ಬೆಂಗಳೂರು: ಕುಮಾರ ಪರ್ವತ ಸೇರಿದಂತೆ ರಾಜ್ಯದ ಕೆಲವು ಅರಣ್ಯ ಪ್ರದೇಶಗಳಲ್ಲಿ ಇಂದಿನಿಂದ(ಸೆ.3) ಚಾರಣಕ್ಕೆ ಅನುಮತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಆನ್ ಲೈನ್ ನಲ್ಲಿ ಚಾರಣ ಪಥಗಳ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸುವ https://aranyavihaara.karnataka.gov.in ವೆಬ್ ಸೈಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದೆ. ಆದರೆ, ಇದರಿಂದ ಪರಿಸರಕ್ಕೆ ಹಾನಿ ಆಗಬಾರದು ಎಂಬುದು ಸರ್ಕಾರದ ಕಾಳಜಿಯಾಗಿದ್ದು, ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ.
ಕಳೆದ ಜನವರಿ 26, 27ರಂದು ಕುಮಾರಪರ್ವತಕ್ಕೆ 5-6 ಸಾವಿರ ಪ್ರವಾಸಿಗರು ಒಂದೇ ದಿನ ಆಗಮಿಸಿದ ಹಿನ್ನೆಲೆಯಲ್ಲಿ ಗೊಂದಲ ಆಗಿತ್ತು. ಇಂತಹ ಗೊಂದಲ ನಿವಾರಿಸಲು ಚಾರಣಿಗರ ಸಂಖ್ಯೆಗೆ ಮಿತಿ ವಿಧಿಸಲಾಗಿದೆ ಎಂದರು.
ಈ ಅಂತರ್ಜಾಲ ತಾಣದಲ್ಲಿ ರಾಜ್ಯ ಎಲ್ಲ ಚಾರಣ ಪಥಗಳ ಟಿಕೆಟ್ ಅನ್ನೂ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್ ಸಿಗದವರು ಬೇರೆ ಚಾರಣಪಥವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ 5 ತಾಣಗಳಿಗೆ ಅಂದರೆ ಕುಮಾರ ಪರ್ವತದಿಂದ ಸುಬ್ರಹ್ಮಣ್ಯ, ಬೀದಹಳ್ಳಿಯಿಂದ – ಕುಮಾರ ಪರ್ವತ, ಬೀದಹಳ್ಳಿ -ಕುಮಾರ ಪರ್ವತ – ಸುಬ್ರಹ್ಮಣ್ಯ, ಚಾಮರಾಜನಗರ – ನಾಗಮಲೈ, ತಲಕಾವೇರಿಯಿಂದ-ನಿಶಾನೆಮೊಟ್ಟೆ ಚಾರಣ ತಾಣಗಳಿಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಈ ಮಾಸಾಂತ್ಯದೊಳಗೆ 40 ಚಾರಣ ಪಥಗಳನ್ನು ಈ ಅಂತರ್ಜಾಲ ತಾಣದಲ್ಲಿ ಸೇರಿಸಲಾಗುವುದು. ಜೊತೆಗೆ ವನ್ಯಜೀವಿ ಸಫಾರಿ ಮತ್ತು ಬೋಟ್ ಸಫಾರಿಗೂ ಇದರಲ್ಲೇ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಒಂದು ಫೋನ್ ನಂಬರ್ ನಲ್ಲಿ 10 ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು, 7 ದಿನ ಮೊದಲು ರದ್ದು ಮಾಡಿದರೆ ಪೂರ್ಣ ಹಣ ಮರಳಿಸಲು ಅವಕಾಶ ಇರುತ್ತದೆ. ನಂತರದ ರದ್ದತಿಗೆ ಪೂರ್ಣ ಹಣ ಸಿಗುವುದಿಲ್ಲ, ಭಾಗಶಃ ಕಡಿತ ಮಾಡಲಾಗುವುದು ಎಂದರು.
ಅಂತರ್ಜಾಲ ತಾಣದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳ ಚಿತ್ರ, ಅವುಗಳ ವಿಶೇಷ ಕುರಿತಂತೆ ಸಂಕ್ಷಿಪ್ತ ಮಾಹಿತಿ ಒದಗಿಸಲಾಗಿದೆ. ಇದರಿಂದ ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಮಾಹಿತಿಯೂ ಲಭಿಸುತ್ತದೆ. ಟಿಕೆಟ್ ಅನ್ನು ಮುಂಗಡ ಕಾಯ್ದಿರಿಸಲು ಅವಕಾಶವೂ ಆಗುತ್ತದೆ ಎಂದರು.
ಮುಂಗಾರು ಮಳೆ ಸುರಿಯುವ ಸಮಯದಲ್ಲಿ ಚಾರಣ ಮಾಡುವುದು ಸೂಕ್ತವಲ್ಲ. ಅನುಭವ ಇಲ್ಲದ ಚಾರಣಿಗರು ಜಾರಿ ಬೀಳುವ ಅಪಾಯ ಇರುತ್ತದೆ. ಜೊತೆಗೆ ಕೀಟ, ಜೀವ ಜಂತುಗಳಿಗೂ ತೊಂದರೆ ಆಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಚಾರಣ ನಿರ್ಬಂಧಿಸುವುದು ಒಂದು ಕಾರಣವಾಗಿತ್ತು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಅಕ್ರಮಕ್ಕೆ ಕಡಿವಾಣ
ಈ ಚಾರಣ ಪಥಗಳ ಟಿಕೆಟ್ ಅನ್ನು ಚಾರಣ ಏರ್ಪಡಿಸುವ ಕೆಲವು ಖಾಸಗಿ ಸಂಸ್ಥೆಗಳು ಸಗಟು ಖರೀದಿ ಮಾಡುತ್ತವೆ. ಹೀಗಾಗಿ ನೈಜ ಚಾರಣಿಗರಿಗೆ ಟಿಕೆಟ್ ಲಭಿಸದಂತಾಗಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸರ್ಕಾರದ ಭಾವಚಿತ್ರ ಸಹಿತ ಗುರುತಿನ ಚೀಟಿ ಅಪ್ ಲೋಡ್ ಮಾಡಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೈಡ್ ಸೌಲಭ್ಯ
ಚಾರಣಕ್ಕೆ ಬರುವವರಿಗೆ ಆ ಗಿರಿ ಪ್ರದೇಶದಲ್ಲಿರುವ ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಪಕ್ಷಿ ಸಂಕುಲದ ಬಗ್ಗೆ ಮಾಹಿತಿ ನೀಡಲು ಮತ್ತು ಆ ಪ್ರದೇಶದ ಸಂಕ್ಷಿಪ್ತ ಇತಿಹಾಸ ತಿಳಿಸಲು ಹಾಗೂ ಚಾರಣದ ವೇಳೆ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಲು ಪ್ರತಿ 10 – 20 ಚಾರಣಿಗರಿಗೆ ಒಬ್ಬರಂತೆ ಗೈಡ್ ಗಳನ್ನೂ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಭಾಗವಾಗಿರುವ ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದ ಚಿಕ್ಕಬಳ್ಳಾಪುರದ ಸ್ಕಂದಗಿರಿ ಚಾರಣಪಥದಲ್ಲಿ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಬ್ಲಾಕ್ ಮಾಡಲು ಖಾಸಗಿ ಪ್ರವಾಸೋದ್ಯಮ ಸಂಸ್ಥೆಗಳೊಂದಿಗೆ ಕೆಲವು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ, ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ನಕಲಿ ಟಿಕೆಟ್ ಬಳಸಿ ಕಲವರು ಚಾರಣಕ್ಕೆ ಹೋಗುತ್ತಿದ್ದಾರೆ. ಕೆಲವು ಚಾರಣ ಪಥದಲ್ಲಿ ಸಿಬ್ಬಂದಿಯೇ ನಕಲಿ ಟಿಕೆಟ್ ಮಾಡಿಸಿ ಚಾರಣಿಗರಿಗೆ ಒಳ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪವೂ ಇದ್ದು, ಇದಕ್ಕಾಗಿ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಇರುವಂತೆ ಸಂಚಾರಿ ದಳ ರಚಿಸಲಾಗುವುದು. ಈ ಸಂಚಾರಿ ದಳ ಅನಿರೀಕ್ಷಿತವಾಗಿ ಚಾರಣ ಪಥಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ. ನಕಲಿ ಟಿಕೆಟ್ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧ – 2 ಹಂತದ ತಪಾಸಣೆ:
ಚಾರಣಪಥ ಮತ್ತು ಅರಣ್ಯದೊಳಗಿನ ರಸ್ತೆಯಲ್ಲಿ ಸಂಚರಿಸುವಾಗ ಪ್ಲಾಸ್ಟಿಕ್ ನೀರಿನ ಬಾಟಲಿ, ಕ್ಯಾರಿಬ್ಯಾಗ್, ತಿಂಡಿ ಪೊಟ್ಟಣ ಇತ್ಯಾದಿ ನಿಷೇಧಿಸಲಾಗುವುದು. ಕಾಡಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತು ಚಾರಣಕ್ಕೆ ಬರುವವರಿಗೆ ಮೊದಲ ಹಂತದಲ್ಲಿ ನಿಷೇಧಿತ ವಸ್ತುವನ್ನು ಸ್ವಯಂ ಕಸದ ಬುಟ್ಟಿಗೆ ಹಾಕಲು ತಿಳಿಸಲಾಗುವುದು. 2ನೇ ಹಂತದಲ್ಲಿ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್, ಮದ್ಯದ ಬಾಟಲಿ, ಸಿಗರೇಟ್, ಬೆಂಕಿಪೊಟ್ಟಣ ಇತ್ಯಾದಿ ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…