ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ. ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದೇವೆ. ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಚುನಾವಣೆಯಲ್ಲಿ ಜನಾರ್ಶೀವಾದ ದೊರೆತು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದರು.
ರಾಜ್ಯಾದ್ಯಂತ ಪ್ರವಾಸ ನಡೆಸಿದ ಸಂದರ್ಭದಲ್ಲಿ ಉತ್ತಮ ಜನ ಬೆಂಬಲ ಸಿಕ್ಕಿದೆ. ಹಿಂದೆ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೆವು. ಈಗ ಸುಮಲತಾ ಅವರು ಕೂಡ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಜನ ಬೆಂಬಲ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ ಕೂಡ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ವೇಳೆ ನಾನು 25 ಸ್ಥಾನಗಳನ್ನು ಗೆಲ್ಲುತ್ತೇವ ಎಂದು ಹೇಳಿದ್ದೆ. ಅದು ಸುಳ್ಳಾಗಲಿಲ್ಲ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವರ ಆಶೀರ್ವಾದ ನಮ್ಮ ಮೇಲಿದ್ದು, ಕನಿಷ್ಟ 130ರಿಂದ 140 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ನಮ್ಮ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿದ್ದು ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕರಿಲ್ಲ. ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸಮನಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸಿಎಂ ಹುದ್ದೆಗಾಗಿ ಹಗಲುಗನಸು ಕಾಣುತ್ತಿದೆ. ಅದು ಕೇವಲ ತಿರುಕನ ಕನಸಾಗಲಿದೆ. ಅದು 60-70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಜನಬೆಂಬಲ ಸಿಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಬಿಜೆಪಿಯ ಜನಬೆಂಬಲ ನೋಡಿ ಕಾಂಗ್ರೆಸ್ನವರು ದಿಗ್ಭ್ರಾಂತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇನ್ನೂ 3-4 ಬಾರಿ ರಾಜ್ಯಕ್ಕೆ ಬರಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು. ನಾನು ಕೂಡ ಕೆಲವೆ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೇವೆ ಎಂಬು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಇದರ ಬಗ್ಗೆ ಕನಸು ಕಾಣಬೇಡಿ. ತಮ್ಮ ಸ್ಥಾನ ವಿರೋಧ ಪಕ್ಷ, ಎಲ್ಲಿ ಕೂರಬೇಕು ಎಂಬುದನ್ನು ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಥವಾ ವಿಜಯೇಂದ್ರ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ, ಅವರು ನಿಂತಿರೋ ನೆಲ ಕುಸಿಯುತ್ತಿದೆ. ಅವರ ಗೆಲುವು ಸುಲಭವಲ್ಲ. ನಿರಾಯಾಸವಾಗಿ ಗೆಲ್ಲಲು ಸಾಧ್ಯವಿಲ್ಲ. ಪ್ರಬಲ ಸ್ಪರ್ಧೆಯನ್ನು ನಾವೂ ನೀಡುತ್ತೇವೆ. ಉತ್ತಮ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುತ್ತೇವೆ ಎಂದರು.
ವಿರೋಧ ಪಕ್ಷಗಳ ನಾಯಕರ ಬಗ್ಗೆ ನಾನು ಎಲ್ಲಿಯೂ ಟೀಕೆ ಮಾಡುವುದಿಲ್ಲ. ಅವರು ಮೂಲೆಗುಂಪು ಆಗಿರಬೇಕಾದರೆ ನಾನು ಯಾಕೆ ಅವರ ಬಗ್ಗೆ ಸುಮ್ಮನೆ ಮಾತಾಡಲಿ ಎಂದು ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಆಯನೂರು ಮಂಜುನಾಥ್ ಶಿವಮೊಗ್ಗ ಟಿಕೆಟ್ ಕೇಳಿದ್ದಾರೆ. ಟಿಕೆಟ್ ಕೇಳಿರುವುದರಲ್ಲಿ ತಪ್ಪಿಲ್ಲ. ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡ್ತಾರೆ. ಆಯನೂರು ಮಂಜುನಾಥ್ ಕಾಂಗ್ರೆಸ್ ಗೆ ಹೋಗುವ ವಾತಾವರಣವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಉತ್ತರಿಸಿದ ಬಿಎಸ್ವೈ, ಇದೆಲ್ಲವನ್ನೂ ನಾನು ತೀರ್ಮಾನ ಮಾಡುವುದಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಸದ್ಯದಲ್ಲೇ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಇದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಭಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ನ್ಯಾಯ ಒದಗಿಲು ಕಾಂತಿಕಾರಿ ನಿರ್ಧಾರ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಲಂಬಾಣಿ ಅಭಿವೃದ್ಧಿ ನಿಗಮ ,ತಂಡಾ ಅಭಿವೃದ್ಧಿ ನಿಗಮ .ನನಗೆ ಭಾರಿ ನೆಮ್ಮದಿ ತಂದ ಬಾಗ್ಯ ಲಕ್ಷ್ಮಿ ಯೋಜನೆಯಿಂದ ಇನ್ನು ಕೆಲವೇ ತಿಂಗಳಲ್ಲಿ ಸುಮಾರು 8ಲಕ್ಷ ಕ್ಕೂ ಹುಚ್ಚು ಕುಟುಂಬಕ್ಕೆ ಇದರ ಪ್ರಯೋಜನ ಸಿಗಲಿದೆ ಎಂದರು.
ಮುಸ್ಲಿಮರಿಗೆ ಅನ್ಯಾಯವಾಗಿಲ್ಲ: ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಮುಸ್ಲಿಂ ಬಾಂಧವರಲ್ಲಿ ನಾನು ಸ್ಪಷ್ಟಪಡಿಸುವುದೇನೆಂದರೆ, ನಿಮಗೆ ಯಾವುದೇ ಅನ್ಯಾಯವಾಗಿಲ್ಲ. ತಪ್ಪು ಗ್ರಹಿಕೆಯಿಂದ ಗೊಂದಲಕ್ಕೀಡಾಗಬೇಡಿ, ಇಡಬ್ಲ್ಯುಎಸ್ನಡಿ ನಿಮಗೆ ಮೀಸಲಾತಿ ಸಿಗಲಿದೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಿಎಸ್ವೈ ಮನವಿ ಮಾಡಿದರು. ಗೋಷ್ಠಿಯಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇದ್ದರು.