ಕ್ಯಾನ್ಸರ್ ಚಿಕಿತ್ಸೆಗೆ ಕಾರ್ಟಿ ಕಂಪನಿಗಳು ಅಗತ್ಯ: ಸಿದ್ಧಾರ್ಥ ಮುಖರ್ಜಿ

ಬೆಂಗಳೂರು: ಕ್ಯಾನ್ಸರ್ ಬಾಧೆಗೆ ಪರಿಣಾಮಕಾರಿ ಚಿಕಿತ್ಸೆಯು ಜನರ ಕೈಗೆಟುಕಬೇಕಾದರೆ ದೇಶದಲ್ಲಿ ಕಾರ್ಟಿ ಕಂಪನಿಗಳು ಸ್ಥಾಪನೆಯಾಗಬೇಕು ಎಂದು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ವೈದ್ಯವಿಜ್ಞಾನ ಲೇಖಕ ಡಾ. ಸಿದ್ಧಾರ್ಥ ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಗುರುವಾರ ವರ್ಚುಯಲ್ ರೂಪದಲ್ಲಿ ಮಾತನಾಡಿದ ಅವರು, ಪಕ್ಕದ ಚೀನಾದಲ್ಲಿ ಇಂತಹ 300 ಕಂಪನಿಗಳಿದ್ದು, ಅಮೆರಿಕದಲ್ಲಿ ನೂರಾರು ಉದ್ದಿಮೆಗಳಿವೆ. ಆದರೆ, ಐಟಿ ವಲಯದಲ್ಲಿ ಜಗತ್ತಿಗೇ ಮಾದರಿಯಾಗಿರುವ ಭಾರತದಲ್ಲಿ ಕಾರ್ಟಿ ಕಂಪನಿಗಳು ಇಲ್ಲದಿರುವುದು ನೋವಿನ ಸಂಗತಿ ಎಂದರು.

ಭಾರತವು ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪರಿಣತಿ ಸಾಧಿಸಿರುವುದು ನಿಜ. ಆದರೆ ಇಲ್ಲಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳೂ ಹೆಚ್ಚಾಗಿದ್ದು, ಇದಕ್ಕೆ ಕೈಗೆಟುಕುವಂತಹ ಚಿಕಿತ್ಸೆ ಸಿಕ್ಕುತ್ತಿಲ್ಲ. ಇದಕ್ಕಾಗಿ ಎಲ್ಲರೂ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗಳಿಗೆ ಹೋಗುವುದು ಸಾಧ್ಯವಿಲ್ಲ. ಆದ್ದರಿಂದ ನಮ್ಮಲ್ಲಿ ವ್ಯವಸ್ಥೆ ಮತ್ತು ಶೋಧನಾ ನಿಧಿ ಹೂಡಿಕೆದಾರರ ಮನೋಭಾವನೆ ಬದಲಾಗಬೇಕಾದ ಜರೂರಿದೆ ಎಂದು ಅವರು ಹೇಳಿದರು.

ಯಾವ ಚಿಕಿತ್ಸಾ ಕ್ರಮಗಳೂ ಇದ್ದಕ್ಕಿದ್ದಂತೆ ಬರುವುದಿಲ್ಲ. ಒಂದೊಂದರ ಹಿಂದೆಯೂ 25-30 ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಬದ್ಧತೆ ಇದೆ. ಇವೆಲ್ಲ ಬರೀ ಪ್ರಯೋಗಾಲಯಗಳಲ್ಲೇ ಉಳಿದರೆ ವ್ಯರ್ಥ. ಅಮೆರಿಕದಲ್ಲಿ ಒಂದು ಡೋಸ್ ಕಾರ್ಟಿ ಥೆರಪಿಗೆ 4-5 ಸಾವಿರ ಡಾಲರ್ ಆಗುತ್ತದೆ. ಅಲ್ಲಿಯ ಶ್ರೀಮಂತರಿಗೂ ಇದು ಕೈಗೆಟುಕುವುದಿಲ್ಲ. ಆದ್ದರಿಂದ ಚಿಕಿತ್ಸೆಗಳು ಜನರಿಗೆ ಅಗ್ಗದ ದರದಲ್ಲಿ ಸಿಗಬೇಕಾಗಿದೆ.- ಡಾ.ಸಿದ್ಧಾರ್ಥ ಮುಖರ್ಜಿ, ಪುಲಿಟರ್ಜರ್ ಪುರಸ್ಕೃತ ವೈದ್ಯಕೀಯ ಲೇಖಕ

× Chat with us