ನಗರಾಭಿವೃದ್ಧಿ ಪ್ರಾಧಿಕಾರದಿಂದ ಒತ್ತುವರಿ ತೆರವು ಕಾರ್ಯ ಆರಂಭ: 170 ಕೋಟಿ ರೂ. ಮೌಲ್ಯದ 163 ನಿವೇಶನ ಮುಡಾ ವಶಕ್ಕೆ

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದಿಂದ ಒತ್ತುವರಿ ತೆರವು ಕಾರ್ಯ ಆರಂಭವಾಗಿದೆ. ಮೈಸೂರು ಕಸಬಾ ಹೋಬಳಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ, ವಿಜಯನಗರ 4ನೇ ಹಂತದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಒಟ್ಟು 170 ಕೋಟಿ ರೂ. ಮೌಲ್ಯದ 163 ನಿವೇಶನವನ್ನು ಮುಡಾ ವಶಕ್ಕೆ ಪಡೆದಿದೆ. 30X40 ವಿಸ್ತೀರ್ಣದ 19 ಸೈಟ್​, 20X30 ವಿಸ್ತೀರ್ಣದ 64 ಸೈಟ್​, 40X60 ವಿಸ್ತೀರ್ಣದ 35 ಸೈಟ್​, ಅನಿಮಿಯತ ಅಳತೆಯ 45 ಸೈಟ್ ಸೇರಿದಂತೆ​ 163 ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ನೂರು ಕೋಟಿ ಮೌಲ್ಯದ ಜಮೀನನ್ನು ಮುಡಾ ವಶಕ್ಕೆ ಪಡೆದಿತ್ತು. ಈಗ ಮತ್ತೆ ಮುಡಾ ಆಯುಕ್ತ ಡಿ.ಬಿ.ನಟೇಶ್​ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

ಈ ಹಿಂದೆ 100 ಕೋಟಿ ರೂ. ಮೌಲ್ಯದ 5.14 ಎಕರೆ ಒತ್ತುವರಿ ಜಾಗ ತೆರವು ಮಾಡಲಾಗಿತ್ತು
ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಮೈಸೂರು ಜಿಲ್ಲೆಯ ಬಸವನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದ ಜಾಗವನ್ನು ತೆರವು ಮಾಡಿ, ಜಮೀನಿನಲ್ಲಿ ಹಾಕಿದ್ದ ಶೆಡ್ ತೆಗೆದು ಮುಡಾ ನಾಮಫಲಕ ಅಳವಡಿಸಿದ್ದಾರೆ. ಸುಮಾರು 100 ಕೋಟಿ ರೂಪಾಯಿ ಮೌಲ್ಯದ 5.14 ಎಕರೆ ಒತ್ತುವರಿ ಜಾಗವನ್ನು ಡಿಸೆಂಬರ್ 19 ಅಧಿಕಾರಿಗಳು ತೆರವು ಮಾಡಿದ್ದರು.

ಬಸವನಹಳ್ಳಿ ಗ್ರಾಮದ ಮಹದೇವಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ತೆರವು ಕಾರ್ಯ ಆರಂಭಗೊಂಡಿದೆ. ಮಹದೇವಯ್ಯ ಜಮೀನು ಸ್ವಾಧೀನ ಮಾಡಿಕೊಂಡಿದ್ದರು. ಅಲ್ಲದೇ ಭೂಮಿ‌ ನೀಡದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಮುಡಾ ಪರ ಮೈಸೂರು ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಶೆಡ್ ತೆರವುಗೊಳಿಸಿ ಮುಡಾ ನಾಮಫಲಕ ಅಳವಡಿಸಲಾಗಿದೆ.

ಸರ್ವೇ ನಂ 118ರಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡಿದ್ದು, ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಎರಡು ಶೆಡ್​ಗಳನ್ನು ತೆರವು ಮಾಡಲಾಗಿದೆ. ಪೊಲೀಸ್ ಬಿಗಿ ಬಂದೊಬಸ್ತ್‌ನಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.

× Chat with us