ಕಳಂಕ ನಿವಾರಣೆಗೆ ಕಾಂಗ್ರೆಸ್ ಮುಖಂಡರಿಂದ ಆಯೋಜನೆ
ಬೆಂಗಳೂರು: ಲಿಂಗಾಯತರು ಮತ್ತು ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ವಿಚಾರ ೨೦೧೮ರಲ್ಲಿ ಕಾಂಗ್ರೆಸ್ನ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ, ೨೦೨೩ ರ ವಿಧಾನಸಭಾ ಚುನಾವಣೆಗೆ ಸಹಾಯ ಮಾಡಲು ಹಾಗೂ ಪಕ್ಷಕ್ಕೆ ಅಂಟಿರುವ ಕಳಂಕ ನಿವಾರಣೆಗೆ ಮುಖಂಡರು ಮುಂದಾಗಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದಲ್ಲಿ ವೀರಶೈವ-ಲಿಂಗಾಯತ ಎಂದು ಎರಡೂ ಸಮುದಾಯಗಳಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸಲಾಗುವುದು.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಲಿಂಗಾಯತರಿಗೆ (ವೀರಶೈವರನ್ನು ಹೊರತುಪಡಿಸಿ) ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ಯತ್ನಿಸಿ ವಿಫಲರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಸಮಾವೇಶದಲ್ಲಿ ಸಮುದಾಯದ ದೊಡ್ಡ ನಾಯಕರನ್ನಾಗಿ ಬಿಂಬಿಸುವ ಸಾಧ್ಯತೆಯಿದೆ.
೨೦೧೭-೧೮ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಧರ್ಮದ ವಿವಾದ ಭುಗಿಲೆದ್ದಿತ್ತು. ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ ಲಿಂಗಾಯತ ಸಮುದಾಯವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇಬ್ಬರೂ ನಾಯಕರು ಬೇರೆ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂಬ ಚಿಂತನೆಯನ್ನು ಹೋಗಲಾಡಿಸಲು ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಸಮಾಜದ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಾವೇಶ ೨೦೨೩ರ ವಿಧಾನಸಭಾ ಚುನಾವಣೆುಂಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.