ಬೆಂಗಳೂರು- ಪರೇಶ್ ಮೆಸ್ತಾ ಸಾವಿನ ಪ್ರಕರಣದಲ್ಲಿ ಸುಳ್ಳು ಪ್ರಚಾರ ಮಾಡಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನೆಡೆಯುಂಟು ಮಾಡಿದ್ದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್, ಇಂದು ಕುಮುಟಾದಲ್ಲಿ ಜನ ಜಾಗೃತಿ ಸಮಾವೇಶ ಆಯೋಜಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ನಾಯಕರು ನಾಳೆ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಮೂಲಕ ಬಿಜೆಪಿ ಸುಳ್ಳು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಾನಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಕುಮುಟಾದಲ್ಲಿ ಸಂಭವಿಸಿದ್ದ ಮೆಸ್ತಾ ಸಾವಿನ ಕುರಿತು ಅದೇ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಿಬಿಐ ತನಿಖಾ ವರದಿ ಕಾಂಗ್ರೆಸ್ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಬಲ ಅಸ್ತ್ರವಾಗಿದೆ. ಮೆಸ್ತಾ ಮಾದರಿಯಲ್ಲೇ ನಡೆದ ಹಲವು ಪ್ರಕರಣಗಳಲ್ಲಿ ಸತ್ಯ ಶೋಧನಾ ವರದಿ ಆಧರಿಸಿ ಜನ ಜಾಗೃತಿ ಮೂಡಿಸಲು ಪಕ್ಷ ಚಿಂತನೆ ನಡೆಸಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪರೇಶ್ ಮೆಸ್ತಾ ಸಾವಿನ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಹಿಂದು ಸಂಘಟನೆಗಳ ಕಾರ್ಯಕರ್ತರ ಸರಣಿ ಕೊಲೆಗಳಾಗುತ್ತಿವೆ. ಪಿಎಫ್ಐ ಸೇರಿದಂತೆ ಮೂಲಭೂತವಾದಿ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಗಳ ಕೊಲೆಗೆ ಪರೋಕ್ಷವಾಗಿ ಕಾರಣವಾಗಿದೆ ಎಂದು ಪ್ರಚಾರ ನಡೆಸಲಾಯಿತು.
ಅದರಲ್ಲೂ ಪರೇಶ್ ಮೆಸ್ತಾ ಸಾವನ್ನು ಭೀಕರ ಕೊಲೆ ಎಂದು ಬಿಂಬಿಸಲಾಗಿತ್ತು. ಪಿಎಫ್ಐ ಪ್ರೇರಿತ ದುಷ್ಕರ್ಮಿಗಳು ಪರೇಶ್ ಮೆಸ್ತಾನನ್ನು ಅಪಹರಣ ಮಾಡಿ, ಜೈಶ್ರೀರಾಮ್ ಎಂದು ಹಚ್ಚೆ ಹಾಕಿಸಿದ್ದ ಕೈ ಕತ್ತರಿಸಿ, ಕಣ್ಣು ಕಿತ್ತು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಬಿಜೆಪಿಯ ಪ್ರಭಾವಿ ನಾಯಕರು ಪತ್ರಿಕಾಗೋಷ್ಟಿ ನಡೆಸಿ ಆರೋಪಿಸಿದ್ದರು. ಇದು ಆಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ತೀವ್ರ ಹಿನ್ನೆಡೆ ಮಾಡಿತ್ತು. ಮುಜುಗರ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಸುದೀರ್ಘ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ ಪರೇಶ್ ಮೆಸ್ತಾ ಸಾವು ಕೊಲೆಯಲ್ಲ, ನೀರಿನಲ್ಲಿ ಮುಳುಗಿದ್ದರಿಂದ ಸಂಭವಿಸಿದೆ. ಆತನ ಶವ ಪತ್ತೆಯದ ಕೆರೆಯ ನೀರು ಮತ್ತು ಶವದ ಶಾಶ್ವಕೋಶದಲ್ಲಿದ್ದ ನೀರು ಒಂದೇ ಎಂದು ಖಚಿತ ಪಡಿಸಿತ್ತು. ಬಿಜೆಪಿಯ ನಾಯಕರು ಆರೋಪಿಸಿದಂತೆ ಕೈ ಕತ್ತರಿಸಿರುವುದಾಗಲಿ, ಕಣ್ಣು ಕಿತ್ತುರುವ ಬಗ್ಗೆಯಾಗಲಿ ತನಿಖಾ ವರದಿಯಲ್ಲಿ ಖಾತ್ರಿಯಾಗಿರಲಿಲ್ಲ.
ಸಿಬಿಐ ವರದಿ ಸಲ್ಲಿಕೆಯ ಬೆನ್ನಲ್ಲೆ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿ ಸತ್ಯಾಂಶವನ್ನು ತಿಳಿಸುವ ಪ್ರಯತ್ನ ಮಾಡಿತ್ತು. ಅಷ್ಟಕ್ಕೂ ಸುಮ್ಮನಾಗದೆ ಎಲ್ಲಿ ಘಟನೆ ನಡೆದಿದೆಯೋ ಅಲ್ಲೇ ಸಮಾವೇಶ ಮಾಡಿ, ಮತ್ತಷ್ಟು ಮಾಹಿತಿಯನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.
ಮೆಸ್ತಾ ಸಾವಿನ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕರ ವಿರುದ್ಧ ದೂರು ನೀಡುವುದಾಗಿ ಕಾಂಗ್ರೆಸ್ ಸ್ಪಷ್ಟ ಪಡಿಸಿತ್ತು. ಆದರೆ ಈವರೆಗೂ ಆ ಕೆಲಸ ಆಗಿಲ್ಲ. ಅತ್ತ ಬಿಜೆಪಿ ಸಿಬಿಐ ತನಿಖೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿ, ಮರು ತನಿಖೆಗೆ ಮನವಿ ಮಾಡುವುದಾಗಿ ತಿಳಿಸಿತ್ತು. ಆ ಪ್ರಯತ್ನವೂ ಆಗಿಲ್ಲ. ಕೆಲ ಕಾಲ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿ, ಭಾವನಾತ್ಮಕ ಹಾಗೂ ಪ್ರಚೋದನಾಕಾರಿ ವಾತವರಣ ಮೂಡಿಸಿದ್ದ ಮೆಸ್ತಾ ಸಾವು ಮತ್ತು ಬಳಿಕದ ಸಿಬಿಐ ವರದಿ ಕುರಿತು ರಾಜಕೀಯ ಪಕ್ಷಗಳು ತಮ್ಮ ಮಾತಿನಂತೆ ನಡೆದುಕೊಂಡಿಲ್ಲ.
ಬದಲಾಗಿ ಜನತಾ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿವೆ. ನಾಳೆ ಕುಮುಟಾದಲ್ಲಿ ನಡೆಯುವ ಕಾಂಗ್ರೆಸ್ನ ಜನ ಜಾಗೃತಿ ಸಮಾವೇಶದಲ್ಲಿ ಮೆಸ್ತಾ ಸಾವಿನ ಪ್ರಕರಣ ಪ್ರಮುಖ ಚರ್ಚೆಯ ವಿಷಯವಾಗಲಿದೆ. ಬಿಜೆಪಿಯ ಅಪಪ್ರಚಾರಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಾಕಷ್ಟು ತಯಾರಿ ನಡೆಸಿದೆ. ಬಿಜೆಪಿಯ ಭದ್ರಕೋಟೆ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೂಕ್ಷ್ಮ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ಯುವಕರು ದಾರಿ ತಪ್ಪದಂತೆ ಜಾಗೃತಿ ಮೂಡಿಸುವುದು ಕಾಂಗ್ರೆಸ್ನ ಮೂಲ ಉದ್ದೇಶ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜನರ ಮನ ಗೆಲ್ಲಲ್ಲು ರಾಜಕೀಯ ಪಕ್ಷಗಳು ಭಾರೀ ಕಸರತ್ತನ್ನೇ ಆರಂಭಿಸಿವೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.