ಬೆಂಗಳೂರು: ತೀವ್ರ ಕಗ್ಗಾಂಟಾಗಿ ಪರಿಣಮಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಸಂಬಂಧ ಪಕ್ಷವು ಯಾರನ್ನೇ ಕಣಕ್ಕೀಳಿಸಿದರೂ ಎಲ್ಲಾ ಭಿನ್ನಾಭಿಪ್ರಾಯ ಮರೆತು ಗೆಲುವಿಗೆ ಶ್ರಮಿಸಬೇಕು ಎಂದು ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಮನವಿ ಮಾಡಿದ್ದಾರೆ.
ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ಕಗ್ಗಂಟಾಗಿರುವ ಕಾರಣ, ಶನಿವಾರ ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಹಾಸನದ ಮುಖಂಡರ ಸಭೆಯನ್ನು ದೇವೇಗೌಡ ನಡೆಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಕೆಲವು ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ಕೆಲವು ಮುಖಂಡರು ಭವಾನಿ ರೇವಣ್ಣಗೆ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದರು. ಭವಾನಿ ರೇವಣ್ಣಗೆ ಕೊಡದೇ ಹೋದರೂ ರೇವಣ್ಣರನ್ನೆ ಹಾಸನದಿಂದ ನಿಲ್ಲಿಸಿ ಎಂದು ಮುಖಂಡರು ಒತ್ತಾಯ ಮಾಡಿದರು.
ಹಾಸನ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್ ನೀಡುತ್ತೇವೆ. ಹೆಚ್.ಡಿ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ ಚುನಾವಣೆಗೆ ನಿಲ್ಲುವುದಿಲ್ಲ. ನಮಗೆ ಹಾಸನ ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ. ಹಾಸನ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇನೆ. ಎಲ್ಲರೂ ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಹಾಸನ ರಾಜಕಾರಣ ನನಗೆ 40 ವರ್ಷದಿಂದ ಗೊತ್ತಿದೆ. ಗೆಲ್ಲುವ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ. ದಯವಿಟ್ಟು ಒತ್ತಡ ತರಬೇಡಿ ಎಂದ ಸೂಚನೆ ಕೊಟ್ಟಿದ್ದಾರೆ.