಗಾಗಿ ಬದ್ಧರಾಗಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಾನೂನು ಸಚಿವರು ದೆಹಲಿಗೆ ಹೋಗಿ ಮೂರು ದಿನ ಕಾದು ಕುಳಿತಿದ್ದರು. ಪ್ರಧಾನಿಯವರು ರಾಜ್ಯದ ನಿಯೋಗದ ಭೇಟಿಗೆ ಸಮಯ ನೀಡಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅವರು ಯಾವುದೇ ನೆರವು ನೀಡಿಲ್ಲ.
25 ಮಂದಿ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಪ್ರಧಾನಿಯವರ ಭೇಟಿಗೆ ಸಮಯ ಕೊಡಿಸಲು ಇವರಿಗೆ ಸಾಧ್ಯವಾಗಿಲ್ಲ. ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ. ಜನರಿಗೆ ಇವರ ಉದ್ದೇಶಗಳು ಅರ್ಥವಾಗುತ್ತವೆ ಎಂದು ತಿರುಗೇಟು ನೀಡಿದರು.
ಜೆಡಿಎಸ್, ಬಿಜೆಪಿ ಕಾವೇರಿ ವಿಷಯದಲ್ಲಿ ಪ್ರತಿಭಟನೆ ಮಾಡುತ್ತಿರುವುದು ಕೇವಲ ರಾಜಕೀಯ ಕಾರಣಕ್ಕೆ. ಬಿಜೆಪಿಯವರಂತೂ ರಾಷ್ಟ್ರೀಯ ಪಕ್ಷವಾಗಿದ್ದುಕೊಂಡು ಪ್ರಾದೇಶಿಕ ಪಕ್ಷ ಜೆಡಿಎಸ್ ನ ಬಿ ಟೀಂ ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ದೆಹಲಿಯಲ್ಲಿ ಕುಮಾರಸ್ವಾಮಿಯವರು ಬಿಜೆಪಿ ನಾಯಕರನ್ನು ಭೇಟಿಯಾಗಿ ಮೈತ್ರಿಯ ಮಾತುಕತೆ ನಡೆಸಿದ್ದಾರೆ. ಹೊಸ ಸಂಸತ್ ಭವನದಲ್ಲಿ ನಡೆದ ಕಲಾಪದಲ್ಲಿ ಬಿಜೆಪಿಯ ಸಂಸದರೊಬ್ಬರು ಬಿಎಸ್ ಪಿ ಪಕ್ಷಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಜೆಡಿಎಸ್ನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲಾ ನಾಯಕರೂ ಒಪ್ಪಿಕೊಳ್ಳುತ್ತಾರೆಯೇ, ಬಿಜೆಪಿ ಸಂಸದರ ಹೇಳಿಕೆಗೆ ಜೆಡಿಎಸ್ ನಾಯಕರ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದರು.