ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ವಿಧಿ ತನ್ನ ಕ್ರೂರ ಅಟ್ಟಹಾಸ ಮೆರೆದಿದ್ದು, ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿ ಒಟ್ಟು 9 ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ತುಮಕೂರಿನ ಅಪಘಾತ ಸಾಕಷ್ಟು ದಿಗ್ಭ್ರಮೆ ಮೂಡಿಸಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನಗದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅಪಘಾತ ನಡೆದಿದ್ದು ಹೇಗೆ?
ರಾಯಚೂರು ಜಿಲ್ಲೆಯಿಂದ ನಿನ್ನೆ 24 ಜನರು ಹೊರಟಿದ್ದು, ಮಾರ್ಗಮಧ್ಯದಲ್ಲಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ಕ್ರೂಸರ್ ಚಾಲಕ ಲಾರಿವೊಂದನ್ನು ಓವರ್ ಟೇಕ್ ಮಾಡಲು ಹೋಗಿದ್ದು, ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್ ವಾಹನದ ಟೈರ್ ಸ್ಫೋಟಗೊಂಡು ಡಿವೈಡರ್ಗೆ ಡಿಕ್ಕಿ ಹೊಡಿದಿದೆ. ಹುಬ್ಬಳ್ಳಿಯಿಂದ ತಮಿಳುನಾಡಿನ ಕೊಯಂಬತ್ತೂರಿಗೆ ಲಾರಿ ತೆರಳುತ್ತಿತ್ತು. ತಮಿಳುನಾಡಿನ ನೋಂದಣಿ ಸಂಖ್ಯೆಯನ್ನು ಲಾರಿ ಹೊಂದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
— Basavaraj S Bommai (@BSBommai) August 25, 2022