ಬೆಂಗಳೂರು: ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಿಸಬೇಕು ಎಂಬುದು ಡಾ. ಶಾಮನೂರು ಶಿವಶಂಕರಪ್ಪ ಆಶಯವಾಗಿತ್ತು, ಈ ಕನಸು ನನಸು ಮಾಡಲು ನಾವು ಬದ್ಧ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ತರಳಬಾಳು ಭವನದಲ್ಲಿ ಆಯೋಜಿಸಿದ್ದ ಡಾ. ಶಾಮನೂರು ಶಿವಶಂಕರಪ್ಪ ನುಡಿನಮನದಲ್ಲಿ ಮಾತನಾಡಿದ ಅವರು, ಇದಕ್ಕಾಗಿ 2 ಎಕರೆ ಜಮೀನು ಖರೀದಿಸಲಾಗಿದ್ದು, ರೂಪುರೇಶೆ ಸಿದ್ಧವಾಗಿದೆ ಎಂದರು.
ಮೂರು ಅವಧಿಗೆ ಸತತ ಹದಿಮೂರೂವರೆ ವರ್ಷ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅವರು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಬದುಕಿ, ಪ್ರೀತಿಯ ಅಪ್ಪಾಜಿಯಾಗಿದ್ದರು. ಅವರ ಜೀವನೋತ್ಸಾಹ ಎಲ್ಲರಿಗೂ ಮಾದರಿ ಎಂದರು.
ಆಡಳಿತ ಪಕ್ಷದಲ್ಲೇ ಇರಲಿ, ವಿರೋಧ ಪಕ್ಷದಲ್ಲೇ ಇರಲಿ, ಯಾರಿಗೂ ಅಂಜದ ಅಳುಕದೆ ಸಮಾಜದ ಹಿತ ಕಾಯುವ ವಿಚಾರದಲ್ಲಿ ನಿರ್ಭಯವಾಗಿ, ನಿಷ್ಠುರವಾಗಿ ಮಾತನಾಡುತ್ತಿದ್ದರು. ತಮ್ಮ ತಂದೆ ಡಾ. ಭೀಮಣ್ಣ ಖಂಡ್ರೆ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಮಹಾಸಭಾದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಸಂಸ್ಥಾನಗಳು ಹುಟ್ಟುತ್ತವೆ ಅಳಿಯುತ್ತವೆ. ಮನುಷ್ಯ ಹುಟ್ಟುತ್ತಾನೆ ಸಾಯುತ್ತಾನೆ. ಆದರೆ ಹುಟ್ಟು ಸಾವಿನ ನಡುವಿನ ಅವಧಿಯಲ್ಲಿ ಮಾಡಿದ ಕಾರ್ಯ ಶಾಶ್ವತವಾಗಿರುತ್ತದೆ. ಇಂತಹ ಸಾಧಕರಲ್ಲಿ ಶಿವಶಂಕರಪ್ಪ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು.
ತುಮಕೂರು ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರಲ್ಲಿ ಧನ ಶ್ರೀಮಂತಿಕೆಯ ಜೊತೆಗೆ ಹೃದಯ ಶ್ರೀಮಂತಿಕೆ ದೊಡ್ಡದಾಗಿತ್ತು. ಸಾಮಾನ್ಯ ವ್ಯಾಪಾರಿಗಳ ಕುಟುಂಬದಲ್ಲಿ ಹುಟ್ಟಿ, ಉದ್ಯಮಿಯಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅವರು ಈ ನಾಡಿಗೆ ನೀಡಿರುವ ಕೊಡುಗೆ ಅಪಾರವಾದ್ದು ಎಂದರು.
ಸತ್ತಾಗ ಉಸಿರುವುದಿಲ್ಲ ಆದರೆ ಹೆಸರು ಉಳಿಯಬೇಕು ಎಂದು ಹೇಳಿದ ಅವರು, ಬಸವಣ್ಣನವರ ಮಾತಿನಂತೆ ಬಾಗಿದ ತಲೆ, ಮುಗಿದ ಕೈಗೆ ಅನುರೂಪರಾಗಿದ್ದ ಶಿವಶಂಕರಪ್ಪ ಅವರು ಸಿದ್ಧಿಯೊಂದಿಗೆ ಸಾಧನೆ ಮಾಡಿದ ಪರಿಶ್ರಮಿ. ನಿರಂತರ ಪರಿಶ್ರಮದಿಂದ ಅವರು ಶಿಕ್ಷಣ, ಉದ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿದು, ದಾವಣಗೆರೆಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು ಎಂದರು.
ಇದನ್ನೂ ಓದಿ:-ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಶಿವಶಂಕರಪ್ಪ ಅವರು ಒಂದು ಸಮುದಾಯದ ಪ್ರಾತಿನಿಧಿಕ ವ್ಯಕ್ತಿಯಾಗಿ ಬದುಕಿದವರು, ತಮ್ಮ ಪಾಲಿಗೆ ಬಂದ ಕಾಯಕವನ್ನು ಸಮರ್ಥವಾಗಿ ನಿರ್ವಹಿಸಿದ ಮೇರು ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.
ಕೈಗಾರಿಕಾ ನಗರವನ್ನು ಜ್ಞಾನಕಾಶಿಯಾಗಿ ಪರಿವರ್ತಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ. ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು ಅಜಾತಶತ್ರುವಾಗಿದ್ದರು. ಪಕ್ಷಭೇದ ಮರೆತು ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಿದ್ದರು ಎಂದರು.
ವೀರಶೈವ ಲಿಂಗಾಯತ ಮಹಾಸಭಾ ನಿಕಟಪೂರ್ವ ಅಧ್ಯಕ್ಷರಾದ ಶತಾಯುಷಿ ಭೀಮಣ್ಣ ಖಂಡ್ರೆ ಅವರು ಭೀಷ್ಮಾಚಾರ್ಯರಂತಿದ್ದರು, ಅವರ ಮಾರ್ಗದರ್ಶನದಲ್ಲಿ ಶಿವಶಂಕರಪ್ಪ ಅವರು ಸಮಾಜಕ್ಕೆ ಮತ್ತು ಸಭಾ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದರು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಬದುಕನ್ನು ಪ್ರೀತಿಸುತ್ತಿದ್ದರು, ಮನಃಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡರು. ಅವರು ತಮ್ಮ ಜೀವನದಲ್ಲಿ ಅಂದುಕೊಂಡ ಎಲ್ಲವನ್ನೂ ಮಾಡಿ ತೋರಿಸಿದರು ಎಂದರು.
ಡಾ. ಶಂಕರ ಬಿದರಿ ನುಡಿನಮನ ಸಲ್ಲಿಸಿ ಶಿವಶಂಕರಪ್ಪ ಅವರು, ಯಾರ ಬಗ್ಗೆಯೂ ಕಟುವಾಗಿ ಮಾತನಾಡಿದವರಲ್ಲ, ಹೃದಯ ವೈಶಾಲ್ಯದ ಸಜ್ಜನ ಉದ್ಯಮಿ, ರಾಜಕಾರಣಿಯಾಗಿದ್ದರು. ಅವರು ಜನರೊಂದಿಗೆ ಹೊಂದಿದ್ದ ಬಾಂಧವ್ಯ ಅನುಪಮವಾದದ್ದು ಎಂದರು.
ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣ ಪ್ರಕಾಶ್ ಪಾಟೀಲ್, ರಾಣಿ ಸತೀಶ್, ಚರಂತಿಮಠ, ಪ್ರಭಾಕರ ಕೋರೆ, ಲೀಲಾದೇವಿ ಆರ್. ಪ್ರಸಾದ್, ಜಿ.ಎಸ್. ಪಾಟೀಲ್, ಶಶೀಲ್ ನಮೋಶಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಆರ್. ಪಾಟೀಲ್, ಅಶೋಕ್ ಪಟ್ಟಣ್ಣ, ತಮ್ಮಯ್ಯ ಮುಖಂಡರಾದ ರಾಜಶೇಖರ ಪಾಟೀಲ್ ಹುಮನಾಬಾದ್, ಚಂದ್ರಶೇಖರ ಪಾಟೀಲ್, ಅಮರೇಗೌಡ ಬಯ್ಯಾಪುರ, ವೀಣಾ ಕಾಶೆಪ್ಪನವರ್ ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…